ಹೊಸದಿಲ್ಲಿ : ‘ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಾರತಕ್ಕೆ ಇರುವ ಆತ್ಮ ರಕ್ಷಣೆಯ ಹಕ್ಕನ್ನು ಅಮೆರಿಕ ಬೆಂಬಲಿಸುತ್ತದೆ’ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿರುವುದಾಗಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ತಿಳಿಸಿದ್ದಾರೆ.
‘ಜೆಇಎಂ ಮತ್ತು ಇತರ ಉಗ್ರ ಸಮೂಹಗಳಿಗೆ ಪಾಕಿಸ್ಥಾನ ಸುರಕ್ಷಿತ ಆಸರೆ ತಾಣವಾಗಿರುವುದನ್ನು ನಿರ್ಣಾಯಕವಾಗಿ ಕೊನೆಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕ ಪಣ ತೊಟ್ಟಿವೆ’ ಎಂದು ದೋವಾಲ್ ಹೇಳಿದರು.
ದೋವಾಲ್ ಮತ್ತು ಬೋಲ್ಟನ್ ಅವರು ನಿನ್ನೆ ಶುಕ್ರವಾರ ಸಂಜೆ ಪರಸ್ಪರ ಫೋನಿನಲ್ಲಿ ಮಾತನಾಡಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಠರಾವಿನ ಪ್ರಕಾರ ಪಾಕಿಸ್ಥಾನ ಉಗ್ರ ನಿಗ್ರಹದ ತನ್ನ ಹೊಣೆಕಾರಿಕೆಯನ್ನು ಕಟ್ಟುನಿಟ್ಟಾಗಿ ನಿಭಾಯಿಸಬೇಕು ಮತ್ತು ಜೆಇಎಂ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವಲ್ಲಿನ ಎಲ್ಲ ಅಡೆತಡೆಗಳನ್ನು ಕಿತ್ತು ಹಾಕಬೇಕು ಎಂದು ಇಸ್ಲಾಮಾಬಾದನ್ನು ಆಗ್ರಹಿಸುವ ದೃಢ ನಿರ್ಧಾರ ತಳೆದರೆಂದು ಮಾಧ್ಯಮ ವರದಿಗಳು ತಿಳಿಸಿವೆ.
”ಗಡಿಯಾಚೆಯ ಭಯೋತ್ಪಾದನೆ ವಿರುದ್ಧ ಭಾರತಕ್ಕಿರುವ ಆತ್ಮರಕ್ಷಣೆಯ ಹಕ್ಕನ್ನು ಅಮೆರಿಕ ಬೆಂಬಲಿಸುತ್ತದೆ; ಮಾತ್ರವಲ್ಲದೆ ಪುಲ್ವಾಮಾ ಉಗ್ರ ದಾಳಿ ಎಸಗಿದವರನ್ನು ಮತ್ತು ಅದರ ಬೆಂಬಲಿಗರನ್ನು ಕಾನೂನಿನಡಿ ಶಿಕ್ಷಿಸುವಲ್ಲಿ ಭಾರತಕ್ಕೆ ಅಮೆರಿಕ ಸರ್ವ ರೀತಿಯಲ್ಲಿ ನೆರವಾಗುತ್ತದೆ” ಎಂದು ಬೋಲ್ಟನ್ ಹೇಳಿರುವಾಗಿ ಭಾರತದ ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿದೆ.