ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಯ ಸೋಲನ್ನು ಒಪ್ಪಿಕೊಳ್ಳದೇ, ಅಧಿಕಾರವನ್ನು ಹಸ್ತಾಂತರಿಸುವಲ್ಲಿ ವಿಳಂಬ ಮಾಡುವ ಮೂಲಕ ಅಂತಾರಾಷ್ಟ್ರೀಯ ಸಮುದಾಯಕ್ಕೆ ಅವಿಶ್ವಾಸದ ಅಪಾಯಕಾರಿ ಸಂದೇಶವನ್ನು ರವಾನಿಸುತ್ತಿದ್ದಾರೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
ಅಮೆರಿಕ ಸೇರಿದಂತೆ ಜಗತ್ತಿನ ಪ್ರಮುಖ ಸುದ್ದಿಸಂಸ್ಥೆ, ದೃಶ್ಯ ಮಾಧ್ಯಮಗಳು ನವೆಂಬರ್ 3ರಂದು ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಅವರು ಗೆಲುವು ಸಾಧಿಸಿರುವುದಾಗಿ ಘೋಷಿಸಿದ್ದವು.
ಏತನ್ಮಧ್ಯೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಮರು ಮತಎಣಿಕೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಮರುಮತ ಎಣಿಕೆಯಲ್ಲಿಯೂ ಟ್ರಂಪ್ ಸೋಲನ್ನು ಅನುಭವಿಸಿದ್ದರು. ಆದರೂ ಟ್ರಂಪ್ ಸೋಲನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲದೇ ಅಧಿಕಾರ ಹಸ್ತಾಂತರ ವಿಳಂಬ ಮಾಡುತ್ತಿರುವುದಾಗಿ ಜೋ ಬೈಡೆನ್ ಆರೋಪಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರೀ ಪ್ರಮಾಣದ ಮೋಸ ಹಾಗೂ ಕಳ್ಳ ಮತಚಲಾವಣೆ ನಡೆಸಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಆದರೆ ಚುನಾವಣಾ ಅಧಿಕಾರಿಗಳು ಈ ಆರೋಪವನ್ನು ತಳ್ಳಿಹಾಕಿದ್ದಾರೆ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:ಸುರತ್ಕಲ್: ಪ್ರಯಾಣಿಕನ ಜೀವ ಉಳಿಸಲು ದಿನಪೂರ್ತಿ ಆಸ್ಪತ್ರೆಗೆ ಅಲೆದಾಡಿದ ಬಸ್ ನಿರ್ವಾಹಕ
ಪ್ರಜಾಪ್ರಭುತ್ವ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬ ಬಗ್ಗೆ ಟ್ರಂಪ್ ಜಗತ್ತಿನ ಉಳಿದ ದೇಶಗಳಿಗೆ ಬೇಜವಾಬ್ದಾರಿತನದ, ಅವಿಶ್ವಾಸದ ಹಾನಿಕಾರಕ ಸಂದೇಶವನ್ನು ರವಾನಿಸುತ್ತಿದ್ದಾರೆ ಎಂಬ ಭಾವನೆ ಬರುತ್ತಿದೆ. ನನಗೆ ಟ್ರಂಪ್ ಅವರ ಉದ್ದೇಶ ಏನೆಂದು ತಿಳಿಯುತ್ತಿಲ್ಲ. ಆದರೆ ಇದೊಂದು ತೀರಾ ಬೇಜವಾಬ್ದಾರಿತನವಾಗಿದೆ ಎಂದು ಬೈಡೆನ್ ತಿಳಿಸಿದ್ದಾರೆ.