ವಾಷಿಂಗ್ಟನ್: ಬಾಳೆಹಣ್ಣಿನಿಂದ ಏನೆಲ್ಲ ಮಾಡಬಹುದು? ರಸಾಯನ, ಬನ್ಸ್ ಹೀಗೆ ವಿಧ ವಿಧವಾದ ಖಾದ್ಯಗಳನ್ನು ನೀವು ಹೆಸರಿಸಬಹುದು. ಆದರೆ ಅಮೆರಿಕದ ಇಲಿನೋಯಿಸ್ ರಾಜ್ಯದಲ್ಲಿ ಈ ಬಾಳೆಹಣ್ಣುಗಳನ್ನೇ ಇಟ್ಟು ಗಿನ್ನೆಸ್ ದಾಖಲೆ ಬರೆಯಲಾಗಿದೆ.
ವೆಸ್ಟ್‌ಮಾಂಟ್ ನಗರದ ಶಾಪಿಂಗ್ ಸೆಂಟರ್ ಒಂದರ ಎದುರು ಜೂ.8ರಂದು ಬಾಳೆಹಣ್ಣಿನ ಪ್ರದರ್ಶನ ಏರ್ಪಡಿಸಲಾಗಿತ್ತು. ಹಣ್ಣು ಸರಬರಾಜು ಮಾಡುವ ಫ್ರೆಶ್ ಡೆಲ್ ಮೋಂಟೆ ಮತ್ತು ಹಣ್ಣುಗಳ ಚಿಲ್ಲರೆ ವ್ಯವಹಾರ ನಡೆಸುವ ಜೆವೆಲ್ ಓಸ್ಕೋ ಜಂಟಿಯಾಗಿ ನಡೆಸಿದ್ದ ಈ ಪ್ರದರ್ಶನದಲ್ಲಿ ಬರೋಬ್ಬರಿ 70,000 ಪೌಂಡ್ ಅಂದರೆ ಸುಮಾರು 31,751 ಕೆಜಿ ಬಾಳೆಹಣ್ಣನ್ನು ಪ್ರದರ್ಶನಕ್ಕಿಡಲಾಗಿತ್ತು. ಆ ಸ್ಥಳದಲ್ಲಿ ಬಾಳೆಹಣ್ಣು ಜೋಡಿಸಲೇ ಮೂರು ದಿನ ಬೇಕಾಗಿತ್ತಂತೆ.
ಈ ಪ್ರದರ್ಶನವನ್ನು ಗುರುತಿಸಿರುವ ಗಿನ್ನೆಸ್ ಸಂಸ್ಥೆ ಈ “ಬನಾನಾ ಬೊನಾಂಜಾ’ ಪ್ರದರ್ಶನವನ್ನು ಗಿನ್ನೆಸ್ ದಾಖಲೆ ಪಟ್ಟಿಗೆ ಸೇರಿಸಿದೆ. ಪ್ರದರ್ಶನ ಮುಗಿದ ನಂತರ ಹಣ್ಣುಗಳನ್ನು ಸ್ಥಳೀಯರಿಗೆ ಹಂಚಲಾಗಿದೆ.
ಈ ಹಿಂದೆ 2016ರಲ್ಲಿ ಬ್ರೆಜಿಲ್‌ನಲ್ಲಿ 18,805 ಕೆಜಿ ಹಣ್ಣುಗಳನ್ನು ಪ್ರದರ್ಶನಕ್ಕಿಟ್ಟು ದಾಖಲೆ ಬರೆಯಲಾಗಿತ್ತು. ಆ ಪ್ರದರ್ಶನದಲ್ಲಿ ಒಟ್ಟು 19 ವಿಧದ ಹಣ್ಣುಗಳನ್ನು ಬಳಕೆ ಮಾಡಲಾಗಿತ್ತು. ಆ ಪ್ರದರ್ಶನದಲ್ಲಿದ್ದ ಅಷ್ಟೂ ಹಣ್ಣುಗಳನ್ನು ಸ್ಥಳೀಯರಿಗೆ ಕೊಡಲಾಗಿತ್ತು.