ವಾಷಿಂಗ್ಟನ್:ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ 2020ನೇ ಸಾಲಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರನ್ನು ಗದ್ದುಗೆಯಲ್ಲಿ ಕೂರಿಸಬೇಕೆಂಬುದನ್ನು ಅಮೆರಿಕದ ಮತದಾರರು ಬಹುತೇಕ ನಿರ್ಧರಿಸಿದ್ದು, ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ವರ್ಜಿನಿಯಾದಲ್ಲಿ ಮಂಗಳವಾರ (ನವೆಂಬರ್ 3, 2020) ಮತದಾನ ಆರಂಭಗೊಂಡಿರುವುದಾಗಿ ವರದಿ ತಿಳಿಸಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ 19 ಸೋಂಕಿನ ಆತಂಕದ ನಡುವೆಯೂ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಈಗಾಗಲೇ 95 ಲಕ್ಷ ಜನರು ಮತ ಚಲಾಯಿಸಿದ್ದಾರೆ. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ 270 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ವರದಿ ವಿವರಿಸಿದೆ.
ಅಮೆರಿಕದ ಸೆನೆಟರ್, ಡೆಮೋಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರೀಸ್ ಟ್ವೀಟ್ ಮೂಲಕ, ಮಾಸ್ಕ್ ಧರಿಸಿ, ನಿಮ್ಮ ಮತಗಟ್ಟೆಯಲ್ಲಿ ಮತ ಚಲಾಯಿಸಿ ಎಂದು ಪೋಸ್ಟ್ ಮಾಡಿದ್ದರು. ಅಮೆರಿಕದ ಮತದಾರರು 3 ರೀತಿಯಲ್ಲಿ ಮತದಾನ ಮಾಡಬಹುದು. 1) ಮತಗಟ್ಟೆಗೆ ತೆರಳಿ 2) ಇ-ಮತದಾನ 3) ಬ್ಯಾಲೆಟ್ ಪೇಪರ್ ಮೂಲಕ. ಬ್ಯಾಲೆಟ್ ಪೇಪರ್ ಗಳನ್ನು ಮತದಾರರಿಗೆ ಹಂಚಲಾಗುತ್ತದೆ. ಬಳಿಕ ಪೋಸ್ಟ್ ಮೂಲಕ ವಾಪಸ್ ತರಿಸಿ ಎಣಿಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಅಂಗವಿಕಲರು, ವಯೋವೃದ್ಧರು, ಗರ್ಭಿಣಿಯರು ಪೋಸ್ಟಲ್ ವೋಟಿಂಗ್ ಮಾಡುತ್ತಾರೆ. ಆದರೆ ಇವರು ಮೊದಲೇ ರಿಜಿಸ್ಟರ್ ಮಾಡಿಸಿರಬೇಕು.
ಇದನ್ನೂ ಓದಿ:ರಾಜ್ಯಸಭೆಯಲ್ಲಿ “ಕೈ” ತಪ್ಪಿಹೋದ ಬಹುಮತದ ಅಸ್ತ್ರ! ಈಗ ಬಿಜೆಪಿ ಮತ್ತಷ್ಟು ಬಲಿಷ್ಠ
ಈ ಬಾರಿ ಕೋವಿಡ್ ನಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೆಲವು ರಾಜ್ಯಗಳು ಪೋಸ್ಟಲ್ ವೋಟಿಂಗ್ ಎಣಿಕೆ ಆರಂಭಿಸಿವೆ. ಇನ್ನು ಕೆಲವು ನವೆಂಬರ್ 3ರ ನಂತರ ಎಣಿಕೆ ಆರಂಭಿಸಿದ್ದು, ಗುರುವಾರ ಬೆಳಗ್ಗೆ ಪೂರ್ಣ ಪ್ರಮಾಣದ ಫಲಿತಾಂಶ ಹೊರಬೀಳಲಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಸಮೀಕ್ಷೆಗಳು ಏನು ಹೇಳುತ್ತಿವೆ?
ಫೈನಲ್ ರಾಯಿಟರ್ಸ್ ಮತ್ತು ಇಪ್ಸೋಸ್ ರಾಷ್ಟ್ರೀಯ ಸಮೀಕ್ಷೆಯಲ್ಲಿ, ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಪರ ಶೇ.52ರಷ್ಟು ಮತದಾರರು ಒಲವು ವ್ಯಕ್ತಪಡಿಸಿದ್ದು, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಪರ ಶೇ.44ರಷ್ಟು ಮತದಾರರು ಒಲವು ವ್ಯಕ್ತಪಡಿಸಿರುವುದಾಗಿ ತಿಳಿಸಿದೆ.
ಈ ರಾಷ್ಟ್ರೀಯ ಸಮೀಕ್ಷೆ ಅಕ್ಟೋಬರ್ 29ರಿಂದ ನವೆಂಬರ್ 2ರವರೆಗೆ ನಡೆದಿದ್ದು, 1,333 ವಯಸ್ಕರಿಂದ ಪಡೆದ ಪ್ರತಿಕ್ರಿಯೆನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ ಎಂದು ಹೇಳಿದೆ. ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಅವರು ಫ್ಲೋರಿಡಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿಂತ ಸ್ವಲ್ಪ ಮುನ್ನಡೆ ಸಾಧಿಸಿರುವುದಾಗಿ ಸಮೀಕ್ಷೆ ಹೇಳಿದೆ.