ವಾಷಿಂಗ್ಟನ್: ಮಗುವನ್ನು ಹೆತ್ತ ಬಳಿಕ ಸೆಪ್ಟಿಕ್ ಶಾಕ್ ನಿಂದ ಮಹಿಳೆಯೊಬ್ಬಳು ತನ್ನ ಎರಡು ಕಾಲು, ಕೈಗಳನ್ನು ಕಳೆದುಕೊಂಡಿರುವ ಪ್ರಕರಣ ಅಮೆರಿಕಾದಲ್ಲಿ ನಡೆದಿದೆ.
ಕ್ರಿಸ್ಟಿನಾ ಪ್ಯಾಚೆಕೊ ಎನ್ನುವ 29 ವರ್ಷದ ಮಹಿಳೆ ತನ್ನ ಕುಟುಂಬಕ್ಕೆ ಎರಡನೇ ಮಗು ಬರುವ ಸಂತಸದಲ್ಲಿದ್ದರು. ನಾರ್ಮಲ್ ಡೆಲಿವೆರಿ ಬದಲಿಗೆ ಸಿಸೇರಿಯನ್ ಪ್ರಕ್ರಿಯೆಯಲ್ಲಿ ತಮ್ಮ ಮಗುವಿಗೆ ಕ್ರಿಸ್ಟಿನಾ ಪ್ಯಾಚೆಕೊ ಜನ್ಮ ನೀಡುತ್ತಾರೆ.
ಮಗುವಿನೊಂದಿಗೆ ಮನೆಗೆ ಬಂದ ಬಳಿಕ ಕ್ರಿಸ್ಟಿನಾ ಪ್ಯಾಚೆಕೊ ಅವರಿಗೆ ಸ್ವಲ್ಪ ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮೊದಲಿಗೆ ಇದು ಸಿಸೇರಿಯನ್ ನಿಂದ ಆಗಿರಬಹುದೆಂದುಕೊಂಡು ಕ್ರಿಸ್ಟಿನಾ ಸುಮ್ಮನಿರುತ್ತಾರೆ. ಆ ಬಳಿಕ ವಾಂತಿಯೂ ಆಗುತ್ತದೆ. ಕ್ರಿಸ್ಟಿನಾ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸುತ್ತಾರೆ.
ತೀವ್ರ ನಿಗಾ ಘಟಕದಲ್ಲಿ ಪರೀಕ್ಷಿಸಿದ ಬಳಿಕ ವೈದ್ಯರು ಅವರನ್ನು ಸ್ಯಾನ್ ಆಂಟೋನಿಯೊದ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿಸುತ್ತಾರೆ. ಕ್ರಿಸ್ಟಿನಾ ಅವರಿಗೆ ಸೆಪ್ಟಿಕ್ ಶಾಕ್ ಆಗಿರುವುದು ಪತ್ತೆಯಾಗುತ್ತದೆ. ( ಇದರ ಲಕ್ಷಣ: ತಲೆತಿರುಗುವಿಕೆ, ಉಸಿರಾಟದ ಸಮಸ್ಯೆ, ಬದಲಾದ ಮಾನಸಿಕ ಸ್ಥಿತಿ, ಹೃದಯ ಬಡಿತ ಹೆಚ್ಚಳ, ಚರ್ಮದ ದದ್ದು, ಮೂತ್ರ ವಿಸರ್ಜನೆ ಇಲ್ಲದಿರುವುದು, ಅತಿಸಾರ , ವಾಕರಿಕೆ , ವಾಂತಿ , ಶೀತ, ಒದ್ದೆಯಾದ ಮತ್ತು ತೆಳು ಚರ್ಮ,ಅಂಗಾಂಗ ವೈಫಲ್ಯವು ಸಂಭವಿಸಬಹುದು ) ಈ ಸೆಪ್ಟಿಕ್ ಶಾಕ್ ಜಗತ್ತಿನಲ್ಲಿ ಗರ್ಭಾವಸ್ಥೆಯ ಸಾವಿಗೆ ಎರಡನೇ ಪ್ರಮುಖ ಕಾರಣವಾಗಿದೆ.
ಕ್ರಿಸ್ಟಿನಾ ಅವರ ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡಗಳಿಗೆ ಅಪಾರ ಹಾನಿಯಾಗಿತ್ತು. ಕ್ರಿಸ್ಟಿನಾ ಟ್ಯೂಬ್ ಮೂಲಕ ಉಸಿರಾಡುತ್ತಿದ್ದರು. ಎರಡು ವಾರಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು, ಕಾಲು ಹಾಗೂ ಕೈಗಳಲ್ಲಿ ಸರಿಯಾದ ರಕ್ತ ಸಂಚಾರ ಆಗದ ಕಾರಣ ಕ್ರಿಸ್ಟಿನಾ ಅವರ ಕೈ, ಕಾಲುಗಳು ಹೆಪ್ಟುಗಟ್ಟಲು ಶುರುವಾಗುತ್ತದೆ. ಹಾಗೆಯೇ ಇದ್ದರೆ ಪ್ರಾಣಕ್ಕೆ ಅಪಾಯವಿರುವುದರಿಂದ ಕ್ರಿಸ್ಟಿನಾ ಅವರ ಕೈ,ಕಾಲುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಬೇಕಾಗುವ ಅನಿವಾರ್ಯತೆ ಎದುರಾಗುತ್ತದೆ. ಶಸ್ತ್ರ ಚಿಕಿತ್ಸೆಯ ಪರಿಣಾಮ 12 ಬಾರಿ ಚರ್ಮ ಕಸಿಯ ಚಿಕಿತ್ಸೆಗೂ ಅವರು ಒಳಗಾಗಬೇಕಾಗುತ್ತದೆ. ಆ ನಂತರ ಎರಡು ತಿಂಗಳು ಆಸ್ಪತ್ರೆಯಲ್ಲಿ ಕಳೆದು, ಇತ್ತೀಚೆಗೆ ಡಿಸ್ಚಾರ್ಜ್ ಆಗಿದ್ದಾರೆ.
ಮನೆಯಲ್ಲಿ ವೀಲ್ ಚೇರ್ ನಲ್ಲಿ ಕೂತೇ ತನ್ನ ಮಗುವಿನ ಆರೈಕೆಯನ್ನು ಮಾಡುತ್ತಾ, ಮತ್ತೆ ಹಳೆಯ ಕ್ರಿಸ್ಟಿನಾರಂತೆ ಕುಟುಂಬದೊಂದಿಗೆ ಕಾಲ ಕಳೆಯಲು ಪ್ರಯತ್ನಿಸುತ್ತಿದ್ದಾರೆ.