ಟೆಕ್ಸಾಸ್: 1971ರಲ್ಲಿ ಯುನೈಟೆಡ್ ಸ್ಟೇಟ್ಸ್ ನ ಫೋರ್ಟ್ ವರ್ತ್ ಪಟ್ಟಣದಲ್ಲಿ ಸಣ್ಣ ಮಗುವೊಂದು ಕಳೆದುಹೋಗಿತ್ತು. ಆ ಮಗುವನ್ನು ಕಿಡ್ನಾಪ್ ಮಾಡಲಾಗಿತ್ತು. ಇದೀಗ ಸುಮಾರು 51 ವರ್ಷಗಳ ಬಳಿಕ ಪತ್ತೆ ಮಾಡಲಾಗಿದೆ. ಮಗುವಾಗಿದ್ದ ದೂರವಾಗಿದ್ದ ಆ ಮಹಿಳೆ ಇದೀಗ ಕುಟುಂಬದೊಂದಿಗೆ ಒಂದಾಗಿದ್ದಾರೆ.
ಟೆಕ್ಸಾಸ್ ನ ಫೋರ್ಟ್ ವರ್ತ್ ನಗರದ ಈ ಘಟನೆಯನ್ನು ದಿ ಗಾರ್ಡಿಯನ್ ವರದಿ ಮಾಡಿದೆ.
ಅಲ್ಟಾ ಅಪಾಂಟೆನ್ಕೊ ಎಂಬ ಮಹಿಳೆ 1971ರಲ್ಲಿ ತನ್ನ ಮಗು ಮೆಲಿಸ್ಸಾಳನ್ನು ನೋಡಿಕೊಳ್ಳಲು ಜನ ಬೇಕೆಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು. ಆಕೆ ಕೆಲಸಕ್ಕೆ ಹೋಗುತ್ತಿದ್ದರಿಂದ ತುರ್ತಾಗಿ ಬೇಬಿ ಸಿಟ್ಟರ್ ನ ಅಗತ್ಯವಿತ್ತು. ಆಕೆ ಪೂರ್ವಾಪರ ವಿಚಾರಿಸಿದೆ ಓರ್ವ ಮಹಿಳೆಯನ್ನು ಬೇಬಿ ಸಿಟ್ಟರ್ ಆಗಿ ನೇಮಿಸಿದ್ದರು. ಆ ಮಹಿಳೆ ಮಗುವನ್ನು ಅಪಹರಣ ಮಾಡಿದ್ದರು. ಬಳಿಕ ಮಗುವಿಗಾಗಿ ಹುಡುಕಾಟ ನಡೆಸಿದ್ದರೂ ಅದು ಫಲ ನೀಡಿರಲಿಲ್ಲ.
ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಅಂದು ನಾಪತ್ತೆಯಾಗಿದ್ದ ಬಾಲಕಿ ಇಂದು ಫೋರ್ಟ್ ವರ್ತ್‌ನಿಂದ 1,100 ಮೈಲುಗಳಿಗಿಂತ ಹೆಚ್ಚು ದೂರದಲ್ಲಿರುವ ಚಾರ್ಲ್ಸ್‌ಟನ್ ಬಳಿ ಇದ್ದಾಳೆ ಎಂಬ ಸುಳಿವು ಸಿಕ್ಕಿತು. ಡಿಎನ್‌ಎ ಪರೀಕ್ಷೆಯ ಫಲಿತಾಂಶಗಳು, ಮೆಲಿಸ್ಸಾಳ ದೇಹದ ಮೇಲಿದ್ದ ಮಚ್ಚೆ ಮತ್ತು ಅವಳ ಜನ್ಮದಿನದ ಸಹಾಯದಿಂದ 51 ವರ್ಷಗಳ ಹಿಂದೆ ಅವರಿಂದ ಅಪಹರಿಸಲ್ಪಟ್ಟ ಮಗು ಮೆಲಿಸ್ಸಾ ಎಂದು ಸಾಬೀತುಪಡಿಸಲು ಕುಟುಂಬಕ್ಕೆ ಸಹಾಯ ಮಾಡಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ರಿಷಬ್ ಶೆಟ್ಟಿ ನಿರ್ಮಾಣದ ʼಶಿವಮ್ಮʼ ಚಿತ್ರಕ್ಕೆ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ
ಕಳೆದ ಶನಿವಾರ ಮೆಲಿಸ್ಸಾ ಆಕೆಯ ತಾಯಿ, ತಂದೆ ಮತ್ತು ನಾಲ್ವರು ಒಡಹುಟ್ಟಿದವರನ್ನು ಫೋರ್ಟ್ ವರ್ತ್ ನ ಚರ್ಚ್ ನಲ್ಲಿ ಭೇಟಿಯಾದರು. ಕುಟುಂಬವು 51 ವರ್ಷಗಳ ಬಳಿಕ ಮನೆ ಮಗಳನ್ನು ಸಂತಸದಿಂದ ಸ್ವಾಗತಿಸಿತು.
ಐದು ದಶಕದ ಹಿಂದೆ ತಾಯಿಯೇ ಮಗಳನ್ನು ಕೊಂದು ಹಾಕಿದ್ದಾಳೆ ಎಂಬ ಆರೋಪಗಳನ್ನೂ ಮೆಲಿಸ್ಸಾ ತಾಯಿ ಅಲ್ಟಾ ಅಪಾಂಟೆನ್ಕೊ ಎದುರಿಸಿದ್ದರು ಎಂದು ವರದಿ ತಿಳಿಸಿದೆ.