Advertisement

ಚರಂಡಿಗೆ ಸ್ಲ್ಯಾಬ್ ಅಳವಡಿಸಿ ರಸ್ತೆ ಅಗಲಗೊಳಿಸಿ

01:09 AM Feb 21, 2020 | Sriram |

ಕುಂದಾಪುರ: ಮೂವತ್ತಕ್ಕಿಂತ ಹೆಚ್ಚು ಮನೆಗಳಿರುವ ಆಶ್ರಯ ಕಾಲನಿಯಲ್ಲಿ ಒಳಚರಂಡಿ ಕಾಮಗಾರಿ ಪೂರ್ಣವಾಗಿಲ್ಲ. ಹಾಗಾಗಿ ತ್ಯಾಜ್ಯ ನೀರು ನಿಲ್ಲುತ್ತದೆ. ಸಂಜೆಯಾಗುತ್ತಲೇ ಸೊಳ್ಳೆಗಳ ಸಂಗೀತ ಕಛೇರಿ ಆರಂಭವಾಗುತ್ತದೆ. ಮೈಗೆ ಕೈಗೆ ಕಚ್ಚುತ್ತವೆ. ಅನಾರೋಗ್ಯ ಉಂಟಾದರೆ ಯಾರು ಹೊಣೆ. ಸ್ವತ್ಛತೆಯ ಕುರಿತು ಭಾಷಣ ಮಾಡಿ ಅದನ್ನು ಅನುಷ್ಠಾನ ಮಾಡದಿದ್ದರೆ ಹೇಗೆ ಎಂದು ಖಾರವಾಗಿಯೇ ಮಾತಿಗೆ ತೊಡಗುತ್ತಾರೆ ಟಿ.ಟಿ. ರೋಡ್‌ನ‌ ಆಶ್ರಯ ಕಾಲನಿಯ ಜನತೆ.

Advertisement

ಸುದಿನ ವಾರ್ಡ್‌ ಸುತ್ತಾಟ ಸಂದರ್ಭ ಇಲ್ಲಿನ ಜನರು ದೂರುಗಳ ಮೇಲೆ ದೂರು ಎಂಬಂತೆ ಹೇಳಿದ್ದು ಹೆಚ್ಚಾಗಿ ಚರಂಡಿ ಅವ್ಯವಸ್ಥೆ ಕುರಿತಾಗಿಯೇ. ಇಡೀ ವಾರ್ಡ್‌ನಲ್ಲಿ ಪ್ರಮುಖವಾಗಿ ಕೇಳಿ ಬಂದದ್ದು ಮೂರೇ ಸಮಸ್ಯೆ. ಚರಂಡಿಗೆ ಸ್ಲ್ಯಾಬ್ ಅಳವಡಿಸಬೇಕೆಂಬ ಬೇಡಿಕೆ, ರಸ್ತೆಗೆ ಇಂಟರ್‌ಲಾಕ್‌ ಹಾಕಬೇಕೆಂಬ ಮನವಿ, ಚರಂಡಿ ವ್ಯವಸ್ಥೆ ಸರಿಮಾಡಬೇಕೆಂಬ ಆಗ್ರಹ.

ಸ್ಲ್ಯಾಬ್ ಹಾಕಲಿ
ಟಿ.ಟಿ. ರೋಡ್‌ನ‌ ಉದ್ದಕ್ಕೂ ಒಳಚರಂಡಿ ಕಾಮಗಾರಿ ನೆಪದಲ್ಲಿ ರಸ್ತೆಯನ್ನು ಅಗೆದು ಹಾಳುಗೆಡವಲಾಗಿದೆ. ಮ್ಯಾನ್‌ಹೋಲ್ಗಳನ್ನು ರಸ್ತೆಯಿಂದ ಎತ್ತರಕ್ಕೆ ಅಳವಡಿಸಲಾಗಿದೆ. ಈ ರಸ್ತೆಯ ಪಕ್ಕದಲ್ಲಿ ಎರಡೂ ಬದಿ ಚರಂಡಿಯಿದ್ದು ಆದಕ್ಕೆ ಸ್ಲ್ಯಾಬ್ ಅಳವಡಿಸಿದರೆ ರಸ್ತೆ ಅಗಲವಾಗಲಿದೆ. ವಾಹನಗಳ ಓಡಾಟಕ್ಕೆ ಅನುಕೂಲವಾಗಲಿದೆ.

ರಸ್ತೆ ಬೇಕು
ಟಿ.ಟಿ. ರೋಡ್‌ ಕೊನೆಯಾಗುತ್ತಿದ್ದಂತೆ ದೊರೆಯುವ ದೇವಸ್ಥಾನದ ಸಮೀಪ ಅನೇಕ ಮನೆಗಳಿವೆ. ಇಲ್ಲಿಗೆ ಇಂಟರ್‌ಲಾಕ್‌ ಹಾಕಿದ ಅಥವಾ ಕಾಂಕ್ರಿಟ್‌ ರಸ್ತೆ ಬೇಕೆಂಬ ಬೇಡಿಕೆಯಿದೆ. ಕೈಪಾಡಿ ದೇವಸ್ಥಾನ ಬಳಿ, ಮೇಲ್‌ಗ‌ರಡಿ ದೇವಸ್ಥಾನ ಬಳಿ ರಸ್ತೆಗಳಿಗೆ ಇಂಟರ್‌ಲಾಕ್‌ ಹಾಕಿದರೆ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗುತ್ತದೆ.

ಹಾಳಾದ ಬಸ್‌
ಆಶ್ರಯ ಕಾಲನಿ ಬಳಿ ಒಂದು ಹಳೆಯ ಗುಜುರಿ ಬಸ್‌ ನಿಂತಿದೆ. ಇದು ಬ್ಯಾಂಕಿನವರು ಮುಟ್ಟುಗೋಲು ಹಾಕಿದ ಬಸ್‌ ಎನ್ನಲಾಗಿದೆ. ಈ ಬಸ್‌ ಉದ್ಯಾನವನದ ಸಮೀಪ ನಿಂತಿದ್ದು ಅನೈತಿಕ ಚಟುವಟಿಕೆಯ ಅಡ್ಡಾಗಿ ಪರಿಣಮಿಸಿದೆ. ಇದರ ಸಮೀಪ ಬಾವಿ, ಉಪಯೋಗವಿಲ್ಲದ ನೀರಿನ ಹಳೆಯ ಟ್ಯಾಂಕ್‌ ಒಂದು ಇದ್ದು ಅದನ್ನು ತೆರವುಗೊಳಿಸಬೇಕೆಂಬ ಬೇಡಿಕೆಯೂ ಇದೆ. ಇಲ್ಲದೇ ಇದ್ದಲ್ಲಿ ಅಪಾಯ ಸಂಭವಿಸಬಹುದು ಎಂಬ ಆತಂಕವಿದೆ. ಏಕೆಂದರೆ ಪಕ್ಕದಲ್ಲೇ ಶಾಲೆಯಿದೆ.

Advertisement

ನಾಯಿ ಕಾಟ
ಈ ಪರಿಸರದಲ್ಲಿ 15ಕ್ಕಿಂತ ಹೆಚ್ಚಿನ ಬೀದಿ ನಾಯಿಗಳಿವೆ. ಶಾಲಾ ಮಕ್ಕಳ ಓಡಾಟಕ್ಕೆ, ಹಿರಿಯ ನಾಗರಿಕರ ಓಡಾಟಕ್ಕೆ ಈ ನಾಯಿಗಳೇ ಭಯಾನಕಕಾರಿ. ಇವುಗಳನ್ನು ಹಿಡಿದು ಸಂತಾನ ಶಕ್ತಿಹರಣ ಚಿಕಿತ್ಸೆಗೆ ಒಳಪಡಿಸಬೇಕೆಂದು ಬೇಡಿಕೆ ಸ್ಥಳೀಯರದ್ದಾಗಿದೆ. ಏಕೆಂದರೆ ಆಗಾಗ ಈ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುತ್ತದೆ. ಇಲ್ಲಿನ ಶಾಲೆಗೆ 30ರಷ್ಟು, ಅಂಗನವಾಡಿಗೆ 30ರಷ್ಟು ಮಕ್ಕಳು ಬರುತ್ತಾರೆ. ಈ ಪರಿಸರದ ಮನೆಗಳಲ್ಲೂ ಮಕ್ಕಳಿದ್ದಾರೆ. ಅವರನ್ನು ಆಡಲು ಬಿಡಲು ನಾಯಿ ಗಳಿಂದಾಗಿ ಹೆದರಿಕೆಯಾಗುತ್ತದೆ ಎನ್ನುತ್ತಾರೆ ಮಹಿಳೆಯರು.

ಶೌಚಾಲಯ
ಬಸವೇಶ್ವರ ಯುವಕ ಮಂಡಲದ ಎದುರು ಪುರಸಭೆ ಕಟ್ಟಿಸಿದ ಸಾರ್ವಜನಿಕ ಶೌಚಾಲಯ ಇದೆ. ಇದರಲ್ಲಿ 2 ಶೌಚಾಲಯಗಳು ಸುಸ್ಥಿತಿಯಲ್ಲಿದ್ದು ಇನ್ನೆರಡು ಸುಸ್ಥಿತಿಯಲ್ಲಿ ಇಲ್ಲ. ಇದರ ನಿರ್ವಹಣೆ ಕಡೆಗೆ ಪುರಸಭೆ ಗಮನಕೊಟ್ಟಿಲ್ಲ. ತಿಂಗಳಿಗೊಮ್ಮೆಯಾದರೂ ಸರಿಪಡಿಸಬೇಕೆಂದು ಜನ ಕೇಳುತ್ತಿದ್ದಾರೆ. ಸದ್ಯ ಸ್ಥಳೀಯರೇ ಇದನ್ನು ನಿರ್ವಹಿಸಿದ್ದಾರೆ.

ನೀರಿಲ್ಲ
ಪುರಸಭೆ ನೀರಿನ ಸಂಪರ್ಕ ಇದೆ. ಆದರೆ ಅದು ಸಮಯಪಾಲನೆ ಆಗುತ್ತಿಲ್ಲ. ಪುರಸಭೆ ನೀರು ಸಮಯಕ್ಕೆ ಸರಿಯಾಗಿ ಬಂದರೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ನಳ್ಳಿ ಬುಡದಲ್ಲಿ ಕೊಡಪಾನ ಇಟ್ಟು ನೀರಿಗಾಗಿ ಕಾಯುವ ಸನ್ನಿವೇಶ ಉಂಟಾಗುತ್ತದೆ.

ಒಳಚರಂಡಿ ಮಾಡಲಿ
ಆಶ್ರಯ ಕಾಲನಿಯಲ್ಲಿ ಒಳಚರಂಡಿ ಕಾಮಗಾರಿ ಪೂಣರಗೊಳಿಸಬೇಕು. ಚರಂಡಿಯಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿದೆ. ವಾರ್ಡ್‌ನಿಂದ ಆಯ್ಕೆಯಾದವರು ಕನಿಷ್ಠ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ತಿಂಗಳಿಗೊಮ್ಮೆಯಾದರೂ ಜನರ ಸಮಸ್ಯೆ ಆಲಿಸಬೇಕು.
-ವಿ. ಉಮೇಶ್‌ ಆಶ್ರಯ ಕಾಲನಿ, ಟಿ.ಟಿ. ರೋಡ್‌

ಅಪಾಯಕಾರಿ ಟ್ಯಾಂಕ್‌ ತೆಗೆಯಲಿ
ಆಶ್ರಯ ಕಾಲನಿ ಬಳಿ ಪಾರ್ಕ್‌ ಸಮೀಪ ಅಪಾಯಕಾರಿ ಸ್ಥಿತಿಯಲ್ಲಿ, ಉಪಯೋಗವಿಲ್ಲದ ಹಳೆ ಟ್ಯಾಂಕ್‌ ಇದೆ. ಅದನ್ನು ತೆರವುಗೊಳಿಸಬೇಕು.
-ರೋಹಿತ್‌, ಟಿ.ಟಿ.ರೋಡ್‌

ಆಗಬೇಕಾದ್ದೇನು?
ಚರಂಡಿಗೆ ಸ್ಲ್ಯಾಬ್ ಅಳವಡಿಸಬೇಕು.
ಒಳಚರಂಡಿ ಕಾಮಗಾರಿ ನಡೆಸಬೇಕು.
ರಸ್ತೆಗಳಿಗೆ ಇಂಟರ್‌ಲಾಕ್‌ ಅಳವಡಿಕೆ.

ಕಾಮಗಾರಿ ನಡೆದಿದೆ
ಟಿ.ಟಿ.ರೋಡ್‌ ಪ್ರವೇಶಿಕೆಯಲ್ಲಿ 3.8 ಲಕ್ಷ ರೂ. ವೆಚ್ಚದಲ್ಲಿ ಚರಂಡಿಗೆ ಸ್ಲ್ಯಾಬ್ ಅಳವಡಿಸಲಾಗಿದೆ. ಆಶ್ರಯ ಕಾಲನಿ ಬಳಿಯ ಉದ್ಯಾನವನ ಅಭಿವೃದ್ಧಿಗೆ 5 ಲಕ್ಷ ರೂ. ಮೀಸಲಿಡಲಾಗಿದೆ. ವಿನಾಯಕದಿಂದ ಕೋಡಿಗೆ ಹೋಗುವ ರಸ್ತೆ ಬದಿ ಇಂಟರ್‌ಲಾಕ್‌ ಅಳವಡಿಸಬೇಕೆಂಬ ಬೇಡಿಕೆ ಇದೆ. ಜನರ ಬೇಡಿಕೆಗಳಿಗೆ ಯಥಾಸಾಧ್ಯ ಸ್ಪಂದಿಸಲಾಗುತ್ತಿದೆ. ಇದ್ದ ಅನುದಾನದಲ್ಲಿ ಕಾಮಗಾರಿಗಳನ್ನು ಮಾಡಲಾಗಿದ್ದು ಇನ್ನಷ್ಟು ಕಾಮಗಾರಿಗಳು ಆದ್ಯತೆ ನೆಲೆಯಲ್ಲಿ ಈಡೇರಿಕೆಯಾಗಲಿವೆ.
-ವೀಣಾ ಭಾಸ್ಕರ್‌,
ಸದಸ್ಯರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next