Advertisement

ಅಂಕಲ್‌ ಗೆಲ್ಲುವವರಾರು? ಅಮೆರಿಕ ಅಧ್ಯಕ್ಷರ ಆಯ್ಕೆಗೆ ನಡೆದಿದೆ ಮತ

10:13 AM Nov 03, 2020 | mahesh |

ವಾಷಿಂಗ್ಟನ್‌: ಕೋವಿಡ್ ಸೋಂಕಿನ ನಡುವೆಯೇ ಅಂಕಲ್‌ ಸ್ಯಾಮ್‌, ಜಾಗತಿಕ ಸೂಪರ್‌ಪವರ್‌ ಅಮೆರಿಕದಲ್ಲಿ 46ನೇ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆದಿದೆ. ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ಗೆ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡೆನ್‌ ಭಾರೀ ಸವಾಲೊಡ್ಡುತ್ತಿದ್ದಾರೆ. ಈ ಬಾರಿ ಯಾರು ಗೆಲ್ಲಲಿದ್ದಾರೆ ಎನ್ನುವ ಅಂಶ ಜಾಗತಿಕ ಭೂ-ರಾಜಕೀಯದ ಮೇಲೂ ಅಪಾರ ಪರಿಣಾಮ ಉಂಟುಮಾಡಲಿದೆ. ಫ‌ಲಿತಾಂಶವೆಂದಷ್ಟೇ ಅಲ್ಲ, ಅಮೆರಿಕದ ಚುನಾವಣ ಪ್ರಕ್ರಿಯೆಯೂ ಕುತೂಹಲಕಾರಿ. ಜಗತ್ತಿನಲ್ಲೇ ಅತ್ಯಂತ ವಿಶಿಷ್ಟವಾಗಿರುವ ಈ ಚುನಾವಣೆಯ ಬಗ್ಗೆ ಇಲ್ಲಿದೆ ಮಾಹಿತಿ…

Advertisement

ಈ ಚುನಾವಣೆಯ ಮುಖ್ಯ ಚರ್ಚೆಗಳು
ಕೋವಿಡ್‌-19 ಅಮೆರಿಕ ಜಾಗತಿಕ ಕೋವಿಡ್‌ ಹಾಟ್‌ಸ್ಪಾಟ್‌ ಆಗಲು ಟ್ರಂಪ್‌ ಅವರ ಬೇಜವಾಬ್ದಾರಿಯೇ ಕಾರಣ ಎಂದು ಬೈಡೆನ್‌ ಆರೋಪಿಸುತ್ತಿದ್ದಾರೆ. ಅತ್ತ ಟ್ರಂಪ್‌, ಚೀನವನ್ನು ಕಟಕಟೆಯಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ.

ಆರ್ಥಿಕತೆ
ಸಾಂಕ್ರಾಮಿಕದ ಪರಿಣಾಮವಾಗಿ ಫೆಬ್ರವರಿ -ಎಪ್ರಿಲ್‌ ತಿಂಗಳ ನಡುವೆ 2.2 ಕೋಟಿ ಉದ್ಯೋಗ ನಷ್ಟವಾಗಿದೆ. ಈಗ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ, ಸೆಪ್ಟಂಬರ್‌ ವೇಳೆಗೆ 77 ಲಕ್ಷ ಉದ್ಯೋಗ ಸೃಷ್ಟಿಸಿದ್ದೇವೆ ಎನ್ನುತ್ತಾರೆ ಟ್ರಂಪ್‌.

ರಾಷ್ಟ್ರೀಯ ಭದ್ರತೆ
ಕಳೆದ ಚುನಾವಣೆಯಲ್ಲಿ ರಷ್ಯಾ, ಇರಾನ್‌ ಮತ್ತು ಚೀನ ಸಾವಿರಾರು ಸುಳ್ಳು ಸುದ್ದಿಗಳನ್ನು ಹರಡಿ ಮತದಾರರ ಮೇಲೆ ಪರಿಣಾಮ ಬೀರಿದ್ದವು ಎನ್ನುವ ಆರೋಪ ಇತ್ತು. ಈ ಬಾರಿಯೂ ಅಂಥ ಆರೋಪ ಇದ್ದೇ ಇದೆ.

ಆರೋಗ್ಯ, ವಲಸಿಗರ ವಿಷಯ
ಒಬಾಮಾ ಅವಧಿಯಲ್ಲಿ ತರಲಾದ ಅಫೋರ್ಡೆಬಲ್‌ ಕೇರ್‌ ಆ್ಯಕ್ಟ್ (ಒಬಾಮಾಕೇರ್‌) ಅನ್ನು ರದ್ದುಗೊಳಿಸಲು ರಿಪಬ್ಲಿಕನ್‌ ಪಕ್ಷ ಬಯಸುತ್ತದೆ. ಬೈಡೆನ್‌ ತಾವು ಅಧಿಕಾರಕ್ಕೆ ಬಂದರೆ ಒಬಾಮಾಕೇರ್‌ ಅನ್ನು ಸದೃಢಗೊಳಿಸುವುದಾಗಿ ಹೇಳುತ್ತಾರೆ. ಅಕ್ರಮ ವಲಸಿಗರನ್ನು ಹೊರಹಾಕುತ್ತೇನೆ ಎಂಬ ಟ್ರಂಪ್‌ರ ಭರವಸೆ ಅಷ್ಟಾಗಿ ಈಡೇರಿಲ್ಲವಾದರೂ ಮೆಕ್ಸಿಕೋ ಗಡಿಯುದ್ದಕ್ಕೂ ಗೋಡೆ ನಿರ್ಮಿಸುವ ಕೆಲಸ ವೇಗ ಪಡೆದಿದೆ.

Advertisement

ಜನಾಂಗೀಯ ತಾರತಮ್ಯ
ಶ್ವೇತವರ್ಣೀಯ ಪೊಲೀಸ್‌ ಅಧಿಕಾರಿಯೊಬ್ಬ ಕಪ್ಪು ಜನಾಂಗದ ಜಾರ್ಜ್‌ ಫ್ಲಾಯ್ಡ ಎನ್ನುವ ವ್ಯಕ್ತಿಯನ್ನು ಕೊಂದ ಘಟನೆ ಅಮೆರಿಕವನ್ನು ವಿಭಜಿಸಿದೆ. ಟ್ರಂಪ್‌ ಆಡಳಿತದಲ್ಲಿ ಜನಾಂಗೀಯ ದ್ವೇಷ ಅಧಿಕವಾಗಿದೆ ಎನ್ನುವುದು ಡೆಮಾಕ್ರಟಿಕ್‌ ಪಕ್ಷದ ಆರೋಪ. ಆದರೆ ಈ ಘಟನೆಗೆ ಬೈಡೆನ್‌ ಅನಗತ್ಯ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ ಎನ್ನುವುದು ಟ್ರಂಪ್‌ ಆಡಳಿತದ ಪ್ರತ್ಯಾರೋಪ.

ಚುನಾವಣ ಪ್ರಕ್ರಿಯೆ
ಅಮೆರಿಕದ ಅಧ್ಯಕ್ಷರನ್ನು 50 ರಾಜ್ಯಗಳ ಎಲೆಕ್ಟೋರಲ್‌ ಕಾಲೇಜುಗಳು ಆಯ್ಕೆ ಮಾಡುತ್ತಿದ್ದು, 538 ಸದಸ್ಯರು (ಎಲೆಕ್ಟರ್‌ಗಳು) ಇರುತ್ತಾರೆ. ಈ ಎಲೆಕ್ಟರ್‌ಗಳನ್ನು ರಾಜ್ಯಗಳ ಪಕ್ಷಗಳು ನಾಮನಿರ್ದೇಶನ ಮಾಡಿರುತ್ತವೆ. ಈ ಸಂಖ್ಯೆ ನಿರ್ಧರಿತವಾಗುವುದು ನಿರ್ದಿಷ್ಟ ಪಕ್ಷಕ್ಕೆ ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ ಮತ್ತು ಸೆನೆಟ್‌ನಲ್ಲಿ ಎಷ್ಟು ಬಲವಿದೆ ಎನ್ನುವುದರ ಆಧಾರದಲ್ಲಿ. ಸಾಮಾನ್ಯವಾಗಿ ತಮ್ಮ ರಾಜ್ಯದಲ್ಲಿ ಯಾರಿಗೆ ಜನಪ್ರಿಯ ಮತಗಳು ದೊರೆತಿವೆ ಎನ್ನುವುದರ ಆಧಾರದ ಮೇಲೆ ಎಲೆಕ್ಟರ್‌ಗಳು ಅಭ್ಯರ್ಥಿಗೆ ಮತ ನೀಡುತ್ತಾರೆ.

ಜನಪ್ರಿಯ ಮತಗಳು ಪರಿಣಾಮಕಾರಿಯೇ?
ಅಮೆರಿಕದ ಚುನಾವಣೆಯಲ್ಲಿ ಯಾವ ರಾಜ್ಯದಲ್ಲಿ ಅಭ್ಯರ್ಥಿಯೊಬ್ಬರಿಗೆ ಅತ್ಯಧಿಕ ಮತ (ಜನರ ನೇರ ಮತಗಳು) ಸಿಗುತ್ತವೋ ಆ ವ್ಯಕ್ತಿಗೇ ಎಲೆಕ್ಟೋರಲ್‌ ಕಾಲೇಜುಗಳ ಮತಗಳು ಹೋಗುತ್ತವೆ. ಆದರೆ ಮೇಯ್ನೆ ಮತ್ತು ನೆಬ್ರಾಸ್ಕಾಗಳಲ್ಲಿ ಎಲೆಕ್ಟೋರಲ್‌ ಮತಗಳನ್ನು ಇಬ್ಬರೂ ಅಭ್ಯರ್ಥಿಗಳಿಗೆ ಹಂಚಲು ಅವಕಾಶವಿದೆ. ಹೀಗಾಗಿ ಜನಪ್ರಿಯ ಮತಗಳನ್ನು ಗೆಲ್ಲುವುದೇ ಮುಖ್ಯವಲ್ಲ. 2016ರ ಚುನಾವಣೆಯಲ್ಲಿ ಹಿಲರಿ ಅವರು ಟ್ರಂಪ್‌ಗಿಂತ 30 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ ಟ್ರಂಪ್‌ ಹೆಚ್ಚು ಎಲೆಕ್ಟೋರಲ್‌ ಮತಗಳನ್ನು ಪಡೆದು ಅಧಿಕಾರಕ್ಕೇರಿದರು!

1.04 ಲಕ್ಷ ಕೋಟಿ ರೂ. ಖರ್ಚು
ಶ್ವೇತಭವನ ಮತ್ತು ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ಗೆ ನಡೆಯುತ್ತಿರುವ ಈ ಚುನಾವಣೆಗೆ ಏನಿಲ್ಲವೆಂದರೂ ಸುಮಾರು 1.04 ಲಕ್ಷ ಕೋಟಿ ರೂ. ಖರ್ಚಾಗಲಿದೆ. ಈ ಮೊತ್ತವು ಅಭ್ಯರ್ಥಿಗಳು, ಪಕ್ಷಗಳು, ಪಕ್ಷಗಳ ಪರ ಸಂಘ ಟನೆಗಳ ಖರ್ಚನ್ನು ಒಳಗೊಂಡಿದೆಯೇ ವಿನಾ ರಾಜ್ಯ ಸರಕಾರಗಳ ಖರ್ಚನ್ನಲ್ಲ. ಅಮೆರಿಕನ್‌ ಚುನಾವಣ ಇತಿಹಾಸದಲ್ಲೇ ಅತ್ಯಧಿಕ ದೇಣಿಗೆಯನ್ನು (1 ಶತಕೋಟಿ ಡಾಲರ್‌ಗೂ ಅಧಿಕ) ಸಂಗ್ರಹಿಸಿದ ಅಭ್ಯರ್ಥಿ ಎಂಬ ಗರಿಮೆ ಜೋ ಬೈಡೆನ್‌ ಅವರದ್ದಾಗಿದೆ.

ಮೂರು ರೀತಿಯ ಮತದಾನ
ಅಮೆರಿಕದ ಮತದಾರರು 3 ರೀತಿಗಳಲ್ಲಿ ಮತದಾನ ಮಾಡಬಹುದು. 1. ಮತಗಟ್ಟೆಗೆ ತೆರಳಿ 2. ಇ-ಮತದಾನ 3. ಬ್ಯಾಲೆಟ್‌ ಪೇಪರ್‌ ಮೂಲಕ. ಬ್ಯಾಲೆಟ್‌ ಪೇಪರ್‌ಗಳನ್ನು ಮತದಾರರಿಗೆ ಹಂಚಲಾಗುತ್ತದೆ. ಬಳಿಕ ಪೋಸ್ಟ್‌ ಮೂಲಕ ವಾಪಸ್‌ ತರಿಸಿ ಎಣಿಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಅಂಗವಿಕಲರು, ವಯೋವೃದ್ಧರು, ಗರ್ಭಿಣಿಯರು ಪೋಸ್ಟಲ್‌ ವೋಟಿಂಗ್‌ ಮಾಡುತ್ತಾರೆ. ಆದರೆ ಇವರು ಮೊದಲೇ ರಿಜಿಸ್ಟರ್‌ ಮಾಡಿಸಿರಬೇಕು.

ಫ‌ಲಿತಾಂಶ
ಈ ಬಾರಿ ಕೊರೊನಾದಿಂದಾಗಿ ಸುರಕ್ಷೆಯ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೆಲವು ರಾಜ್ಯಗಳು ಪೋಸ್ಟಲ್‌ ವೋಟಿಂಗ್‌ ಎಣಿಕೆ ಆರಂಭಿಸಿವೆ. ಇನ್ನು ಕೆಲವು ನ. 3ರ ಅನಂತರವೇ ಎಣಿಕೆ ಆರಂಭಿಸಲಿವೆ. ಒಟ್ಟಾರೆ ಅಂಚೆಯ ಮೂಲಕ ಮತ ಸಂಗ್ರಹವಾಗಲು ತಡವಾಗುವ ಸಾಧ್ಯತೆ ಇದೆಯಾದ್ದರಿಂದ, ಈ ಬಾರಿ ಫ‌ಲಿತಾಂಶ ವಿಳಂಬವಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next