ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ವಿರುದ್ಧ ದಶಕಗಳಿಂದ ಕಾರ್ಯಾಚರಿಸುತ್ತಿರುವ ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನು ವಾಪಸ್ ಕರೆಯಿಸಿಕೊಳ್ಳಲು ನಿರ್ಧರಿಸಿದ್ದು, ಇದರಿಂದ ತಾಲಿಬಾನ್ ಉಗ್ರರು ಮತ್ತಷ್ಟು ಸದೃಢರಾಗುವ ಮೂಲಕ ಉಗ್ರರು ಅಫ್ಘಾನಿಸ್ತಾನವನ್ನು ಮತ್ತೆ ತಮ್ಮ ಸುರಕ್ಷಿತ ಸ್ಥಳವನ್ನಾಗಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಭಾರತ ಕಳವಳ ಹೊಂದಿದೆ ಎಂದು ಅಮೆರಿಕದ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಬುಧವಾರ(ಏ.14) ಅಫ್ಘಾನಿಸ್ತಾನದಲ್ಲಿರುವ ಎಲ್ಲಾ ಅಮೆರಿಕನ್ ಸೇನೆಯನ್ನು ಈ ವರ್ಷದ ಸೆಪ್ಟೆಂಬರ್ 11ರೊಳಗೆ ವಾಪಸ್ ಕರೆಯಿಸಿಕೊಳ್ಳುವ ಮೂಲಕ ದೀರ್ಘಾವಧಿಯ ಹೋರಾಟವನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದರು. ಅಲ್ಲದೇ ನ್ಯಾಟೋ ಕೂಡಾ ತನ್ನ ಪಡೆಯನ್ನು ಅಫ್ಘಾನ್ ನಿಂದ ಹಿಂಪಡೆಯುವುದಾಗಿ ತಿಳಿಸಿದೆ.
ಅಫ್ಘಾನಿಸ್ತಾನಕ್ಕೆ ಇತರ ದೇಶಗಳೂ ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನ, ರಷ್ಯಾ, ಚೀನಾ ಮತ್ತು ಭಾರತ ಕೂಡಾ ಹೆಚ್ಚಿನ ಬೆಂಬಲ ನೀಡಬೇಕಾಗಿದೆ. ಅಫ್ಘಾನಿಸ್ತಾನದ ಭವಿಷ್ಯ ರೂಪಿಸುವಲ್ಲಿ ಈ ಎಲ್ಲಾ ದೇಶಗಳು ಮಹತ್ತರ ಪಾತ್ತವಹಿಸಬೇಕಾಗಿದೆ ಎಂದು ಬೈಡೆನ್ ಹೇಳಿದರು.
ನಾವು ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆಯುವ ವಿಚಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಜವಾಬ್ದಾರಿಯುತವಾಗಿ, ಎಚ್ಚರಿಕೆ ಹಾಗೂ ಸುರಕ್ಷಿತವಾಗಿ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಅಷ್ಟೇ ಅಲ್ಲ ನಾವು ನಮ್ಮ ಮೈತ್ರಿ ದೇಶಗಳ ಪೂರ್ಣ ಸಹಕಾರದೊಂದಿಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಬೈಡೆನ್ ಸರ್ಕಾರ ತಿಳಿಸಿದೆ.
ಆದರೆ ಅಫ್ಘಾನಿಸ್ತಾನದಲ್ಲಿ ಅಮೆರಿಕ, ನ್ಯಾಟೋ ಪಡೆಯನ್ನು ಹಿಂಪಡೆಯುವ ನಿರ್ಧಾರದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಅಮೆರಿಕದ ತಜ್ಞರು ಹೇಳಿದ್ದು, ಇದರಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮತ್ತೆ ಬಲಿಷ್ಠಗೊಳ್ಳಲು ಕಾರಣವಾಗುತ್ತದೆ ಎಂದು ಭಾರತ ಆತಂಕ ವ್ಯಕ್ತಪಡಿಸಿರುವುದಾಗಿ ತಿಳಿಸಿದೆ.
ಒಂದು ವೇಳೆ ಎಲ್ಲಾ ಸೇನೆಯನ್ನು ಹಿಂಪಡೆದರೆ ತಾಲಿಬಾನ್ ಮತ್ತೆ ತನ್ನ ಅಟ್ಟಹಾಸವನ್ನು ಆರಂಭಿಸಬಹುದು ಎಂಬ ಆತಂಕ ಭಾರತದ್ದಾಗಿದೆ ಎಂದು ಅಮೆರಿಕದ ಮಾಜಿ ಪಾಕಿಸ್ತಾನ್ ರಾಯಭಾರಿ ಹುಸೈನ್ ಹಕ್ಕಾನಿ ಪಿಟಿಐ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಒಂದು ವೇಳೆ ಅಮೆರಿಕ ತನ್ನ ಎಲ್ಲಾ ಪಡೆಯನ್ನು ವಾಪಸ್ ಪಡೆದ ಮೇಲೆ ಅಮೆರಿಕ ಅಫ್ಘಾನ್ ಸರ್ಕಾರಕ್ಕೆ ಸಹಾಯ ಮಾಡುವುದನ್ನು ಮುಂದುವರಿಸಲಿದೆಯೇ ಮತ್ತು ಅಫ್ಘಾನ್ ಜನರು ತಾಲಿಬಾನ್ ಉಗ್ರರ ನೆರಳಿನಿಂದ ದೂರವಿರಲು ಸಾಧ್ಯವಾಗಲಿದೆಯೇ ಎಂಬುದು ಮುಖ್ಯವಾದ ಪ್ರಶ್ನೆಯಾಗಿದೆ ಎಂದು ಹಕ್ಕಾನಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.