Advertisement
ರಫೆಲ್ ನಡಾಲ್ ಆರ್ಜೆಂಟೀನಾದ 24ನೇ ಶ್ರೇಯಾಂಕದ ಅಪಾಯಕಾರಿ ಆಟಗಾರ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ ಮೊದಲ ಸೆಟ್ ಕಳೆದುಕೊಂಡ ಬಳಿಕ ತಿರುಗಿ ಬಿದ್ದರು. ನಡಾಲ್ ಗೆಲುವಿನ ಅಂತರ 4-6, 6-0, 6-3, 6-2. ಇನ್ನೊಂದು ಸೆಮಿಫೈನಲ್‌ನಲ್ಲಿ 28ನೇ ಶ್ರೇಯಾಂಕದ ಕೆವಿನ್ ಆ್ಯಂಡರ್ಸನ್ ಸ್ಪೇನಿನ ಪಾಬ್ಲೊ ಕರೆನೊ ಬುಸ್ಟ ವಿರುದ್ಧವೂ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಬಳಿಕವೇ ಗೆಲುವಿನ ಲಯಕ್ಕೆ ಮರಳಿದರು. ಅಂತರ 4-6, 7-5, 6-3, 6-4. ಆ್ಯಂಡರ್ಸನ್ ಜಯದೊಂದಿಗೆ “ಆಲ್ ಸ್ಪೇನ್ ಫೈನಲ್’ ತಪ್ಪಿತು.
Related Articles
ಇತಿಹಾಸ, ಬಲಾಬಲ, ಫಾರ್ಮ್, ಆನುಭವ… ಇವನ್ನೆಲ್ಲ ಅವಲೋಕಿಸುವಾಗ ರವಿವಾರದ ಫೈನಲ್‌ನಲ್ಲಿ ರಫೆಲ್ ನಡಾಲ್ ಅವರೇ ನೆಚ್ಚಿನ ಆಟಗಾರನಾಗಿ ಗೋಚರಿಸುತ್ತಾರೆ. ಅಕಸ್ಮಾತ್ ಆ್ಯಂಡರ್ಸನ್ ಗೆದ್ದರೆ ಆದೊಂದು ಪವಾಡ!
ಈವರೆಗೆ ನಡಾಲ್-ಆ್ಯಂಡರ್ಸನ್ 4 ಸಲ ಮುಖಾಮುಖೀಯಾಗಿದ್ದು, ನಾಲ್ಕರಲ್ಲೂ ಗೆದ್ದ ಸ್ಪೇನಿಗ ಅಜೇಯ ದಾಖಲೆ ಕಾಯ್ದುಕೊಂಡಿದ್ದಾರೆ. ಇವರಿಬ್ಬರು ಈವರೆಗೆ ಗ್ರ್ಯಾನ್‌ಸ್ಲಾಮ್‌ನಲ್ಲಿ ಎದುರಾದದ್ದು ಒಮ್ಮೆ ಮಾತ್ರ. ಅದು 2015ರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯ. ಇಲ್ಲಿ ನಡಾಲ್ 7-5, 6-1, 6-4ರಿಂದ ಜಯ ಸಾಧಿಸಿದ್ದರು.
Advertisement
ನಡಾಲ್ ಈವರೆಗೆ 2 ಸಲ ಯುಎಸ್ ಓಪನ್ ಚಾಂಪಿಯನ್ ಆಗಿದ್ದಾರೆ. 2010ರಲ್ಲಿ ನೊವಾಕ್ ಜೊಕೋವಿಕ್ ಅವರನ್ನು 4 ಸೆಟ್‌ಗಳ ಕಾದಾಟದಲ್ಲಿ ಮಣಿಸಿ ಮೊದಲ ಸಲ ಯುಎಸ್ ಓಪನ್ ಪ್ರಶಸ್ತಿ ಜಯಿಸಿದರು. 2011ರಲ್ಲಿ ಅವರಿಗೆ ಪ್ರಶಸ್ತಿ ಉಳಿಸಿಕೊಳ್ಳಲು ಜೊಕೋವಿಕ್ ಅವಕಾಶ ನೀಡಲಿಲ್ಲ. ಬಳಿಕ 2013ರಲ್ಲಿ ಮತ್ತೆ ಜೊಕೋವಿಕ್ ಅವರನ್ನೇ ಮಣಿಸಿ 2ನೇ ಸಲ ಪ್ರಶಸ್ತಿಗೆ ಪಾತ್ರರಾದರು. ಇವೆಲ್ಲವೂ 4 ಸೆಟ್‌ಗಳ ಕಾದಾಟವಾಗಿದ್ದವು.
ಈ ವರ್ಷ ದಾಖಲೆ 10ನೇ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ ರಫೆಲ್ ನಡಾಲ್ ಒಟ್ಟು 15 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ.
ಡೆಲ್ ಪೊಟ್ರೊ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ ನಡಾಲ್ 2009ರ ಯುಎಸ್ ಓಪನ್ ಸೆಮಿಫೈನಲ್ ಸೋಲಿಗೆ ಸೇಡು ತೀರಿಸಿಕೊಂಡರು. “ಗಾಯದ ಸಮಸ್ಯೆಗಳನ್ನೆಲ್ಲ ಮೀರಿ ನಿಂತಿರುವ ನಾನೀಗ ಮತ್ತೂಂದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗೆ ಹತ್ತಿರವಾಗಿದ್ದೇನೆ. ಸಹಜವಾಗಿಯೇ ಅಪಾರ ಖುಷಿಯಾಗುತ್ತಿದೆ. ಡೆಲ್ ಪೊಟ್ರೊ ವಿರುದ್ಧ ಮೊದಲ ಸೆಟ್‌ನಲ್ಲಿ ನಾನೇನೂ ಕಳಪೆ ಆಟವಾಡಲಿಲ್ಲ. ಆಗ ಅವರ ಫೋರ್‌ಹ್ಯಾಂಡ್ ಹೊಡೆತ ಮತ್ತು ಸರ್ವ್ ಅತ್ಯಂತ ಪ್ರಬಲವಾಗಿತ್ತು. ಹೀಗಾಗಿ ನಾನು ರಕ್ಷಣಾತ್ಮಕ ಆಟ ಆಡಬೇಕಾಯಿತು…’ ಎಂದು ನಡಾಲ್ ಹೇಳಿದರು.
ಕೆವಿನ್ ಆ್ಯಂಡರ್ಸನ್ ಅವರದು ಅದೃಷ್ಟದ ಪಯಣ. ಆ್ಯಂಡಿ ಮರ್ರೆ ಗಾಯಾಳಾಗಿ ಹೊರಗುಳಿದುದರಿಂದ ಈ 2.03 ಮೀ. ಲಂಬೂಗೆ ಅನುಕೂಲಕರವಾದ ಡ್ರಾ ಲಭಿಸಿತು. ಆದರೆ ಫೈನಲ್‌ನಲ್ಲಿ ಈ ಅದೃಷ್ಟ ಕೈ ಹಿಡಿದೀತೇ ಎಂಬುದು ಮಾತ್ರ ಮಿಲಿಯಮ್ ಡಾಲರ್ ಪ್ರಶ್ನೆ!
ಫೈನಲ್ ಸ್ಪರ್ಧೆ ಭಾರತೀಯ ಕಾಲಮಾನದ ಪ್ರಕಾರ ರವಿವಾರ ನಡುರಾತ್ರಿ ಬಳಿಕ 1.30ಕ್ಕೆ ಆರಂಭವಾಗಲಿದೆ.