ನವದೆಹಲಿ: ಭಾರತದ ಸಾರ್ವಭೌಮತೆಯ, ಒಗ್ಗಟ್ಟಿನ ವಿಚಾರದಲ್ಲಿ ಅಮೆರಿಕ ಭಾರತವನ್ನು ಸರ್ವ ರೀತಿಯಿಂದಲೂ ಬೆಂಬಲಿಸಲಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೊಂಪ್ಯೋ ಮಂಗಳವಾರ(ಅಕ್ಟೋಬರ್ 27, 2020) ತಿಳಿಸಿದ್ದಾರೆ. ಭಾರತ ಮತ್ತು ಚೀನಾ ನಡುವಿನ ಗಡಿ ತಕರಾರು ವಿಚಾರದ ಹಿನ್ನೆಲೆಯಲ್ಲಿ ಅಮೆರಿಕದ ಬೆಂಬಲ ಪರೋಕ್ಷವಾಗಿ ಚೀನಾಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಚೀನಾದ ಆಡಳಿತಾರೂಢ ಕಮ್ಯೂನಿಷ್ಟ್ ಪಕ್ಷ ವಿಶ್ವ ಸಮುದಾಯಕ್ಕೆ ಬೆದರಿಕೆಯಾಗಿದೆ. ಇದನ್ನು ಭಾರತ ಮತ್ತು ಅಮೆರಿಕ ಜಂಟಿಯಾಗಿ ಎದುರಿಸಲಿದೆ ಎಂದು ಪೊಂಪ್ಯೋ ಹೇಳಿದರು.
ಕಳೆದ ಜೂನ್ ತಿಂಗಳಿನಲ್ಲಿ ಲಡಾಖ್ ನ ವಾಸ್ತವ ಗಡಿನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಈ ಘಟನೆ ಹಿನ್ನೆಲೆಯಲ್ಲಿ ಪೊಂಪ್ಯೋ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದೆ.
ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಹುತಾತ್ಮರಾದ ಯೋಧರ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಅರ್ಪಿಸಿದ್ದೇವೆ. ಭಾರತದ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯಕ್ಕೆ ಯಾವುದೇ ರೀತಿಯ ಬೆದರಿಕೆ ಎದುರಾದರು ನಾವು ಭಾರತಕ್ಕೆ ಅಮೆರಿಕ ಎಲ್ಲಾ ರೀತಿಯ ಬೆಂಬಲ ನೀಡಲಿದೆ ಎಂದು ಹೇಳಿದರು.
ಇದನ್ನೂ ಓದಿ:ಪತಿ – ಪತ್ನಿ ನಡುವೆ ಜಗಳ ಬಿಡಿಸಲು ಬಂದ ಮಾವನನ್ನೇ ಕೊಂದ ಅಳಿಯ!
ಎರಡು ಅತೀ ದೊಡ್ಡ ಪ್ರಜಾಪ್ರಭುತ್ವ ದೇಶಗಳು ತುಂಬಾ ನಿಕಟವಾಗುತ್ತಿರುವುದು ನಮಗೆ ದೊರೆತ ಅಪೂರ್ವ ಅವಕಾಶವಾಗಿದೆ. ನಾವು ಇಂದು ಸಹಕಾರ ಮತ್ತು ಸೋಂಕು, ಚೀನಾದ ಬೆದರಿಕೆ, ಶಾಂತಿ ಮತ್ತು ಸ್ಥಿರತೆ ಕುರಿತು ಚರ್ಚೆ ನಡೆಸಿರುವುದಾಗಿ ಪೊಂಪ್ಯೋ ತಿಳಿಸಿದರು.
ಅಮೆರಿಕ ಮತ್ತು ಭಾರತ ನಡುವಿನ 2+2 ಮಾತುಕತೆ ಮಂಗಳವಾರ ನಡೆದಿದ್ದು, ಈ ಸಭೆಯಲ್ಲಿ ವಿದೇಶಾಂಗ ಸಚಿವ ಮೈಕ್ ಮತ್ತು ರಕ್ಷಣಾ ಸಚಿವ ಮಾರ್ಕ್ ಎಸ್ಟರ್ ಹಾಜರಾಗಿದ್ದರು. ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್ ಜತೆಗೆ ಮಾತುಕತೆ ನಡೆಸಿದ ನಂತರ ಪೊಂಪ್ಯೋ ಈ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.