ವಾಷಿಂಗ್ಟನ್ : ಹತ್ಯೆಗೀಡಾದ ಕುಖ್ಯಾತ ಅಲ್‌ಖೈದಾ ಉಗ್ರ ಒಸಮಾ ಬಿನ್ ಲಾಡೆನ್ ಪುತ್ರರಲ್ಲಿ ಒಬ್ಬನಾದ ಹಂಝ ಬಿನ್ ಲಾಡೆನ್ ಈಗ ಅಮೆರಿಕಕ್ಕೆ ಬೇಕಾಗಿದ್ದು , ಹುಡುಕಿ ಕೊಟ್ಟವರಿಗೆ ಬರೋಬ್ಬರಿ 1 ಮಿಲಿಯನ್ ಡಾಲರ್ ಇನಾಮು ಘೋಷಿಸಿದೆ.
ಹಂಝ ಸದ್ಯ ಪಾಕಿಸ್ಥಾನ – ಅಫ್ಘಾನ್ ಗಡಿಯಲ್ಲಿ ಅಡಗಿದ್ದಾನೆ ಎಂದು ಹೇಳಲಾಗಿದ್ದು , ಅಮೆರಿಕ ಈತನಾಗಿ ಬಲೆ ಬೀಸಿದೆ.
ಇತ್ತೀಚಿಗಿನ ದಿನಗಳಲ್ಲಿ ಹಂಝ ವಿಡಿಯೋಗಳ ಮೂಲಕ ಅಮೆರಿಕದ ಮೇಲೆ ದಾಳಿ ನಡೆಸಿ ತಂದೆಯ ಹತ್ಯೆಗೆ ಪ್ರತಿಕಾರ ತೀರಿಸುವಂತೆ ತನ್ನ ಬೆಂಬಲಿಗರಿಗೆ ಕರೆ ನೀಡುತ್ತಿದ್ದಾನೆ.
2011 ರಲ್ಲಿ ಅಮೆರಿಕ ಪಡೆಗಳು ಪಾಕಿಸ್ಥಾನದ ಅಬ್ಬೋಟಾಬಾದ್‌ಗೆ ನುಗ್ಗಿ ಬಿನ್ ಲಾಡೆನ್‌ನನ್ನು ಹತ್ಯೆಗೈದಿದ್ದವು.
30 ರ ಹರೆಯದ ಹಂಝ ನನ್ನು ಅಮೆರಿಕ 2 ವರ್ಷಗಳ ಹಿಂದೆ ಜಾಗತಿಕ ಉಗ್ರ ಎಂದು ಪಟ್ಟಿಮಾಡಿದೆ.
2001 ರ ವಿಶ್ವ ವಾಣಿಜ್ಯ ಸಂಕೀರ್ಣದ ಮೇಲಿನ ಭೀಕರ ದಾಳಿಯ ನಾಲ್ಕು ವಿಮಾನಗಳ ಹೈಜಾಕ್ ಮಾಡುವಲ್ಲಿ ಪಾತ್ರವಹಿಸಿದ್ದ ಮೊಹಮದ್ ಅಟ್ಟಾನ ಪುತ್ರಿಯನ್ನು ಹಂಝ ವಿವಾಹವಾಗಿದ್ದಾನೆ ಎಂದು ಅಮೆರಿಕದ ಸ್ಟೇಟ್ಸ್ ಡಿಪಾರ್ಟ್‌ಮೆಂಟ್ ಹೇಳಿದೆ.