ವಾಷಿಂಗ್ಟನ್ : ಅಮೆರಿಕದ ನೆಲದಲ್ಲಿ ಖಲಿಸ್ಥಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್‌ನನ್ನು ಹತ್ಯೆ ಗೈಯುವ ಸಂಚನ್ನು ಅಮೆರಿಕ ವಿಫಲಗೊಳಿಸಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಟೈಮ್ಸ್ ಬುಧವಾರ ವರದಿ ಮಾಡಿದೆ.
ಪನ್ನುನ್‌ನನ್ನು ಮುಗಿಸಲು ಭಾರತ “ಸಂಚಿನಲ್ಲಿ ಭಾಗಿಯಾಗಿದೆ” ಎಂಬ ಕಳವಳದ ಮೇಲೆ ಯುಎಸ್ ಸರಕಾರವು ಭಾರತಕ್ಕೆ ಎಚ್ಚರಿಕೆಯನ್ನೂ ನೀಡಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಅಮೆರಿಕನ್ ಮತ್ತು ಕೆನಡಾದ ಪ್ರಜೆ, ಗುರ್ಪತ್‌ವಂತ್ ಸಿಂಗ್ ಪನ್ನುನ್, ಯುಎಸ್ ಮೂಲದ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ನಾಯಕನಾಗಿದ್ದು, ಸಂಘಟನೆಯನ್ನು ಭಾರತವು ಭಯೋತ್ಪಾದಕ ಸಂಘಟನೆ ಎಂದು ಗೊತ್ತುಪಡಿಸಿದೆ.
ಕೆನಡಾದಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರಕಾರದೊಂದಿಗೆ ಸಂಪರ್ಕ ಹೊಂದಿರುವ ಏಜೆಂಟ್‌ಗಳು ಭಾಗಿಯಾಗಿದ್ದಾರೆ ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಸಾರ್ವಜನಿಕ ಆರೋಪ ಮಾಡಿದ ನಂತರ ಫೈನಾನ್ಶಿಯಲ್ ಟೈಮ್ಸ್ ವರದಿ ಬಂದಿದೆ.
ಏರ್ ಇಂಡಿಯಾ ಸಂಸ್ಥೆಗೆ ಬೆದರಿಕೆ ವಿಡಿಯೋ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಪನ್ನೂನ್ ವಿರುದ್ಧ ಪ್ರಕರಣ ದಾಖಲಿಸಿದ ಎರಡು ದಿನಗಳ ನಂತರ ಅಮೆರಿಕದ ನೆಲದಲ್ಲಿ ಪನ್ನುನ್‌ನನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ವರದಿಯಾಗಿದೆ.
ಕೆಲ ದಿನಗಳ ಹಿಂದಷ್ಟೇ “ನಾವು ಸಿಖ್ ಜನರನ್ನು ನವೆಂಬರ್ 19 ರಂದು ಏರ್ ಇಂಡಿಯಾ ಮೂಲಕ ಪ್ರಯಾಣಿಸಬೇಡಿ ಎಂದು ಕೇಳುತ್ತಿದ್ದೇವೆ. ಜಾಗತಿಕ ದಿಗ್ಬಂಧನ ಇರುತ್ತದೆ. ನವೆಂಬರ್ 19 ರಂದು ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ, ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಅಪಾಯವಿದೆ ಎಂಬ ವಿಡಿಯೋ ಹೊರ ಬಿದ್ದಿತ್ತು. ಈ ಕುರಿತು ಫೈನಾನ್ಷಿಯಲ್ ಟೈಮ್ಸ್ ಪ್ರತಿಕ್ರಿಯಿಸಿದ್ದ ಪನ್ನುನ್ ‘ತಾನು ಏರ್‌ಲೈನ್ ವಿರುದ್ಧ ಹಿಂಸಾತ್ಮಕ ಬೆದರಿಕೆಯನ್ನು ನೀಡುತ್ತಿಲ್ಲ ಎಂದು ಹೇಳಿದ್ದ.