ವಾಷಿಂಗ್ಟನ್: ವಿಶ್ವದ ಗಮನ ಸೆಳೆದಿರುವ ಅಮೆರಿಕದ ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷೀಯ ಚುನಾವಣೆಗೆ ನಡೆದ ಮತದಾನ ಬಹುತೇಕ ಪೂರ್ಣಗೊಂಡಿದ್ದು, ಮೊದಲ ಹಂತದ ಫಲಿತಾಂಶಗಳು ಹೊರಬೀಳುತ್ತಿದೆ. ಹಾಲಿ ಅಧ್ಯಕ್ಷರಾಗಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ನಡುವೆ ನೇರಾನೇರಾ ಹಣಾಹಣಿ ಏರ್ಪಟ್ಟಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆಂಟುಕಿ, ಇಂಡಿಯಾನಾ, ಸೌಥ್ ಕರೋಲಿನಾ ದಲ್ಲಿ ಜಯಗಳಿಸಿದ್ದಾರೆ. ಜೋ ಬೈಡನ್ ಅವರು ಟೆಕ್ಸಾಸ್, ಜಾರ್ಜಿಯಾ, ಫ್ಲೋರಿಡಾ, ಹ್ಯಾಂಪ್ ಶೈರ್, ವರ್ಮೊಂಟ್ ವಶಪಡಿಸಿಕೊಂಡಿದ್ದಾರೆ.
ಜಯ ದಾಖಲಿಸಲು 270 ಎಲೆಕ್ಟೋರಲ್ ಮತಗಳು ಅಗತ್ಯ. ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು 23.9 ಕೋಟಿ ಮತದಾರರಲ್ಲಿ 9.3 ಕೋಟಿ ಜನರು ಮುಂಚಿತವಾಗಿ ತಮ್ಮ ಹಕ್ಕು ಚಲಾಯಿಸಿದ್ದರು.
ಇಂದಿನ ಚುನಾವಣಾ ಫಲಿತಾಂಶ ತಡವಾಗಿ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಬಿಗುವಿನ ಚುನಾವಣೆ ಎಂದು ವಿಶ್ಲೇಷಿಸಲಾಗಿರುವ ಈ ಚುನಾವಣೆಯಲ್ಲಿ ಯಾರೂ ಗೆದ್ದರೂ ಅದೊಂದು ಇತಿಹಾಸವೇ ಆಗಲಿದೆ. ಪ್ರಮುಖವಾಗಿ ಕೋವಿಡ್ ವೈರಸ್ ಹಾವಳಿಯ ಕಾರಣಕ್ಕೆ ಈ ಬಾರಿ ಅಮೆರಿಕದಲ್ಲಿ ಮೇಲ್-ಇನ್ ಮತದಾನದಲ್ಲಿ ಭಾರೀ ಹೆಚ್ಚಳವಾಗಿದೆ. ಹೀಗಾಗಿ ಬಹುತೇಕ ರಾಜ್ಯಗಳಲ್ಲಿ ಅಂಚೆ ಮತಗಳನ್ನು ಎಣಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.
ಈ ಬಾರಿ ಅಂಚೆ ಮತದಾನದ ಪ್ರಮಾಣ ಸುಮಾರು 8 ಕೋಟಿಗಳಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದ್ದು, ಬಹುತೇಕ ರಾಜ್ಯಗಳಲ್ಲಿ ಮತ ಎಣಿಕೆ ಕಾರ್ಯ ವಿಳಂಬವಾಗಲಿದೆ. ಹೀಗಾಗಿ ನೇರ ಮತದಾನದ ಮೂಲಕ ಸ್ಪಷ್ಟ ಚಿತ್ರಣ ದೊರೆಯದಿರುವ ಸಾಧ್ಯತೆ ಇದ್ದು, ಅಂಚೆ ಮತದಾನದ ಮತಗಳ ಎಣಿಕೆ ಕಾರ್ಯ ಮುಗಿದ ಬಳಿಕವಷ್ಟೇ ಹೊಸ ಅಧ್ಯಕ್ಷರ ಹೆಸರನ್ನು ಘೋಷಿಸಬೇಕಾಗುತ್ತದೆ.