Advertisement

ಅಮೆರಿಕ-ರಷ್ಯಾ ಬಾಂಧವ್ಯ: ಮುಳ್ಳಿನ ಹಾದಿಯ ಪ್ರಯಾಣ

10:22 AM Feb 28, 2022 | Team Udayavani |

ಅದು 1945ರ ಆಸುಪಾಸು. ಇಡೀ ಜಗತ್ತೇ ಒಂದು ರೀತಿಯಲ್ಲಿ ದ್ವಿತೀಯ ಮಹಾಯುದ್ಧದಿಂದಾಗಿ ಕಂಗೆಟ್ಟಿತ್ತು. ಅಂದು ಜರ್ಮನಿಯ ಅಡಾಲ್ಫ್ ಹಿಟ್ಲರ್‌ನ ಯುದ್ಧದಾಹ ಎಲ್ಲರನ್ನೂ ಕಂಗೆಡಿಸಿತ್ತು. ಇಂಗ್ಲೆಂಡ್‌, ಫ್ರಾನ್ಸ್‌ ಸೇರಿದಂತೆ ಯುರೋಪ್‌ನ ಹಲವಾರು ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದ ಹಿಟ್ಲರ್‌, ಜಗತ್ತಿಗೇ ಮಾರಕವೆನಿಸಿದ್ದ. ಅಷ್ಟೇ ಅಲ್ಲ, ಸೋವಿಯತ್‌ ಒಕ್ಕೂಟದ ಕೆಲವು ದೇಶಗಳೂ ಹಿಟ್ಲರ್‌ನ ಸೇನೆಗೆ ತುತ್ತಾಗಿದ್ದವು. ಅಂದು ರಷ್ಯಾದ ಸ್ಟಾಲಿನ್‌ ಮಧ್ಯಪ್ರವೇಶಿಸದೇ ಇದ್ದರೆ, ಹಿಟ್ಲರ್‌ನ ಆಟಾಟೋಪ ತಡೆಯಲು ಯಾರು ಇಲ್ಲದಂತೆ ಆಗಿಬಿಡುತ್ತಿದ್ದರು.

Advertisement

ವಿಶೇಷವೆಂದರೆ 1945ರ 2ನೇ ಮಹಾಯುದ್ಧದ ವೇಳೆ, ಅಮೆರಿಕ ಮತ್ತು ರಷ್ಯಾ ಒಂದಾಗಿ ಹೋರಾಟ ನಡೆಸಿದ್ದವು. ಹಿಟ್ಲರ್‌ನ ಆರ್ಭಟ ತಣ್ಣಗಾಗಿಸಲು ರಷ್ಯಾ, ನೇರವಾಗಿ ಜರ್ಮನಿಗೆ ನುಗ್ಗಿತ್ತು. ಹಿಟ್ಲರ್‌ನ ಹಿಡಿತದಿಂದ ಇಂಗ್ಲೆಂಡ್‌, ಫ್ರಾನ್ಸ್‌, ಪೋಲೆಂಡ್‌ ಸೇರಿದಂತೆ ಹಲವಾರು ದೇಶಗಳು ತಪ್ಪಿಸಿಕೊಂಡವು. ಕಡೆಗೆ ರಷ್ಯಾ ಸೇನೆಯ ಯಶಸ್ವಿ ಕಾರ್ಯಾಚರಣೆಯಿಂದಾಗಿ ಜರ್ಮನಿ ಸೋತು ಸುಣ್ಣವಾಗಿತ್ತು. ರಷ್ಯಾ, ಅಮೆರಿಕ ಸೇರಿದಂತೆ ಇತರ ದೇಶಗಳ ಒಕ್ಕೂಟ ಗೆದ್ದು ಬೀಗಿತ್ತು. ಹಿಟ್ಲರ್‌ ಆತ್ಮಹತ್ಯೆಗೆ ಶರಣಾಗಿದ್ದ.

ಇತಿಹಾಸ ನೋಡಿದರೆ ಅಮೆರಿಕ ಮತ್ತು ರಷ್ಯಾ ಒಂದಾಗಿದ್ದು ಇದೊಂದೇ ಯುದ್ಧದಲ್ಲಿ. ಹಿಟ್ಲರ್‌ನಿಂದಾಗಿ ಜಗತ್ತಿಗೇ ಅಪಾಯವಿದೆ ಎಂದರಿತ ಈ ದೇಶಗಳು ಒಟ್ಟಿಗೇ ಯುದ್ಧದಲ್ಲಿ ಪಾಲ್ಗೊಂಡಿದ್ದವು. ವಿಶೇಷವೆಂದರೆ ಅಂದು ರಷ್ಯಾ ತೋರಿದ ಸಾಮರ್ಥ್ಯ, ಅಮೆರಿಕ ಸೇರಿದಂತೆ ಇತರ ದೇಶಗಳಿಗೆ ಬಿಸಿತುಪ್ಪವಾಗಿತ್ತು ಎನ್ನಲಡ್ಡಿಯಿಲ್ಲ.

2ನೇ ಮಹಾಯುದ್ಧ ಮುಗಿದ ಕೆಲವೇ ದಿನಗಳಲ್ಲಿ ಅಮೆರಿಕ ಮತ್ತು ರಷ್ಯಾ ನಡುವೆ ಶೀತಲ ಸಮರ ಏರ್ಪಟ್ಟಿತ್ತು. ಆಗ ಇಡೀ ಜಗತ್ತಿನಲ್ಲಿ ಅತ್ಯಂತ ಪ್ರಬಲ ರಾಷ್ಟ್ರಗಳು ಎಂದು ಕರೆಸಿಕೊಂಡದ್ದು ಅಮೆರಿಕ ಮತ್ತು ರಷ್ಯಾ ಮಾತ್ರ. ಆಗಿನಿಂದಲೇ ಶಸ್ತ್ರಾಸ್ತ್ರ ಸ್ಪರ್ಧೆಗೆ ಬಿದ್ದ ಈ ಎರಡು ದೇಶಗಳು ಅಪಾರ ಪ್ರಮಾಣದ ಅಣ್ವಸ್ತ್ರಗಳನ್ನು ತಮ್ಮ ಬತ್ತಳಿಕೆಗೆ ಹಾಕಿಕೊಂಡವು. ಇಂದಿಗೂ ಈ ಎರಡು ದೇಶಗಳ ಬಳಿ 5 ಸಾವಿರಕ್ಕೂ ಹೆಚ್ಚು ಅಣ್ವಸ್ತ್ರಗಳಿವೆ.

20ನೇ ಶತಮಾನಕ್ಕಿಂತ ಹಿಂದಕ್ಕೆ ಹೋದರೆ, ಅಮೆರಿಕ ಮತ್ತು ರಷ್ಯಾ ದೇಶಗಳು ಉತ್ತಮ ಬಾಂಧವ್ಯವನ್ನೇ ಹೊಂದಿದ್ದವು ಎಂದು ಇತಿಹಾಸಕಾರರು ಹೇಳುತ್ತಾರೆ. ಅದರಲ್ಲಿಯೂ ಸ್ವಾತಂತ್ರ್ಯಕ್ಕಾಗಿ ಅಮೆರಿಕ ನಡೆಸಿದ ಯುದ್ಧದ ವೇಳೆ ಮತ್ತು ದೇಶದೊಳಗಿನ ಸಿವಿಲ್‌ ವಾರ್‌ ಸಂದರ್ಭದಲ್ಲಿ ರಷ್ಯಾ ಸಂಪೂರ್ಣ ಬೆಂಬಲ ನೀಡಿತ್ತು. ಅಷ್ಟೇ ಅಲ್ಲ, ಎರಡೂ ದೇಶಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗುವ ಯಾವುದೇ ಅಂಶಗಳಿರಲಿಲ್ಲ. ಎಂಥದ್ದೇ ಗೊಂದಲಗಳು ಉಂಟಾದರೂ, ಪರಸ್ಪರ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳುತ್ತಿದ್ದವು. ವಿಶೇಷವೆಂದರೆ, ಅಂದು ಅಮೆರಿಕ ಮತ್ತು ರಷ್ಯಾಗೆ ಗ್ರೇಟ್‌ ಬ್ರಿಟನ್‌ ಮಾತ್ರ ಶತ್ರುದೇಶವಾಗಿತ್ತು. 20ನೇ ಶತಮಾನದ ಆರಂಭದ ಬಳಿಕ ಅಮೆರಿಕ, ರಷ್ಯಾ ನಡುವಿನ ಸಂಬಂಧ ಬಿಗಡಾಯಿಸಲು ಶುರುವಾಯಿತು. ರಷ್ಯಾದ ರಾಜಮನೆತನ ಅಲ್ಪಸಂಖ್ಯಾಕರು ಮತ್ತು ಯಹೂದಿಗಳ ವಿರುದ್ಧ ಹಿಂಸಾತ್ಮಕ ಕ್ರಮಗಳು ಅಮೆರಿಕಕ್ಕೆ ಸಹಿಸಲಾರದಂಥವುಗಳಾದವು.

Advertisement

ಇದಕ್ಕಿಂತ ಹೆಚ್ಚಾಗಿ, 20ನೇ ಶತಮಾನದಲ್ಲಿ ರಷ್ಯಾದಲ್ಲಿ ಬಿರುಗಾಳಿಯಂತೆ ಕಮ್ಯೂನಿಸ್ಟರು ಹುಟ್ಟಿಕೊಂಡು, ಸರಕಾರ ನಡೆಸಲು ಶುರು ಮಾಡಿದರು. ರಷ್ಯಾದಲ್ಲಿನ ಕಮ್ಯೂನಿಸ್ಟ್‌ ಸರಕಾರದ ಜತೆಗೆ ಅಮೆರಿಕ ಉತ್ತಮ ಬಾಂಧವ್ಯ ಇರಿಸಿಕೊಳ್ಳಲಿಲ್ಲ. ಆದರೂ 1945ರಲ್ಲಿ ನಡೆದ ಎರಡನೇ ಮಹಾಯುದ್ಧದ ವೇಳೆ ಅನಿವಾರ್ಯವಾಗಿ ಉಭಯ ದೇಶಗಳು ಒಂದಾದವು.

ಅನಂತರದಲ್ಲಿ ಯುಎಸ್‌ಎಸ್‌ಆರ್‌ನ ಕಡೆಯ ಅಧ್ಯಕ್ಷ ಮೈಕೆಲ್‌ ಗೋರ್ಬಚೇವ್‌ ಅವರು ಅಮೆರಿಕದ ಜತೆ ಉತ್ತಮ ಬಾಂಧವ್ಯ ಇರಿಸಿಕೊಳ್ಳಲು ಮುಂದಾಗಿದ್ದರು. 1991ರಲ್ಲಿ ಯುಎಸ್‌ಎಸ್‌ಆರ್‌ ಛಿದ್ರವಾದ ಬಳಿಕ ರಷ್ಯಾಗೆ ಅಧ್ಯಕ್ಷರಾಗಿ ನೇಮಕವಾದ ಬೋರಿಸ್‌ ಯೆಲ್ಸಿನ್‌ ಮತ್ತು ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಉತ್ತಮವಾದ ಬಾಂಧವ್ಯ ಇರಿಸಿಕೊಂಡಿದ್ದರು. ಹಾಗೆಯೇ ಈ ಸಂದರ್ಭದಲ್ಲಿ ರಷ್ಯಾದಲ್ಲಿ ಕ್ಯಾಪಿಟಲಿಸಮ್‌ ಬರಲು ಕಾರಣರಾದ ಕ್ಲಿಂಟನ್‌, ರಷ್ಯಾಕ್ಕೆ ಸಾಲದ ನೆರವನ್ನೂ ನೀಡಿದ್ದರು.

ಮತ್ತೆ 1999ರಲ್ಲಿ ನಡೆದ ಕೋಸೋವೋ ಯುದ್ಧದಲ್ಲಿ ಅಮೆರಿಕ ನೇತೃತ್ವದ ನ್ಯಾಟೋ ಪಡೆ, ಯುಗೋಸ್ಲೋವಿಯಾ ದ ಮೇಲೆ ಬಾಂಬ್‌ ಹಾಕಿತ್ತು. ಜತೆಗೆ, ಪೂರ್ವ ಯೂರೋಪ್‌ನಲ್ಲಿ ಅಮೆರಿಕದ ಪ್ರಭಾವವೂ ಹೆಚ್ಚಾಗತೊಡಗಿತು. ಅಲ್ಲದೆ, ಈ ಹಿಂದೆ ಯುಎಸ್‌ಎಸ್‌ಆರ್‌ನಲ್ಲಿದ್ದ ದೇಶಗಳು ನಿಧಾನಕ್ಕೆ ನ್ಯಾಟೋಗೆ ಸೇರಿದವು. ಇವೆಲ್ಲವೂ ಅಮೆರಿಕ ವಿರುದ್ಧ ರಷ್ಯಾ ಸಿಟ್ಟಿಗೆ ಕಾರಣವಾದವು.

2000ರಲ್ಲಿ ವ್ಲಾದಿಮಿರ್‌ ಪುತಿನ್‌ ಅಧ್ಯಕ್ಷರಾಗಿ ಬಂದ ಮೇಲೆ, ಅಮೆರಿಕ ಮತ್ತು ರಷ್ಯಾ ನಡುವೆ ಒಂದಷ್ಟು ಸಂದರ್ಭ ಸುಧಾರಿಸಿತು. ಜತೆಗೆ, ಜಗತ್ತಿನಾದ್ಯಂತ ತಾಂಡವವಾಡುತ್ತಿದ್ದ ಭಯೋತ್ಪಾದನೆ ವಿರುದ್ಧ ಒಟ್ಟಾಗಿಯೇ ಸೆಣೆಸಿದವು. ಆದರೆ ಇದರ ಹಿಂದಿನ ಸತ್ಯ ಬೇರೆಯೇ ಇದೆ. 1979ರಲ್ಲಿ ಅಫ್ಘಾನಿಸ್ಥಾನದ ಮೇಲೆ ಕಣ್ಣು ಹಾಕಿದ್ದ ಯುಎಸ್‌ಎಸ್‌ಆರ್‌, ಅದನ್ನು ವಶಪಡಿಸಿಕೊಳ್ಳಲು ನೋಡಿತ್ತು. ಆಗ ಅಮೆರಿಕ, ಅಫ್ಘಾನಿಸ್ಥಾನಕ್ಕೆ ನೆರವು ನೀಡಿ ಒಸಾಮ ಬಿನ್‌ ಲಾಡೆನ್‌ ನೇತೃತ್ವದ ಉಗ್ರರಿಗೆ ರಷ್ಯಾ ವಿರುದ್ಧ ಸೆಣೆಸಲು ಸಹಾಯ ಮಾಡಿತ್ತು. ಅಲ್ಲದೆ, ತಾಲಿಬಾನಿಗರ ಹುಟ್ಟಿಗೂ ಅಮೆರಿಕವೇ ಕಾರಣವಾಯಿತು. ತಾಲಿಬಾನಿಗರು ಮತ್ತು ಅಲ್‌ಕಾಯಿದಾ ಉಗ್ರರ ಕಾಟ ಹೆಚ್ಚಾದ ಮೇಲೆ ರಷ್ಯಾ ಮತ್ತು ಅಮೆರಿಕ ಒಗ್ಗೂಡಿ ಹೋರಾಟ ನಡೆಸಿದವು. ಆದರೆ 2008ರಲ್ಲಿ ರಷ್ಯಾ, ಜಾರ್ಜಿಯಾವನ್ನು ವಶಪಡಿಸಿಕೊಂಡ ಮೇಲೆ, ಸಂಬಂಧ ಮತ್ತೆ ಹದಗೆಟ್ಟಿತು.

ಇದರ ಜತೆಯಲ್ಲೇ ಅಮೆರಿಕದ ಎಡ್ವರ್ಡ್‌ ಸ್ನೋಡೌನ್‌ಗೆ ರಷ್ಯಾ ಆಶ್ರಯ ನೀಡಿತು. ಇದೂ ಅಮೆರಿಕದ ಸಿಟ್ಟಿಗೆ ಕಾರಣವಾಯಿತು. ಹಾಗೆಯೇ ಲಿಬಿಯಾ ಮೇಲೆ ನ್ಯಾಟೋ ನಡೆಸಿದ ದಾಳಿ, ಸಿರಿಯಾದ ನಾಗರಿಕ ಯುದ್ಧದಲ್ಲಿ ರಷ್ಯಾ ಭಾಗಿಯಾಗಿದ್ದು, ಕ್ರಿಮಿಯಾವನ್ನು ರಷ್ಯಾ ಸಂಪೂರ್ಣವಾಗಿ ವಶಪಡಿಸಿಕೊಂಡ ಮೇಲೆ ಸಂಬಂಧ ಇನ್ನಷ್ಟು ಹಾಳಾಯಿತು.

ಇದೆಲ್ಲದಕ್ಕಿಂತ ಹೆಚ್ಚಾಗಿ 2016 ಮತ್ತು 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಮೂಗು ತೂರಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಅಂದರೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸೈಬರ್‌ ಅಟ್ಯಾಕ್‌ ಮಾಡಿ ಪ್ರಕ್ರಿಯೆಯನ್ನು ಹಾಳು ಮಾಡಲು ರಷ್ಯಾ ಯತ್ನಿಸಿದೆ ಎಂದು ಆರೋಪಿಸಲಾಯಿತು. ಈ ಬಗ್ಗೆ ತನಿಖೆಯೂ ನಡೆದಿತ್ತು. ಆದರೆ ಈ ಬೆಳವಣಿಗೆಗಳು, ರಷ್ಯಾ ಮತ್ತು ಅಮೆರಿಕ ಮತ್ತೆ ಒಂದಾಗಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದವು.

ಇದರ ಜತೆಗೆ ಕೊರೊನಾ ಅನಂತರದಲ್ಲಿನ ಲಸಿಕೆ ಕುರಿತಾಗಿಯೂ ಎರಡು ದೇಶಗಳ ನಡುವೆ ದೊಡ್ಡ ಪೈಪೋಟಿಯೇ ನಡೆಯಿತು. ಅಮೆರಿಕದ ಲಸಿಕೆಗಳಿಗೆ ವಿರುದ್ಧವಾಗಿ ರಷ್ಯಾ ಸ್ಪುಟ್ನಿಕ್‌ ವಿ ಎಂಬ ಲಸಿಕೆ ತಯಾರಿಸಿತು. ಆದರೆ ಅಮೆರಿಕ ಇದಕ್ಕೆ ಜಾಗತಿಕ ಮನ್ನಣೆ ಸಿಗದಂತೆ ಮಾಡಿತ್ತು. ಕಡೆಗೆ ಒಪ್ಪಿಗೆ ಸಿಕ್ಕಿತು.

ಸ್ಪೇಸ್‌ ರೇಸ್‌: ಅಮೆರಿಕ ಮತ್ತು ರಷ್ಯಾ ನಡುವೆ ಆರಂಭದಿಂದಲೂ ಸ್ಪೇಸ್‌ ವಾರ್‌ ಇದ್ದೇ ಇದೆ. ಹಾಗೆಯೇ ಇಲ್ಲೊಂದು ವಿಶೇಷವೂ ಇದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ರಷ್ಯಾ ಮತ್ತು ಅಮೆರಿಕ ಒಟ್ಟಿಗೇ ಸೇರಿ ನಿರ್ಮಿಸಿವೆ. ಆದರೆ ಉಪಗ್ರಹ ಉಡಾಯಿಸುವ ವಿಚಾರದಲ್ಲಿ ಮಾತ್ರ ಈ ಎರಡು ದೇಶಗಳ ಮಧ್ಯೆ ದೊಡ್ಡ ಸ್ಪರ್ಧೆ ಇದೆ.

ಸ್ಪೇಸ್‌ ವಾರ್‌ ಆರಂಭವಾಗಿದ್ದು 1955ರಲ್ಲಿ. ಆಗಷ್ಟೇ ಅಮೆರಿಕ ಭವಿಷ್ಯದ ಉಪಗ್ರಹ ಉಡಾಯಿಸುವ ಬಗ್ಗೆ ಘೋಷಣೆ ಮಾಡಿತ್ತು. ಇನ್ನೊಂದು ಕಡೆಯಲ್ಲಿ ರಷ್ಯಾ ಕೂಡ ಬಾಹ್ಯಾಕಾಶ ಕುರಿತ ಸಂಶೋಧನೆಯಲ್ಲಿ ತೊಡಗಿತು. ಇದರ ಫ‌ಲವೆಂಬಂತೆ 1957ರ ಅಕ್ಟೋಬರ್‌ 4ರಂದು, ರಷ್ಯಾ ಸ್ಪುಟ್ನಿಕ್‌ 1 ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿತು. ಅಲ್ಲದೆ, 1961ರಲ್ಲಿ ಯುಎಸ್‌ಎಸ್‌ಆರ್‌ ಮಾನವ ಸಹಿತ ಯೂರಿ ಗಗಾರಿನ್‌ ಎಂಬ ಉಪಗ್ರಹವನ್ನು ಯಶಸ್ವಿಯಾಗಿ ಕಳುಹಿಸಿತು. ಅಲ್ಲದೆ, ಲುನಾ ಕಾರ್ಯಕ್ರಮದಡಿಯಲ್ಲಿ ರೋಬ್ಯಾಟಿಕ್‌ ಮಿಷನ್‌ಗಳನ್ನು ನಡೆಸಿತು. ಇವೆಲ್ಲವೂ ಜಗತ್ತಿನಲ್ಲೇ ಮೊದಲು ಎನ್ನುವಂಥ ಕಾರ್ಯಕ್ರಮಗಳಾದವು.

ಇದಕ್ಕೆ ಪ್ರತಿಯಾಗಿ ಅಮೆರಿಕದ ಅಧ್ಯಕ್ಷ ಜಾನ್‌ ಎಫ್ ಕೆನಡಿ ಅವರು, ಮಾನವ ಸಹಿತ ರಾಕೆಟ್‌ ಅನ್ನು ಚಂದ್ರನ ಮೇಲ್ಮೆ„ಗೆ ಕಳುಹಿಸುವ ಬಗ್ಗೆ ನಿರ್ಧಾರ ಮಾಡಿದರು. ಅದರಂತೆ 1969ರಲ್ಲಿ ಅಪೋಲೋ 11 ರಾಕೆಟ್‌ ಮೂಲಕ ಮೂವರನ್ನೊಳಗೊಂಡ ಆರ್ಬಿಟರ್‌ ಮತ್ತು ಚಂದ್ರನ ಮೇಲೆ ಇಬ್ಬರನ್ನು ಇಳಿಸಲಾಯಿತು. ಇದು ಇತಿಹಾಸದಲ್ಲಿ ಅಚ್ಚಳಿಯದ ದಿನವಾಯಿತು. ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವ ಸಲುವಾಗಿ ಯುಎಸ್‌ಎಸ್‌ಆರ್‌ ಕೂಡ ಪ್ರಯತ್ನಿಸಿತಾದರೂ ಅದು ಫ‌ಲಕೊಡಲಿಲ್ಲ.

-ಸೋಮಶೇಖರ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next