Advertisement

ಬಾಬಾ ಬುಡನ್‌ ದರ್ಗಾದಲ್ಲಿ ಉರುಸ್‌ ನೀರಸ

12:00 PM Mar 19, 2022 | Team Udayavani |

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾ ಬುಡನ್‌ ದರ್ಗಾದಲ್ಲಿ ಶಾಖಾದ್ರಿ ಅವರ ಧಾರ್ಮಿಕ ಆಚರಣೆಗಳಿಗೆ ಜಿಲ್ಲಾಡಳಿತ ಅವಕಾಶ ನೀಡದ ಹಿನ್ನೆಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉರುಸ್‌ ಆಚರಿಸದಿರಲು ಶಾಖಾದ್ರಿ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಉರುಸ್‌ ನೀರಸವಾಗಿತ್ತು.

Advertisement

ಶುಕ್ರವಾರ ಶಾಖಾದ್ರಿ ಗೌಸ್‌ ಮೊಹಿದ್ದೀನ್‌ ನೇತೃತ್ವದಲ್ಲಿ ಉರುಸ್‌ಗೆ ಜಿಲ್ಲಾಡಳಿತದಿಂದ ಅವಕಾಶ ಕಲ್ಪಿಸಲಾಗಿತ್ತು. ಆದರೆ ದರ್ಗಾದ ಆವರಣದಲ್ಲಿರುವ ಗೋರಿಗಳಿಗೆ ಚಾದರ ಹಾಕುವುದು ಹಾಗೂ ಗಂಧ ಲೇಪನದಂತಹ ಧಾರ್ಮಿಕ ಆಚರಣೆಗೆ ಜಿಲ್ಲಾಡಳಿತ ಅವಕಾಶ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಶಾಖಾದ್ರಿ ಉರುಸ್‌ ಆಚರಿಸದೇ ಹಿಂದಿರುಗಿದರು.

ಶುಕ್ರವಾರದ ಉರುಸ್‌ ಹಿನ್ನೆಲೆಯಲ್ಲಿ ಜೋಳ್‌ ದಾಳ್‌ ಗ್ರಾಮದಿಂದ ತರಲಾಗಿದ್ದ ಗಂಧವನ್ನು ಗುರುವಾರ ಚಿಕ್ಕಮಗಳೂರು ನಗರದ ಉಪ್ಪಳ್ಳಿಯ ದರ್ಗಾಕ್ಕೆ ತರಲಾಗಿತ್ತು. ಶುಕ್ರವಾರ ಮಧ್ಯಾಹ್ನ ಗಂಧವನ್ನು ಉಪ್ಪಳ್ಳಿಯಿಂದ ಕಾಲ್ನಡಿಗೆಯಲ್ಲಿ ಬಾಬಾ ಬುಡನ್‌ಗಿರಿ ಸಮೀಪದ ಅತ್ತಿಗುಂಡಿಗೆ ಕೊಂಡೊಯ್ಯಲಾಗಿತ್ತು. ಅತ್ತಿಗುಂಡಿಯಿಂದ ಶಾಖಾದ್ರಿ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆ, ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಫಕೀರರು, ಮುಸ್ಲಿಂ ಸಮುದಾಯದ ಗುರುಗಳು ಹಾಗೂ ಸ್ಥಳೀಯರು ಭವ್ಯ ಮೆರವಣಿಗೆ ಮೂಲಕ ಸಂದಲ್‌ ಗಂಧವನ್ನು ಬಾಬಾ ಬುಡನ್‌ ದರ್ಗಾಕ್ಕೆ ಕೊಂಡೊಯ್ದರು. ಈ ವೇಳೆ ದರ್ಗಾದ ಆವರಣದಲ್ಲಿರುವ ಗೋರಿಗಳಿಗೆ ತಮ್ಮ ನೇತೃತ್ವದಲ್ಲಿ ಗಂಧ ಲೇಪನ, ಚಾದರ ಹಾಕಲು ಅವಕಾಶ ನೀಡಬೇಕೆಂದು ಶಾಖಾದ್ರಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಜಿಲ್ಲಾಡಳಿತ ಅವಕಾಶ ನೀಡದೇ ಮುಜಾವರ್‌ ಮೂಲಕ ಧಾರ್ಮಿಕ ಆಚರಣೆಗಳಿಗೆ ಅವಕಾಶ ಇದೆಯೇ ಹೊರತು ಶಾಖಾದ್ರಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಕೆಲವರು ಶಾಖಾದ್ರಿಯವರಿಗೆ ಸಂದಲ್‌ ಗಂಧ ಲೇಪಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಬೇಕೆಂದು ಶಾಖಾದ್ರಿ ಈ ವೇಳೆ ಪಟ್ಟು ಹಿಡಿದರು. ಆದರೆ ಜಿಲ್ಲಾಡಳಿತ ನ್ಯಾಯಾಲಯದ ಆದೇಶ ಉಲ್ಲೇಖೀಸಿ ಶಾಖಾದ್ರಿಗೆ ಧಾರ್ಮಿಕ ಆಚರಣೆಗಳಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿತು.

ಈ ವೇಳೆ ದರ್ಗಾದ ಆವರಣದಲ್ಲಿರುವ ತಮ್ಮ ಕಚೇರಿ ಒಳಗೆ ನಡೆದ ಶಾಖಾದ್ರಿ ಅಲ್ಲಿಂದ ಹೊರಬರದೇ ಧಾರ್ಮಿಕ ಆಚರಣೆ, ಪೂಜೆಗೆ ತಮಗೆ ಅವಕಾಶ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಉರುಸ್‌ ಆಚರಣೆ ಮಾಡದಿರಲು ತೀರ್ಮಾನಿಸಿದರು. ಉರುಸ್‌ ಆಚರಣೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದ ಫಕೀರರು, ಸಾಧು, ಸಂತರು ಹಾಗೂ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು ಹಾಗೂ ಭಕ್ತರು ಹಿಂದಿರುಗಿದರು.

Advertisement

ಜಿಲ್ಲಾಡಳಿತದ ನಡೆಗೆ ಅಸಮಾಧಾನವನ್ನೂ ವ್ಯಕ್ತಪಡಿಸಿ ಆವರಣದಲ್ಲಿ ಪ್ರಾರ್ಥನೆಯನ್ನೂ ಸಲ್ಲಿಸದೇ ಗುಹೆಯ ದರ್ಶನವನ್ನೂ ಮಾಡದೇ ಕೆಲಭಕ್ತರು ಹಿಂದಿರುಗಿದರೆ ದೂರದಿಂದ ಆಗಮಿಸಿದ್ದವರು ಜಿಲ್ಲಾಡಳಿತದ ಸೂಚನೆಯಂತೆ ದರ್ಶನ ಪಡೆದು ಹಿಂದಿರುಗಿದರು. ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಎಂ.ಎಚ್‌. ಅಕ್ಷಯ್‌ ಇತರರು ಇದ್ದರು. ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಪೊಲೀಸ್‌ ಇಲಾಖೆಯಿಂದ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next