Advertisement

US Open ಟೆನಿಸ್‌ ಅಲ್ಕರಾಜ್‌, ಮೆಡ್ವೆಡೇವ್‌ ಸೆಮಿಗೆ

11:26 PM Sep 07, 2023 | Team Udayavani |

ನ್ಯೂಯಾರ್ಕ್‌: ವಿಶ್ವದ ನಂಬರ್‌ ವನ್‌ ಕಾರ್ಲೋಸ್‌ ಅಲ್ಕರಾಜ್‌ ಸಾಕಷ್ಟು ಬಳಲಿದ ಅಲೆಕ್ಸಾಂಡರ್‌ ಜ್ವೆರೇವ್‌ ಅವರನ್ನು ಸುಲಭ ಗೆಲುವಿನೊಂದಿಗೆ ಯುಎಸ್‌ ಓಪನ್‌ ಟೆನಿಸ್‌ ಕೂಟದ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಹಂತಕ್ಕೇರಿದ್ದಾರೆ. ಸೆಮಿಫೈನಲ್‌ ಹೋರಾಟದಲ್ಲಿ ಅವರು ಡ್ಯಾನಿಲ್‌ ಮೆಡ್ವೆಡೇವ್‌ ಅವರ ಸವಾಲನ್ನು ಎದುರಿಸಲಿದ್ದಾರೆ.

Advertisement

2020ರಲ್ಲಿ ಯುಎಸ್‌ ಓಪನ್‌ನ ಫೈನಲಿಸ್ಟ್‌ ಗಿದ್ದ ಜ್ವೆರೇವ್‌ ಅವರು ಅಲ್ಕರಾಜ್‌ ಅವರ ಪ್ರಬಲ ಹೊಡೆತಗಳಿಗೆ ಉತ್ತರಿಸಲು ವಿಫ‌ಲವಾಗಿ 3-6, 2-6, 4-6 ಸೆಟ್‌ಗಳಿಂದ ಸೋತು ನಿರ್ಗಮಿಸಿದರು. . ಈ ಹಿಂದಿನ ಪಂದ್ಯದ ಮ್ಯಾರಥಾನ್‌ ಐದು ಸೆಟ್‌ಗಳ ಹೋರಾಟದ ಬಳಿಕ ಬಳಲಿದ್ದ ಜ್ವೆರೇವ್‌ ಕ್ವಾರ್ಟರ್‌ಫೈನಲ್‌ನಲ್ಲಿ ಮತ್ತೆ ಪ್ರಬಲವಾಗಿ ಹೋರಾಡಲು ಸಾಧ್ಯವಾಗಲೇ ಇಲ್ಲ. ಜಾನ್ನಿಕ್‌ ಸಿನ್ನರ್‌ ವಿರುದ್ಧದ ಐದು ಸೆಟ್‌ಗಳ ಹೋರಾಟವು ಈ ಕೂಟದ ಸುದೀರ್ಘ‌ ಪಂದ್ಯವಾಗಿದೆ.

ಅವರು ಉತ್ತಮ ನಿರ್ವಹಣೆ ನೀಡಲು ಒದ್ದಾಡುತ್ತಿದ್ದರು. ಹಿಂದಿನ ದೀರ್ಘ‌ ಪಂದ್ಯ ಮತ್ತು ಬಹಳಷ್ಟು ಸೆಕೆಯಿಂದ ಅವರು ಇನ್ನಷ್ಟು ಬಳಲಿದರು ಎಂದು ಪಂದ್ಯದ ಬಳಿಕ ಅಲ್ಕರಾಜ್‌ ಹೇಳಿದರು.

ಮೆಡ್ವೆಡೇವ್‌ ಮುನ್ನಡೆ
ಮೂರನೇ ಶ್ರೇಯಾಂಕದ ರಷ್ಯಾದ ಡ್ಯಾನಿಲ್‌ ಮೆಡ್ವೆಡೇವ್‌ ತನ್ನದೇ ದೇಶದ ಮತ್ತು ಮಗಳ ಸ್ನೇಹಿತ ಆ್ಯಂಡ್ರೆ ರುಬ್ಲೆವ್‌ ಅವರನ್ನು 6 -4, 6-3, 6-4 ನೇರ ಸೆಟ್‌ಗಳಿಂದ ಕೆಡಹಿ ಸೆಮಿಫೈನಲ್‌ ಹಂತಕ್ಕೇರಿದ್ದಾರೆ. 2021ರ ಚಾಂಪಿಯನ್‌ ಮೆಡ್ವೆಡೇವ್‌ ಇಲ್ಲಿ ಕಳೆದ ಐದು ವರ್ಷಗಳಲ್ಲಿ ನಾಲ್ಕು ಬಾರಿ ಸೆಮಿಫೈನಲ್‌ ತಲುಪಿದ ಸಾಧನೆ ಮಾಡಿದ್ದಾರೆ.

ಗ್ರ್ಯಾನ್‌ ಸ್ಲಾಮ್‌ ಕೂಟದಲ್ಲಿ ರುಬ್ಲೆವ್‌ 9ನೇ ಬಾರಿ ಕ್ವಾರ್ಟರ್‌ಫೈನಲ್‌ ಹಂತದಲ್ಲಿಯೇ ಎಡವಿ ನಿರಾಶೆಗೊಂಡಿದ್ದಾರೆ. ಅದರಲ್ಲಿಯೂ ಉತ್ತಮ ಸ್ನೇಹಿತ ಮೆಡ್ವೆಡೇವ್‌ ವಿರುದ್ಧ ಮೂರನೇ ಮತ್ತು ಯುಎಸ್‌ ಓಪನ್‌ನಲ್ಲಿ ಎರಡನೇ ಬಾರಿ ಸೋತಿದ್ದಾರೆ. 2020ರ ಯುಎಸ್‌ ಓಪನ್‌ ಮತ್ತು 2021ರ ಆಸ್ಟ್ರೇಲಿಯನ್‌ ಓಪನ್‌ನ ಕ್ವಾರ್ಟರ್‌ಫೈನಲ್‌ ಹಂತದಲ್ಲಿ ಮೆಡ್ವೆಡೇವ್‌ ಅವರು ರುಬ್ಲೆವ್‌ ಅವರನ್ನು ಕೆಡಹಿದ್ದರು.

Advertisement

ಸಬಲೆಂಕಾ ಸೆಮಿಗೆ
ದ್ವಿತೀಯ ಶ್ರೇಯಾಂಕದ ಬಲರೂಸ್‌ನ ಆರ್ಯನಾ ಸಬಲೆಂಕಾ ಚೀನದ ಎದುರಾಳಿ ಝೆಂಗ್‌ ಕ್ವಿನ್‌ವೆನ್‌ ಅವರನ್ನು 6-1, 6-4 ನೇರ ಸೆಟ್‌ಗಳಿಂದ ಸೋಲಿಸಿ ವನಿತೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ತಲುಪಿದ್ದಾರೆ. ಮುಂದಿನ ವಾರ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಟ್ಟ ಏರಲಿರುವ ಸಬಲೆಂಕಾ ಅವರು ಸೆಮಿಫೈನಲ್‌ ಹೋರಾಟದಲ್ಲಿ ಅಮೆರಿಕದ ಮ್ಯಾಡಿಸನ್‌ ಕೀಸ್‌ ಅವರನ್ನು ಎದುರಿಸಲಿದ್ದಾರೆ.

ಈ ಹಿಂದೆ ಗ್ರ್ಯಾನ್‌ ಸ್ಲಾಮ್‌ ಕೂಟದಲ್ಲಿ ಕ್ವಾರ್ಟರ್‌ಫೈನಲ್‌ ತಲುಪಲು ವಿಫ‌ಲವಾಗಿದ್ದ ಝೆಂಗ್‌ ಇಲ್ಲಿ 23 ಅನಗತ್ಯ ತಪ್ಪುಗಳನ್ನು ಮಾಡಿ ಪಂದ್ಯ ಕಳೆದುಕೊಂಡರು. ಆಸ್ಟ್ರೇಲಿಯನ್‌ ಓಪನ್‌ ವಿಜೇತೆ ಸಬಲೆಂಕಾ ಈ ವರ್ಷ ಇಲ್ಲಿ ಒಂದೇ ಒಂದು ಸೆಟ್‌ ಕಳೆದುಕೊಂಡಿಲ್ಲ. ಮೊದಲ ಐದು ಗೇಮ್‌ ಸುಲಭವಾಗಿ ಗೆದ್ದಿದ್ದ ಸಬಲೆಂಕಾ ಈ ವೇಳೆ ಮೊದಲ ಸರ್ವ್‌ನ ಅಂಕವನ್ನು ಒಮ್ಮೆ ಮಾತ್ರ ಕೈಚೆಲ್ಲಿದ್ದರು.

ಸಬಲೆಂಕಾ ಅವರ ಸೆಮಿಫೈನಲ್‌ ಎದುರಾಳಿ ಮ್ಯಾಡಿಸನ್‌ ಕೀಸ್‌ ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ವಿಂಬಲ್ಡನ್‌ ಚಾಂಪಿಯನ್‌ ಮಾರ್ಕೆಟಾ ವೊಂಡ್ರೊಸೋವಾ ಅವರನ್ನು 6-1, 6-4 ಸೆಟ್‌ಗಳಿಂದ ಸೋಲಿಸಿದ್ದರು. 2017ರಲ್ಲಿ ಇಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದ ಕೀಸ್‌ ಈ ಮೊದಲು ತವರಿನ ಗ್ರ್ಯಾನ್‌ ಸ್ಲಾಮ್‌ನಲ್ಲಿ ಬೇಗನೇ ಔಟಾಗಿದ್ದರೂ ಈ ಬಾರಿ ಅಮೋಘ ನಿರ್ವಹಣೆ ನೀಡಿ ಪ್ರಶಸ್ತಿಯತ್ತ ದಾಪುಗಾಲು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next