ದುಬೈ/ಕೈರೋ: ಇರಾನ್ ಬೆಂಬಲಿತ ಹೌತಿ ಉಗ್ರಗಾಮಿಗಳು ಕೆಂಪು ಸಮುದ್ರದಲ್ಲಿ ಮರ್ಸ್ಕ್ ಕಂಟೈನರ್ ಹಡಗಿನ ಮೇಲೆ ದಾಳಿ ನಡೆಸಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಅಮೆರಿಕದ ವೈಮಾನಿಕ ಪಡೆ ನಡೆಸಿದ ಪ್ರತಿ ದಾಳಿಯಲ್ಲಿ ಮೂರು ಬೋಟುಗಳು ಮುಳುಗಡೆಯಾಗಿದ್ದು, ಹತ್ತು ಉಗ್ರರು ಸಾವಿಗೀಡಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Mudigere: ಕೆಲಸದ ಒತ್ತಡದಿಂದ ಶಿಕ್ಷಣ ಇಲಾಖೆಯ ಮ್ಯಾನೇಜರ್ ಆತ್ಮಹತ್ಯೆಗೆ ಶರಣು
ಈ ನೌಕಾಯುದ್ಧವು ಭಾನುವಾರ ನಸುಕಿನ ವೇಳೆ ಸಂಭವಿಸಿರುವುದಾಗಿ ವರದಿ ತಿಳಿಸಿದೆ. ಸಿಂಗಾಪುರ್ ಧ್ವಜ ಹೊಂದಿದ್ದ ಮರ್ಸ್ಕ್ ಹ್ಯಾಂಗ್ ಝೂ ಹಡಗಿನ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಅಮೆರಿಕದ ಭದ್ರತಾ ಪಡೆಗೆ ದಾಳಿ ಕುರಿತು ಸಂದೇಶ ದೊರಕಿದ್ದು, ತಕ್ಷಣವೇ ಅಮೆರಿಕದ ಭದ್ರತಾ ಪಡೆ ವೈಮಾನಿಕ ದಾಳಿ ಮೂಲಕ ಬಂಡುಕೋರರ ದಾಳಿಯನ್ನು ವಿಫಲಗೊಳಿಸಿರುವುದಾಗಿ ತಿಳಿಸಿದೆ.
“ನಮ್ಮ ಎಚ್ಚರಿಕೆಯ ಸಂದೇಶವನ್ನು ಪಡೆಯಲು ಹಡಗಿನ ಕ್ಯಾಪ್ಟನ್ ನಿರಾಕರಿಸಿದ್ದರಿಂದ ದಾಳಿ ನಡೆಸಲು ಮುಂದಾಗಿರುವುದಾಗಿ ಹೌತಿ ವಕ್ತಾರ ತಿಳಿಸಿದ್ದು, ಅಮೆರಿಕ ವೈಮಾನಿಕ ಪಡೆ ನಡೆಸಿದ ದಾಳಿಯಲ್ಲಿ ಹತ್ತು ಮಂದಿ ಹೌತಿ ಬಂಡುಕೋರರು ಸಾವಿಗೀಡಾಗಿರುವುದಾಗಿ” ವರದಿ ವಿವರಿಸಿದೆ.
ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸುವ ಮೂಲಕ ಉಭಯ ದೇಶಗಳ ನಡುವೆ ಯುದ್ಧ ಆರಂಭಗೊಂಡಿದ್ದು, ಸಾವಿರಾರು ಮಂದಿ ಸಾವಿಗೀಡಾಗಿದ್ದು, ಲಕ್ಷಾಂತರ ಜನರು ನಿರ್ವಸಿತರಾಗಿದ್ದಾರೆ. ಏತನ್ಮಧ್ಯೆ ನವೆಂಬರ್ ತಿಂಗಳಿನಿಂದ ಹಮಾಸ್ ಗೆ ಬೆಂಬಲವಾಗಿ ಯೆಮೆನ್ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಹಡಗುಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.