ಹೊಸದಿಲ್ಲಿ: ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತ-ಅಮೆರಿಕ ನಡುವೆ ಕಾರ್ಯಾಚರಣೆ ನಡೆಸಲಿದ್ದ ಏರ್ ಇಂಡಿಯಾದ ಎಲ್ಲ ಬಾಡಿಗೆ ವಿಮಾನಗಳಿಗೂ ಅಮೆರಿಕದ ಸಾರಿಗೆ ಇಲಾಖೆ ನಿರ್ಬಂಧ ವಿಧಿಸಿದೆ. ಪರಿಣಾಮ ಜೂ.22ರಿಂದ ಭಾರತ-ಅಮೆರಿಕ ನಡುವೆ ಸಂಚರಿಸಲಿದ್ದ ವಿಮಾನಗಳ ಹಾರಾಟಕ್ಕೆ ತಡೆ ಬಿದ್ದಿದೆ. ವಿಮಾನಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಭಾರತವು ತನ್ನ ಪೂರ್ವಾನುಮತಿ ಪಡೆಯದ ಕಾರಣ ಈ ಕ್ರಮ ತೆಗೆದುಕೊಂಡಿರುವುದಾಗಿ ಸಾರಿಗೆ ಇಲಾಖೆ ಹೇಳಿದೆಯಾದರೂ, ಈ ಹಿಂದೆ ಅಮೆರಿಕ ವಿಮಾನಗಳಿಗೆ ಭಾರತ ನಿರ್ಬಂಧ ವಿಧಿಸಿದ್ದಕ್ಕೆ ಪ್ರತೀಕಾರವಾಗಿ ಈ ಕ್ರಮ ಕೈಗೊಂಡಿರುವುದು ಸ್ಪಷ್ಟವಾಗಿದೆ. “ಭಾರತ ಸರಕಾರವು ಅಮೆರಿಕದ ಕಾರ್ಯಾಚರಣೆ ಹಕ್ಕುಗಳಿಗೆ ಧಕ್ಕೆ ತಂದಿದೆ. ಅಲ್ಲದೆ, ವಿಮಾನಗಳಿಗೆ ಅನುಮತಿ ನೀಡುವ ವಿಷಯದಲ್ಲಿ ಅಮೆರಿಕಗೆ ಒಂದು ನೀತಿ, ಇತರೆ ದೇಶಗಳಿಗೇ ಒಂದು ನೀತಿ ಅನ್ವಯಿಸುವ ಮೂಲಕ ತಾರತಮ್ಯ ಮಾಡಿದೆ. ಕಾರಣ ನಾವು ಈ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಇಲಾಖೆ ತಿಳಿಸಿದೆ.