Advertisement
ಶನಿವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯ 5ನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೇವ್ ಪಾಲಿಗೆ ಸಂಪೂರ್ಣ ಅದೃಷ್ಟದಾಟವಾಗಿತ್ತು. ಸ್ಪೇನಿನ 20ನೇ ಶ್ರೇಯಾಂಕದ ಪಾಬ್ಲೊ ಕರೆನೊ ಬುಸ್ಟ ವಿರುದ್ಧ ಮೊದಲೆರಡು ಸೆಟ್ ಕಳೆದುಕೊಂಡು ಇನ್ನೇನು ಗಂಟುಮೂಟೆ ಕಟ್ಟಬೇಕು ಎನ್ನುವ ಹಂತದಲ್ಲಿ ಜ್ವೆರೇವ್ ಆಟ ಒಮ್ಮೆಲೇ ಜೋರಾಯಿತು. ಅನಂತರದ ಮೂರೂ ಸೆಟ್‌ಗಳನ್ನು ವಶಪಡಿಸಿಕೊಂಡು ಮೊದಲ ಸಲ ಗ್ರ್ಯಾನ್‌ಸ್ಲಾಮ್ ಫೈನಲ್‌ಗೆ ಲಗ್ಗೆ ಇರಿಸಿದರು. ಜ್ವೆರೇವ್ ಗೆಲುವಿನ ಅಂತರ 3-6, 2-6, 6-3, 6-4, 6-3.ದ್ವಿತೀಯ ಉಪಾಂತ್ಯದಲ್ಲಿ ಡೊಮಿನಿಕ್ ಥೀಮ್ ತೀವ್ರ ಪೈಪೋಟಿಯೊಡ್ಡಿದ ರಶ್ಯದ ಡ್ಯಾನಿಲ್ ಮೆಡ್ವೆಡೇವ್ ಅವರನ್ನು 6-2, 7-6 (9-7), 7-6 (7-5) ಅಂತರದಿಂದ ಪರಾಭ ವಗೊಳಿಸಿದರು. ಮೆಡ್ವೆಡೇವ್ ಕಳೆದ ವರ್ಷ ಇಲ್ಲಿ ಫೈನಲ್‌ಗೆ ಲಗ್ಗೆ ಹಾಕಿ ರಫೆಲ್ ನಡಾಲ್‌ಗೆ ಶರಣಾಗಿದ್ದರು.
ಆಸ್ಟ್ರಿಯಾದ ಡೊಮಿನಿಕ್ ಪಾಲಿಗೆ ಇದು 4ನೇ ಗ್ರ್ಯಾನ್‌ಸ್ಲಾಮ್ ಫೈನಲ್ ಆಗಿದೆ. ದುರದೃಷ್ಟವೆಂದರೆ, ಹಿಂದಿನ ಮೂರೂ ಪ್ರಶಸ್ತಿ ಸಮರಗಳಲ್ಲಿ ಇವರಿಗೆ ಸೋಲೇ ಸಂಗಾತಿಯಾಗಿತ್ತು. 2018 ಮತ್ತು 2019ರ ಫ್ರೆಂಚ್ ಓಪನ್ ಫೈನಲ್, ಈ ವರ್ಷದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲೆಲ್ಲ ಥೀಮ್ ಅವರದು ಸೋಲಿನದೇ ಗೇಮ್‌ಆಗಿತ್ತು. ಸಮಾಧಾನವೆಂದರೆ, ಎರಡೂ ಸಲ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಇವರನ್ನು ಸೋಲಿಸಿದ ರಫೆಲ್ ನಡಾಲ್ ಆಗಲಿ, ವರ್ಷಾರಂಭದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪರಾಭವಗೊಳಿಸಿದ ನೊವಾಕ್ ಜೊಕೋವಿಕ್ ಆಗಲಿ ಇವರ ಎದುರಾಳಿ ಅಲ್ಲ ಎಂಬುದು.
Related Articles
ರಶ್ಯದ ವೆರಾ ಜೊನರೇವಾ ಮತ್ತು ಜರ್ಮನಿಯ ಲಾರಾ ಸಿಗ್ಮಂಡ್ ಜೋಡಿ ಯುಎಸ್ ಓಪನ್ ವನಿತಾ ಡಬಲ್ಸ್ ಪ್ರಶಸ್ತಿ ಜಯಿಸಿದೆ. ಫೈನಲ್ ಮುಖಾಮುಖಿಯಲ್ಲಿ ಇವರು ಕ್ಸು ಯಿಫಾನ್ (ಚೀನ) -ನಿಕೋಲ್ ಮೆಲಿಶರ್ (ಅಮೆರಿಕ)ವಿರುದ್ಧ 6-4, 6-4 ನೇರ ಸೆಟ್‌ಗಳಿಂದ ಗೆದ್ದು ಬಂದರು. 400,000 ಡಾಲರ್ ಬಹುಮಾನ ಮೊತ್ತವನ್ನು ತಮ್ಮ ಖಾತೆಗೆ ಸೇರಿಸಿದರು.5 ದಿನಗಳ ಹಿಂದಷ್ಟೇ 36ನೇ ವರ್ಷಕ್ಕೆ ಕಾಲಿಟ್ಟ ವೆರಾ ಜೊನರೇವಾ ಪಾಲಿಗೆ ಇದು 2ನೇ ಯುಎಸ್ ಓಪನ್ ವನಿತಾ ಡಬಲ್ಸ್ ಪ್ರಶಸ್ತಿಯಾಗಿದೆ. 2006ರಷ್ಟು ಹಿಂದೆ ನಥಾಲಿ ಡೆಶಿ ಜತೆಗೂಡಿ ಮೊದಲ ಸಲ ಚಾಂಪಿಯನ್ ಆಗಿದ್ದರು. 2012ರಲ್ಲಿ ಆಸ್ಟ್ರೇಲಿಯನ್ ಓಪನ್ ವನಿತಾ ಡಬಲ್ಸ್ ಪ್ರಸ್ತಿಯೂ ಜೊನರೇವಾಗೆ ಒಲಿದಿತ್ತು. 2016ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಜೊನರೇವಾ ಪಾಲಾದ ಪ್ರಮುಖ ಟೆನಿಸ್ ಪ್ರಶಸ್ತಿ ಇದಾಗಿದೆ
Advertisement