Advertisement

ಮರ್ರೆ-ಹಿಂಗಿಸ್‌ಗೆ ಮಿಕ್ಸೆಡ್‌ ಡಬಲ್ಸ್‌ ಪ್ರಶಸ್ತಿ

06:30 AM Sep 11, 2017 | Team Udayavani |

ನ್ಯೂಯಾರ್ಕ್‌: ಅಗ್ರ ಶ್ರೇಯಾಂಕದ ಜೆಮಿ ಮರ್ರೆ ಮತ್ತು ಮಾರ್ಟಿನಾ ಹಿಂಗಿಸ್‌ ಅವರು ಮೂರು ಸೆಟ್‌ಗಳ ಕಠಿನ ಹೋರಾಟದಲ್ಲಿ ಜಯ ಸಾಧಿಸಿ ಯುಎಸ್‌ ಓಪನ್‌ನ ಮಿಕ್ಸೆಡ್‌ ಡಬಲ್ಸ್‌ನ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದು ಅವರ ಸತತ ಎರಡನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಯಾಗಿದೆ.

Advertisement

ಫೈನಲ್‌ನಲ್ಲಿ ಮೈಕಲ್‌ ವೀನಸ್‌ ಮತ್ತು ಚಾನ್‌ ಹಾವೊ ಚಿಂಗ್‌ ಅವರನ್ನು 6-1, 4-6, 10-8 ಸೆಟ್‌ಗಳಿಂದ ಉರುಳಿಸಿದ ಮರ್ರೆ-ಹಿಂಗಿಸ್‌ ಪ್ರಶಸ್ತಿ ಗೆದ್ದ ಸಂಭ್ರಮ ಆಚರಿಸಿದರು. ಅವರು ಈಗಾಗಲೇ ಕಳೆದ ಜುಲೈಯಲ್ಲಿ ನಡೆದ ವಿಂಬಲ್ಡನ್‌ ಕೂಟದ ಪ್ರಶಸ್ತಿ ಜಯಿಸಿದ್ದರು. ಸೂಪರ್‌ ಟೈಬ್ರೇಕರ್‌ ಮೂಲಕ ಜತೆಯಾಗಿ ಆಡುವುದು ಹೇಗೆಂದು ನಮಗೆ ತಿಳಿಯಿತು ಎಂದು ಪಂದ್ಯದ ಬಳಿಕ ಹಿಂಗಿಸ್‌ ನುಡಿದರು. ಹಿಂಗಿಸ್‌ ನ್ಯೂಯಾರ್ಕ್‌ನಲ್ಲಿ 16ರ ಬಾಲಕಿಯಾಗಿ ಸಿಂಗಲ್ಸ್‌ ಪ್ರಶಸ್ತಿ ಗೆದ್ದ 20ನೇ ವರ್ಷಾಚರಣೆಯ ಖುಷಿಯಲ್ಲಿದ್ದಾರೆ.

ಮೊದಲ ಸೆಟ್‌ನಲ್ಲಿ ನಾವು ಶ್ರೇಷ್ಠ ನಿರ್ವಹಣೆ ದಾಖಲಿಸಿದ್ದೇವೆ. ದ್ವಿತೀಯ ಸೆಟ್‌ನಲ್ಲಿ ನಾವು ನಿಖರವಾಗಿ ಆಡಿಲ್ಲ. ಆದರೆ ಸೂಪರ್‌ ಟೈಬ್ರೇಕರ್‌ನಲ್ಲಿ ಗ್ರೇಟ್‌ ಟೆನಿಸ್‌ ಆಟ ಮುಂದುವರಿಯಿತು ಎಂದು ಹಿಂಗಿಸ್‌ ಹೇಳಿದರು. ಹಿಂಗಿಸ್‌ 2015ರಲ್ಲಿ ಲಿಯಾಂಡರ್‌  ಪೇಸ್‌ ಜತೆಊಡಿ ಯುಎಸ್‌ ಓಪನ್‌ನ ಮಿಕ್ಸೆಡ್‌ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದರೆ. 10 ವರ್ಷಗಳ ಹಿಂದೆ ಮರ್ರೆ ಜೆಲೆನಾ ಜಾಂಕೊವಿಕ್‌ ಜತೆಗೂಡಿ ವಿಂಬಲ್ಡನ್‌ ಕೂಟದ ಮಿಕ್ಸೆಡ್‌ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದರು.
ಮುಂದಿನ ವರ್ಷದ ಆಸ್ಟ್ರೇಲಿಯನ್‌ ಓಪನ್‌ನಲ್ಲೂ ಜತೆಯಾಗಿ ಆಡಲಿದ್ದೇವೆ ಎಂದು ಸ್ವಿಸ್‌ ತಾರೆ ಹಿಂಗಿಸ್‌  ಮತ್ತು ಮರ್ರೆ ತಿಳಿಸಿದ್ದಾರೆ. ಮಾರ್ಟಿನಾ ಜತೆ ಸ್ಪರ್ಧಿಸುವ ಅವಕಾಶ ಸಿಕ್ಕಿರುವುದು ಗ್ರೇಟ್‌. ಅವರು ಟೆನಿಸ್‌ ಆಟದ ಬಲುದೊಡ್ಡ ಚಾಂಪಿಯನ್‌ ಎಂದು ಮರ್ರೆ ಹೇಳಿದರು.

ಹಿಂಗಿಸ್‌ ಇಲ್ಲಿ ಇನ್ನೊಂದು ಪ್ರಶಸ್ತಿ ಗೆಲ್ಲುವ ಸಾಧ್ಯತೆಯಿದೆ. ಅವರು ವನಿತೆಯರ ಡಬಲ್ಸ್‌ ಫೈನಲ್‌ನಲ್ಲಿ ಚಾನ್‌ ಯಂಗ್‌ ಜಾನ್‌ ಜತೆಗೂಡಿ ಆಡಲಿದ್ದು ಫೈನಲ್‌ನಲ್ಲಿ ಲೂಸಿ ಹೃಡೆಕ್ಕ ಮತ್ತು ಕ್ಯಾತರೀನಾ ಸಿನಿಯಕೋವಾ ಅವರನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next