ವಾಷಿಂಗ್ಟನ್: ಚುನಾವಣಾ ಫಲಿತಾಂಶದಲ್ಲಿ ಅಕ್ರಮ ಎಸಗಲಾಗುತ್ತಿದೆ ಎಂದು ಆರೋಪಿಸಿ ಡೊನಾಲ್ಡ್ ಟ್ರಂಪ್, ಮಿಚಿಗನ್ ಮತ್ತು ಜಾರ್ಜಿಯಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಎರಡೂ ಕೋರ್ಟ್ ಗಳು ಟ್ರಂಪ್ ವಕೀಲರ ವಾದಕ್ಕೆ ಮನ್ನಣೆ ನೀಡದೆ ತಿರಸ್ಕರಿಸಿದ್ದು, ಮತ್ತೊಂದೆಡೆ ಪೆನ್ಸಿಲ್ವೇನಿಯಾದಲ್ಲಿ ತಡವಾಗಿ ಬರಲಿರುವ ಮತಎಣಿಕೆಗೆ ತಡೆ ನೀಡಬೇಕೆಂದು ಕೋರಿದ್ದ ಮನವಿಯನ್ನು ಅಮೆರಿಕ ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಬೈಡೆನ್ ಅವರಿಗೆ ಶುಕ್ರವಾರದ ಮತಎಣಿಕೆಯಲ್ಲಿ ಪೆನ್ಸಿಲ್ವೇನಿಯಾ ಮತ್ತು ಜಾರ್ಜಿಯಾ ರಾಜ್ಯಗಳಲ್ಲಿ ಮುನ್ನಡೆ ಸಿಕ್ಕಿತ್ತು. ಒಂದು ವೇಳೆ ಪೆನ್ಸಿಲ್ವೇನಿಯಾದಲ್ಲಿ ಬೈಡೆನ್ ಗೆಲುವು ಸಾಧಿಸಿದರೆ, ಅಮೆರಿಕದ ಮುಂದಿನ ಅಧ್ಯಕ್ಷಗಿರಿ ಬೈಡೆನ್ ಪಾಲಾಗಲಿದೆ.
ಬಹುತೇಕ ಮಂದಿ ಬೈಡೆನ್ ಪರವಾಗಿದ್ದಾರೆ, ಆದರೆ ಬೈಡೆನ್ ಅವರನ್ನು ಪೆನ್ಸಿಲ್ವೇನಿಯಾ ರಾಜ್ಯದ ಕಾಯ್ದೆಯಡಿ ಅನರ್ಹಗೊಳಿಸಬೇಕು ಎಂದು ರಿಪಬ್ಲಿಕನ್ ಪಕ್ಷದವರು ಒತ್ತಾಯಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಖೇಲೋ ಇಂಡಿಯಾದಲ್ಲಿ ಅವಕಾಶ ನೀಡುತ್ತೇವೆಂದು ನಂಬಿಸಿ ವಂಚನೆ: ಕಬಡ್ಡಿಪಟು ಸೇರಿ ಮೂವರ ಬಂಧನ
ಮೊದಲ ಹೆಜ್ಜೆಯಾಗಿ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ, 8ಗಂಟೆಯ ನಂತರ ಬರುವ ಮತಪತ್ರಗಳನ್ನು ಬೇರೆಯಾಗಿ ವಿಂಗಡಿಸಿ ಅದನ್ನು ಎಣಿಕೆ ಮಾಡದಂತೆ ಆದೇಶ ನೀಡಬೇಕೆಂದು ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ಹೈಕೋರ್ಟ್ ಅದನ್ನು ನಿರಾಕರಿಸಿತ್ತು.
ಅಮೆರಿಕ ಚುನಾವಣಾ ಕಾನೂನು ಸಮರಕ್ಕೆ ಸಂಬಂಧಿಸಿದಂತೆ ಅಮೆರಿಕ ಸುಪ್ರೀಂಕೋರ್ಟ್ ಶನಿವಾರ ಪೂರ್ಣ ಪ್ರಮಾಣದ ತೀರ್ಪನ್ನು ಪ್ರಕಟಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ. ಈವರೆಗಿನ ಲೆಕ್ಕಾಚಾರದ ಪ್ರಕಾರ ಜೋ ಬೈಡೆನ್ 264 ಮತ ಹಾಗೂ ಡೊನಾಲ್ಡ್ ಟ್ರಂಪ್ 214 ಮತ ಪಡೆದಿದ್ದಾರೆ. ಅಮೆರಿಕದ ಅಧ್ಯಕ್ಷ ಗಾದಿ ಏರಲು 274 ಮತಗಳ ಅವಶ್ಯಕತೆ ಇದೆ.