ವಾಷಿಂಗ್ಟನ್: ಚೀನ ಸೇನೆ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆಸಿದ್ದ ಸೇನಾ ದುಸ್ಸಾಹಸದ ಬಗ್ಗೆ ನಿರಂತರವಾಗಿ ಭಾರತಕ್ಕೆ ಗುಪ್ತಚರ ಮಾಹಿತಿ ಒದಗಿಸಲಾಗಿತ್ತು ಎಂಬ ಅಂಶವನ್ನು ದೃಢಪಡಿಸಲು ಅಮೆರಿಕ ನಿರಾಕರಿಸಿದೆ.
ಶ್ವೇತಭವನದಲ್ಲಿ ನಡೆದ ದೈನಂದಿನ ಪತ್ರಿಕಾಗೋಷ್ಠಿ ವೇಳೆ ಪತ್ರಕರ್ತರು ಈ ಬಗ್ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಮನ್ವಯಕಾರ ಜಾನ್ ಕಿರ್ಬಿ ಪ್ರತಿಕ್ರಿಯೆ ನೀಡಿ “ಇಲ್ಲ. ಭಾರತಕ್ಕೆ ಅಮೆರಿಕ ಗುಪ್ತಚರ ವರದಿ ನೀಡಿತ್ತು ಎಂಬ ಅಂಶವನ್ನು ದೃಢಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
2022 ಡಿ.9ರಂದು ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಚೀನಾ ಸೇನೆ ನುಗ್ಗಿ, ದೇಶದ ನೆಲ ವಶಪಡಿಸುವ ಪ್ರಯತ್ನ ಮಾಡಿತ್ತು. ಅದನ್ನು ವೀರ ಯೋಧರು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದರು.
ಇದೇ ಮೊದಲ ಬಾರಿಗೆ ಅಮೆರಿಕ ಭಾರತಕ್ಕೆ ಚೀನ ಸೇನೆಯ ದುಸ್ಸಾಹಸದ ಬಗ್ಗೆ ಗುಪ್ತಚರ ಸಂಸ್ಥೆಗಳ ಮೂಲಕ ಪದೇ ಪದೆ ಮಾಹಿತಿ ನೀಡಿತ್ತು. ಇದರಿಂದಾಗಿಯೇ ತವಾಂಗ್‌ನಲ್ಲಿ ಚೀನ ಸೇನೆಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಯಿತು.
ಚೀನ ಸೇನೆಗಳು ಮತ್ತು ಅದರ ಚಲನವಲನಗಳ ಬಗ್ಗೆ ಉಪಗ್ರಹ ಚಿತ್ರಗಳ ಸಹಿತವಾಗಿರುವ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿತ್ತು.
ಈ ವರದಿಯ ಬಳಿಕ ಡ್ರ್ಯಾಗನ್ ಸೇನೆಯ ದುಸ್ಸಾಹಸ ವಿಫಲವಾಗಿತ್ತು. ಜತೆಗೆ ಚೀನದ ಕಮ್ಯೂನಿಸ್ಟ್ ಪಾರ್ಟಿ ಭಾರತದ ವಿರುದ್ಧ ತನ್ನ ಕಾರ್ಯತಂತ್ರವನ್ನೂ ಬದಲು ಮಾಡುವಂತೆ ಮಾಡಿದೆ ಎಂದೂ ಆ ವರದಿಯಲ್ಲಿ ಉಲ್ಲೇಖೀಸಲಾಗಿದೆ.