Advertisement

ಅಣ್ವಸ್ತ್ರ ತೊರೆದರೆ ಭದ್ರತೆ: ಕೊರಿಯಾಗೆ ಅಮೆರಿಕ ಭರವಸೆ

06:00 AM Jun 12, 2018 | Team Udayavani |

ಸಿಂಗಾಪುರ: ಇಡೀ ವಿಶ್ವವೇ ಎದುರು ನೋಡುತ್ತಿರುವ ಅಮೆರಿಕ ಮತ್ತು ಉತ್ತರ ಕೊರಿಯಾ ಮಾತುಕತೆಗೆ ವೇದಿಕೆ ಸಿದ್ಧವಾಗಿದ್ದು, ಉ.ಕೊರಿಯಾ ಅಣ್ವಸ್ತ್ರಗಳನ್ನು ಸಂಪೂರ್ಣವಾಗಿ ನಾಶಗೊಳಿಸಿದರೆ ವಿಶಿಷ್ಟ ಭದ್ರತೆಯನ್ನು ಒದಗಿಸುವುದಾಗಿ ಅಮೆರಿಕ ಭರವಸೆ ನೀಡಿದೆ. ಮಂಗಳವಾರ ಸಿಂಗಾಪುರ ಸೆಂತೋಸಾ ದ್ವೀಪದಲ್ಲಿರುವ ಕ್ಯಾಪೆಲ್ಲಾ ಹೋಟೆಲ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉ.ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಐತಿಹಾಸಿಕ ಮಾತುಕತೆ ನಡೆಸಲಿದ್ದಾರೆ.

Advertisement

ಇದಕ್ಕೂ ಮೊದಲು ಅಮೆರಿಕ ಮಾತುಕತೆಯ ವಿಷಯಗಳ ಸುಳಿವು ನೀಡಿದ್ದು, ಸಂಪೂರ್ಣ, ಪರಿಶೀಲಿಸಬಹುದಾದ ಮತ್ತು ಹಿಂಪಡೆಯಲಾಗದ ರೀತಿಯಲ್ಲಿ ಉ.ಕೊರಿಯಾವು ಅಣ್ವಸ್ತ್ರಗಳನ್ನು ನಾಶಗೊಳಿಸಿದರೆ ವಿಶಿಷ್ಟ ಭದ್ರತೆಯ ಅಭಯ ನೀಡುತ್ತೇವೆ. ಅಮೆರಿಕ ಬಯಸುವುದೂ ಇದೊಂದನ್ನೇ ಎಂದು ಗೃಹ ಸಚಿವ ಮೈಕ್‌ ಪಾಂಪಿಯೋ ಹೇಳಿದ್ದಾರೆ. ಅಣ್ವಸ್ತ್ರ ನಾಶದಿಂದಾಗಿ ಉ. ಕೊರಿಯಾಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಮೆರಿಕದ ಉದ್ದೇಶ. ಅಣ್ವಸ್ತ್ರ ನಾಶಗೊಳ್ಳುವವರೆಗೂ ಈಗಿರುವ ನಿಷೇಧ ಮುಂದುವರಿಯುತ್ತದೆ ಎಂದು ಪಾಂಪಿಯೋ ಹೇಳಿದ್ದಾರೆ.

ಟ್ರಂಪ್‌ ಹಾಗೂ ಕಿಮ್‌ ಇಬ್ಬರೇ ಮಾತುಕತೆ ನಡೆಸುವ ಅವಕಾಶವನ್ನು ನಾವು ಎದುರು ನೋಡುತ್ತಿದ್ದೇವೆ. ಹಲವು ವಿಷಯಗಳಿಗೆ ಸಂಬಂಧಿಸಿ ಉಭಯ ದೇಶಗಳ ಅಧಿಕಾರಿಗಳು ಭಿನ್ನಾಭಿಪ್ರಾಯ ನಿವಾರಣೆಗಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಪಾಂಪಿಯೋ ಹೇಳಿದ್ದಾರೆ.

ಉತ್ತರ, ದಕ್ಷಿಣ ಕೊರಿಯಾ ಶಾಂತಿ ಒಪ್ಪಂದ: 1950-53ರಲ್ಲಿ ಉತ್ತರ ಹಾಗೂ ದಕ್ಷಿಣ ಕೊರಿಯಾ ಯುದ್ಧ ಶಾಂತಿ ಒಪ್ಪಂದವೂ ಈ ಸಮ್ಮೇಳನದಲ್ಲಿ ನಡೆಯುವ ಸಾಧ್ಯತೆಯಿದೆ. ಅಂದು ಯುದ್ಧ ಮುಗಿದಿದ್ದರೂ, ಯುದ್ಧ ಮುಕ್ತಾಯಕ್ಕೆ ಸಂಬಂಧಿಸಿ ಉಭಯ ದೇಶಗಳ ಒಪ್ಪಂದ ನಡೆದಿರಲಿಲ್ಲ. ಶಾಂತಿ ಒಪ್ಪಂದವಾದರೆ ದ.ಕೊರಿಯಾದಿಂದ ಅಮೆರಿಕ ತನ್ನ 28,000 ಯೋಧರನ್ನು ವಾಪಸ್‌ ಕರೆಸಿಕೊಳ್ಳಬಹುದು.

ಲೀ ಭೇಟಿ: ಟ್ರಂಪ್‌ ಹಾಗೂ ಕಿಮ್‌ ಪ್ರತ್ಯೇಕವಾಗಿ ಸಿಂಗಾಪುರ ಪ್ರಧಾನಿ ಲೀ ಲೂಂಗ್‌ರನ್ನು ಭೇಟಿ ಮಾಡಿದ್ದಾರೆ. ಈ ಸಮ್ಮೇಳನ ಯಶಸ್ವಿಯಾದರೆ ಸಿಂಗಾಪುರ ಸರ್ಕಾರದ ಕೊಡುಗೆ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ ಎಂದು ಕಿಮ್‌ ಹೇಳಿದ್ದಾರೆ.

Advertisement

ಚೀನಾಗೆ ಚಿಂತೆ ಶುರು: ಟ್ರಂಪ್‌-ಕಿಮ್‌ ಭೇಟಿ ಚೀನಾಗೆ ಆತಂಕ ತಂದಿದೆ. ತನ್ನ ವಲಯದಿಂದ ಉ.ಕೊರಿಯಾ ತಪ್ಪಿಸಿಕೊಳ್ಳುತ್ತಿದೆಯೇ ಎಂಬ ಅನುಮಾನ ಚೀನಾಗೆ ಉಂಟಾಗಿದೆ. ಶೀತಲ ಸಮರದ ಕಾಲದಿಂದಲೂ ತನ್ನ ವಲಯದಲ್ಲೇ ಇದ್ದ ಉ.ಕೊರಿಯಾ ಇದೀಗ ಅಮೆರಿಕದ ಜೊತೆಗಿನ ಮಾತುಕತೆ ಮೂಲಕ ಐರೋಪ್ಯ ದೇಶಗಳಿಗೆ ಹತ್ತಿರವಾಗುತ್ತಿದೆ. ಈಗ ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಒಂದಾದರೆ ಚೀನಾ ಒಂಟಿಯಾಗುತ್ತದೆ. 1972ರಲ್ಲಿ ಚೀನಾ ಹೂಡಿದ ತಂತ್ರವನ್ನೇ ಉ.ಕೊರಿಯಾ ಅನುಸರಿಸುವ ಸಾಧ್ಯತೆಯಿದೆ. ಆಗ ಅಮೆರಿಕ ಅಧ್ಯಕ್ಷರಾಗಿದ್ದ ರಿಚರ್ಡ್‌ ನಿಕ್ಸನ್‌ರನ್ನು ಚೀನಾಗೆ ಕರೆಸಿಕೊಂಡಿದ್ದ ಚೀನಾ ಅಧ್ಯಕ್ಷ ಮಾವೋ ಜೆಡಾಂಗ್‌, ಸೋವಿಯತ್‌ ಯೂನಿಯನ್‌ನಿಂದ ದೂರವಾಗಿ ಅಮೆರಿಕಕ್ಕೆ ಹತ್ತಿರವಾಗಿದ್ದರು. ಕಿಮ್‌ – ಟ್ರಂಪ್‌ ಮಾತುಕತೆ ನಂತರ ಗೃಹ ಸಚಿವ ಪಾಂಪಿಯೋ ಬೀಜಿಂಗ್‌ಗೆ ತೆರಳಿ ಮಾತುಕತೆಯ ನಿರ್ಧಾರಗಳನ್ನು ಚೀನಾಗೆ ವಿವರಿಸಲಿದ್ದಾರೆ. ಮೂಲಗಳ ಪ್ರಕಾರ ಯಾವ ಹಿರಿಯ ಚೀನಾ ಅಧಿಕಾರಿಯೂ ಸಿಂಗಾಪುರದ ಮಾತುಕತೆ ವೇಳೆ ಹಾಜರಿರುವುದಿಲ್ಲ.

ಕಿಮ್‌ ಸೆಲ್ಫಿ: ಸೋಮವಾರ ರಾತ್ರಿ ಸಿಂಗಾಪುರದಲ್ಲಿ ಸುತ್ತಾ ಡಿದ ಕಿಮ್‌, ಮರಿನಾ ಬೇ ಸ್ಯಾಂಡ್ಸ್‌ ರೆಸಾರ್ಟ್‌ನ ಮಹಡಿಯ ಮೇಲೆ ನಿಂತು ಸೇರಿದ್ದ ಜನರಿಗೆ ಕೈ ಬೀಸಿದರು. ಬಾಲಕೃಷ್ಣನ್‌ ಜೊತೆಗೆ ಸೆಲ್ಫಿಗೆ ಕೂಡ ಪೋಸು ನೀಡಿದರು.

ನೇಪಾಳದ ಗೂರ್ಖಾಗಳೇ ಕಾವಲು!
ಸಮ್ಮೇಳನಕ್ಕೆ ಭದ್ರತೆಯ ಪ್ರಮುಖ ಭಾಗವೇ ನೇಪಾಳದ ಗೂರ್ಖಾಗಳು. ಸಿಂಗಾಪುರದಲ್ಲಿ ನಡೆಯುವ ಯಾವುದೇ ಸಮ್ಮೇಳನಕ್ಕೂ ಇವರನ್ನು ಬಳಸಿಕೊಳ್ಳಲಾಗುತ್ತದೆ. 1949ರಿಂದಲೂ ಗೂರ್ಖಾಗಳು ಭದ್ರತೆ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕಿಮ್‌ ಹಾಗೂ ಟ್ರಂಪ್‌ ತಮ್ಮ ಭದ್ರತಾ ಪಡೆಗಳನ್ನು ಕರೆಸಿಕೊಂಡಿ ದ್ದರೂ, ಗೂರ್ಖಾಗಳನ್ನು ಭಾರಿ ಪ್ರಮಾಣದಲ್ಲಿ ನೇಮಿಸಲಾಗಿದೆ. ಸುಮಾರು 1800 ಗೂರ್ಖಾ ಅಧಿಕಾರಿಗಳು ಕಿಮ್‌ ತಂಗಿರುವ ಸೇಂಟ್‌ ರೇಜಿಸ್‌ ಹೋಟೆಲ್‌ ಅನ್ನು ಕಾಯುತ್ತಿದ್ದಾರೆ.

ಭಾರತೀಯರ ಪಾತ್ರ
ಭಾರತೀಯ ಮೂಲದ ಸಿಂಗಾಪುರದ ಇಬ್ಬರು ಸಚಿವರಾದ ವಿವಿಯನ್‌ ಬಾಲಕೃಷ್ಣನ್‌ ಮತ್ತು ಕೆ. ಷಣ್ಮುಗಂ ಈ ಸಮ್ಮೇಳನದ ರೂವಾರಿಗಳು. ಸಮ್ಮೇಳನ ಹಾಗೂ ಭೇಟಿ ಯಾವುದೇ ಅಡೆತಡೆ ಇಲ್ಲದೇ ಸರಾಗವಾಗಿ ನಡೆಯುವುದಕ್ಕಾಗಿ ಇಬ್ಬರೂ ಶ್ರಮಿಸುತ್ತಿದ್ದಾರೆ. ಷಣ್ಮುಗಂ ಕಾನೂನು ಮತ್ತು ಗೃಹ ಖಾತೆ ಸಚಿವರಾಗಿದ್ದು, ಬಾಲಕೃಷ್ಣನ್‌ ವಿದೇಶಾಂಗ ಸಚಿವರಾಗಿದ್ದಾರೆ.

101 ಕೋಟಿ ರೂ. ಸಮ್ಮೇಳನಕ್ಕೆ ವೆಚ್ಚ
50 ಕೋಟಿ ರೂ. ಭದ್ರತೆಗೆ ವೆಚ್ಚ
02 ವಾರಗಳಿಂದ ನಡೆ ಯುತ್ತಿರುವ ತಯಾರಿ
5000 ಭದ್ರತಾ ಸಿಬ್ಬಂದಿ ನೇಮಕ

Advertisement

Udayavani is now on Telegram. Click here to join our channel and stay updated with the latest news.

Next