ಬೆಂಗಳೂರು: ಮೇಲ್ನೋಟಕ್ಕೆ ಇದು ನಿಮಗೆ ಚಿಲ್ಲರೆ ವ್ಯವಹಾರ ಅನಿಸಿದರೂ, ವಾಸ್ತವವಾಗಿ ಇಲ್ಲಿ ನಡೆಯುತ್ತಿರುವುದು ಲಕ್ಷಗಟ್ಟಲೆ ಸುಲಿಗೆ. ಇದು ಶೌಚಾಲಯಗಳ ಸುಲಿಗೆ. ನಿತ್ಯ ಪ್ರಯಾಣಿಕರು ಬಸ್‌ಗಳಲ್ಲಿ ಚಿಲ್ಲರೆಗಾಗಿ ನಿರ್ವಾಹಕರೊಂದಿಗೆ ಜಗಳ ಕಾಯುತ್ತಾರೆ. ಆದರೆ, ಅದೇ ಪ್ರಯಾಣಿಕರು ತಮಗೆ ಅರಿವಿಲ್ಲದಂತೆ ಅದೇ ನಿಲ್ದಾಣಗಳ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆ ಮಾಡಲು ಚಿಂತಿಸದೇ ಚಿಲ್ಲರೆ ಕೊಡುತ್ತಾರೆ. ಹೀಗೆ ವಸೂಲು ಮಾಡಿದ ಚಿಲ್ಲರೆ ಒಟ್ಟಾಗಿಸಿದರೆ ತಿಂಗಳಿಗೆ ಏಳು ಲಕ್ಷ ರೂ. ದಾಟುತ್ತದೆ!
ಸುಲಿಗೆ ಹೆಸರು ಸ್ವಚ್ಛತೆ: ಈ ಸುಲಿಗೆಗೆ ಗುತ್ತಿಗೆದಾರರು ಇಟ್ಟ ಹೆಸರು “ಸ್ವಚ್ಛತೆ’! ನಗರದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನಿಲ್ದಾಣಗಳಲ್ಲಿನ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆ ಉಚಿತವಾಗಿದೆ. ಮಲ ವಿಸರ್ಜನೆಗೆ ಮಾತ್ರ 5 ರೂ. ನಿಗದಿಪಡಿಸಲಾಗಿದೆ. ಆದರೆ, ಗುತ್ತಿಗೆ ಪಡೆದವರು ಸ್ವಚ್ಛತೆ ಮತ್ತು ನೀರಿನ ನೆಪದಲ್ಲಿ ಬಳಕೆದಾದರರಿಂದ ಮೂತ್ರ ವಿಸರ್ಜನೆಗೆ 2 ರೂ. ಹಾಗೂ ಮಲ ವಿಸರ್ಜನೆಗೆ 10 ರೂ. ವಸೂಲಿ ಮಾಡುತ್ತಿದ್ದಾರೆ. ನಗರದಲ್ಲಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿಗೆ ಸೇರಿದ ಸುಮಾರು 40 ಶೌಚಾಲಗಳಿದ್ದು, ನಿತ್ಯ ಹತ್ತು ಸಾವಿರ ಜನ ಬಳಕೆ ಮಾಡುತ್ತಿದ್ದಾರೆ.
ಹೀಗೆ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿರುವ ಹಣ ನಿತ್ಯ 25ರಿಂದ 30 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಅಂದರೆ, ಮಾಸಿಕ ಏಳರಿಂದ ಏಳೂವರೆ ಲಕ್ಷ ರೂ.! ಹೀಗೆ ಹೆಚ್ಚುವರಿ ವಸೂಲಿಗೆ ಸಂಬಂಧಿಸಿದಂತೆ ದೂರು ನೀಡಿದರೆ, ಅದಕ್ಕೆ ವಿಧಿಸುವ ದಂಡ ಗರಿಷ್ಠ 100ರಿಂದ 200 ರೂ. ಅಲ್ಲದೆ, ಯಾರೂ ದೂರು ನೀಡುವುದಿಲ್ಲ. ಹಾಗಾಗಿ, ನಿತ್ಯ ಸಾವಿರಾರು ರೂ. ಎಣಿಸುವ ಗುತ್ತಿಗೆದಾರರಿಗೆ ದಂಡ ಲೆಕ್ಕಕ್ಕಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಕೊರತೆ ಹಾಗೂ ಮೇಲಿನ ಹಂತದಲ್ಲಿ ಕಟ್ಟುನಿಟ್ಟಿನ ಕ್ರಮದ ಅವಶ್ಯಕತೆ ಇದೆ ಎಂದು ಕೆಎಸ್‌ಆರ್‌ಟಿಸಿಯ ಕೆಂಪೇಗೌಡ ಬಸ್ ನಿಲ್ದಾಣ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಸ್ವಚ್ಛತೆಯೂ ಇಲ್ಲ: ಕೆಎಸ್‌ಆರ್‌ಟಿಸಿ ವ್ಯಾಪ್ತಿಗೆ ಬರುವ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಹಾಗೂ ಪೀಣ್ಯ ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಬಿಎಂಟಿಸಿ ವ್ಯಾಪ್ತಿಗೆ ಬರುವ ಮೆಜೆಸ್ಟಿಕ್, ಯಶವಂತಪುರ, ಶಾಂತಿನಗರ, ವಿಜಯನಗರ, ಶಿವಾಜಿನಗರ ಸೇರಿದಂತೆ ನಗರದ ಎಲ್ಲಾ ಬಿಎಂಟಿಸಿ ನಿಲ್ದಾಣಗಳಲ್ಲಿ ಸಾರಿಗೆ ಸಂಸ್ಥೆಯ ವತಿಯಿಂದಲೇ ಪ್ರಯಾಣಿಕರ ಅನುಕೂಲಕ್ಕಾಗಿ ಶೌಚಾಲಯಗಳನ್ನು ಕಟ್ಟಿಸಿ ಅವುಗಳ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಸ್ವಚ್ಛತೆ ಆಯಾ ಗುತ್ತಿಗೆದಾರರ ಜವಾಬ್ದಾರಿ ಎಂದೂ ಗುತ್ತಿಗೆ ನಿಯಮಾವಳಿಗಳಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಆದರೆ, ಗುತ್ತಿಗೆ ಪಡೆದವರು ಶೌಚಾಲಯಗಳನ್ನು ಸ್ವಚ್ಛವಾಗಿಡದಿದ್ದರೂ, ನೀರು ಹಾಗೂ ಸ್ವಚ್ಛತೆಗೆ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಹಣ ಕೊಟ್ಟರಷ್ಟೇ ಪ್ರವೇಶ: ಬಸ್ ನಿಲ್ದಾಣದ ಶೌಚಾಲಯಗಳಲ್ಲಿ ಹಣ ಕೊಟ್ಟ ನಂತರವೇ ಪ್ರವೇಶ. ಒಂದು ವೇಳೆ ಹಣ ನೀಡದಿದ್ದರೆ ಪ್ರವೇಶ ಅಸಾಧ್ಯ. ಬಳಕೆ ಮಾಡಿ ಕೊಡುತ್ತೇವೆ ಎಂದರೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಜತೆಗೆ, ಒಳ ಹೋಗದಂತೆ ತಡೆಯುತ್ತಾರೆ. ಇನ್ನು ಹೆಚ್ಚುವರಿ ಹಣ ವಸೂಲಿ ಕುರಿತು ಪ್ರಶ್ನಿಸಿದರೆ ಐದು ರೂ. ಕಾಲ ಹೋಯಿತು. ನೀರು ಖರೀದಿಸಿ ತರಬೇಕು. ಸಾರಿಗೆ ಸಂಸ್ಥೆಗೆ ಹೆಚ್ಚು ಹಣ ಕಟ್ಟಬೇಕು ಎಂಬೆಲ್ಲಾ ಸಬೂಬು ಹೇಳುತ್ತಾರೆ. ಶೌಚಾಲಯದ ಬಳಿ ಏನು ಜಗಳ ಮಾಡುವುದು ಎಂದು ನಾವು ಅವರು ಕೇಳಿದಷ್ಟು ಹಣ ಕೊಟ್ಟು ಬರುತ್ತೇವೆ ಎನ್ನುತ್ತಾರೆ ಪ್ರಯಾಣಿಕರು.
ವಸೂಲಿ ನಿಯಮಬಾಹಿರ – ಅಧಿಕಾರಿ: ನಿಯಮದ ಪ್ರಕಾರ ಮೂತ್ರ ವಿಸರ್ಜನೆಗೆ ಹಣ ಪಡೆಯುವಂತಿಲ್ಲ. ಹಣ ಕೇಳಿದಾಗ ಪ್ರಯಾಣಿಕರು, ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿದರೆ ಅಥವಾ ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಕ್ರಮಕೈಗೊಳ್ಳುತ್ತೇವೆ. ಹೆಚ್ಚುವರಿ ಹಣ ಪಡೆದ ಹತ್ತರಷ್ಟು ಪ್ರಮಾಣದ ದಂಡವನ್ನು ಹಾಕುತ್ತೇವೆ ಎಂದು ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ರಾವ್ ತಿಳಿಸುತ್ತಾರೆ.
ಶೌಚಾಲಯಗಳು ಎಲ್ಲೆಲ್ಲಿ?: ಕೆಎಸ್‌ಆರ್‌ಟಿಸಿ ವ್ಯಾಪ್ತಿಗೆ ಬರುವ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಹಾಗೂ ಪೀಣ್ಯ ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಬಿಎಂಟಿಸಿ ವ್ಯಾಪ್ತಿಗೆ ಬರುವ ಮೆಜೆಸ್ಟಿಕ್, ಯಶವಂತಪುರ, ಶಾಂತಿನಗರ, ವಿಜಯನಗರ, ಶಿವಾಜಿನಗರ ಸೇರಿದಂತೆ ನಗರದ 30ಕ್ಕೂ ಅಧಿಕ ಪ್ರಮುಖ ನಿಲ್ದಾಣಗಳಲ್ಲಿ ಸಾರಿಗೆ ಸಂಸ್ಥೆಯ ವತಿಯಿಂದಲೇ ಶೌಚಾಲಯ ಕಟ್ಟಿಸಿ ನಿರ್ವಹಣೆಗೆ ಗುತ್ತಿಗೆ ಕೊಡಲಾಗಿದೆ.
ಗುತ್ತಿಗೆ ಪಡೆದ ಮಾಲೀಕರು ನಮಗೆ ಸೂಚಿರುವುದರಿಂದ ಹೆಚ್ಚುವರಿ ಹಣ ಪಡೆಯುತ್ತೇವೆ. ಮೊದಲು ಹಣ ಪಡೆದು ನಂತರ ಪ್ರವೇಶ ನೀಡಲು ತಿಳಿಸಿದ್ದಾರೆ. ಹೆಚ್ಚು ಎಂದು ಯಾರಾರದೂ ಪ್ರಶ್ನಿಸಿದರೇ ಹೊರಗಿನಿಂದ ಟ್ಯಾಂಕರ್ ನೀರು ತರಿಸುತ್ತೇವೆ ಎಂದು ಕಾರಣ ಹೇಳಲು ತಿಳಿಸಿದ್ದಾರೆ.
-ರಾಜೇಶ್ (ಹೆಸರು ಬದಲಿಸಲಾಗಿದೆ), ಶೌಚಾಲಯ ನಿರ್ವಾಹಕ
“ಮಲ ವಿಸರ್ಜನೆಗೆ ಐದು ರೂ.’ ಎಂದು ಗೋಡೆಯ ಮೇಲೆ ಬರೆದಿದ್ದರೂ, 10 ರೂ. ಕೇಳುತ್ತಾರೆ. ಮೂತ್ರ ವಿಸರ್ಜನೆ ಉಚಿತ ಎಂಬ ಫಲಕಗಳು ಕಾಣೆಯಾಗಿವೆ. ಪ್ರಶ್ನಿಸಿದರೆ ಜಗಳಕ್ಕೆ ಬರುತ್ತಾರೆ. ಶೌಚಾಲಯದ ಮಂದೆ ಜಗಳ ಏಕೆಂದು ಹಣ ನೀಡಿ ಬರುತ್ತೇವೆ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ.
-ಅಂಜಿನಪ್ಪ, ಪ್ರಯಾಣಿಕ
* ಜಯಪ್ರಕಾಶ್ ಬಿರಾದಾರ್