Advertisement

ಗದಗ: ಅವಳಿ ನಗರದಲ್ಲಿ ಮೂತ್ರಾಲಯ ಸಮಸ್ಯೆ

06:24 PM Jul 06, 2022 | Team Udayavani |

ಗದಗ: ಗದಗ ಜಿಲ್ಲೆಯಾಗಿ 25 ವರ್ಷಗಳು ಗತಿಸುತ್ತ ಬಂದರೂ ಸಮಸ್ಯೆಗಳ ನಂಟು ಬಗೆಹರಿದಿಲ್ಲ. ಕಳೆದ ಹಲವು ದಶಕಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಾರ್ವಜನಿಕ ಮೂತ್ರಾಲಯ ಹಾಗೂ ಶೌಚಾಲಯಗಳ ಸಮಸ್ಯೆ ಪ್ರಮುಖವಾಗಿದ್ದು, ಅವುಗಳ ಪರಿಹಾರಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಅನ್ನೋ ಆರೋಪ ಸಾರ್ವಜನಿಕ ವಲಯದಲ್ಲಿದೆ.

Advertisement

ಗದಗ-ಬೆಟಗೇರಿ ಅವಳಿ ನಗರಕ್ಕೆ ದಿನನಿತ್ಯ ಸಾವಿರಾರು ಜನರು ತಾಲೂಕು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸುತ್ತಾರೆ. ಆದರೆ, ಜಿಲ್ಲಾ ಕೇಂದ್ರವಾಗಿರುವ ಗದಗ ನಗರದಲ್ಲಿ ಸಾರ್ವಜನಿಕ ಮೂತ್ರಾಲಯ ಹಾಗೂ ಶೌಚಾಲಯಗಳಿಲ್ಲದ ಕಾರಣ ನಗರಕ್ಕೆ ಕಾಲಿಡುವ ಮುಂಚೆಯೇ ಜಲಬಾಧೆ ತೀರಿಸಿಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಗದಗ ನಗರದ ಮಹಾತ್ಮಾ ಗಾಂಧಿ ವೃತ್ತ, ಮುಳಗುಂದ ನಾಕಾ, ಗ್ರೇನ್‌ ಮಾರುಕಟ್ಟೆ, ಹಳೆ ಜಿಲ್ಲಾಧಿಕಾರಿ ಕಚೇರಿ ಸರ್ಕಲ್‌, ಡಂಬಳ ನಾಕಾ, ಹಾತಲಗೇರಿ ನಾಕಾ, ಹೆಲ್ತ್‌ ಕ್ಯಾಂಪ್‌, ಟಾಂಗಾಕೂಟ ಸೇರಿ ಪ್ರಮುಖ ವೃತ್ತ ಹಾಗೂ ಸ್ಥಳಗಳಲ್ಲಿ ಮೂತ್ರಾಲಯ ಹಾಗೂ ಶೌಚಾಲಯಗಳಿಲ್ಲದ ಕಾರಣ ಪುರುಷರು ಸೇರಿ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ.

ಮೂತ್ರಾಲಯಗಳ ತೆರವು: ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ನಗರದ ಮಹಾತ್ಮಾ ಗಾಂಧಿ ವೃತ್ತ, ಹೆಲ್ತ್‌ಕ್ಯಾಂಪ್‌ ಹಾಗೂ ಮುಳಗುಂದ ನಾಕಾದಲ್ಲಿನ ಮೂತ್ರಾಲಯಗಳನ್ನು ತೆರವುಗೊಳಿಸಲಾಗಿದೆ. ಆದರೆ, ಸೂಕ್ತ ಜಾಗ ಗುರುತಿಸಿ ಅವುಗಳ ಪುನರ್‌ ನಿರ್ಮಾಣಕ್ಕೆ ನಗರಸಭೆ ಮುಂದಾಗುತ್ತಿಲ್ಲ. ನಗರದ ರೋಟರಿ ಸರ್ಕಲ್‌ ಬಳಿ ಮೂತ್ರಾಲಯವಿದ್ದು, ನಿರ್ವಹಣೆ ಕೊರತೆಯಿಂದಾಗಿ ಸಾರ್ವಜನಿಕರು ಉಪಯೋಗಿಸದಂತಾಗಿದೆ.

ನಗರದ ಮಾರುಕಟ್ಟೆ ಪ್ರದೇಶ ಸೇರಿ ಬಹುತೇಕ ಕಡೆಗಳಲ್ಲಿ ಮೂತ್ರಾಲಯ ಹಾಗೂ ಶೌಚಾಲಯಗಳು ಇಲ್ಲದ ಕಾರಣ ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಸ್ಥರು, ಸಾರ್ವಜನಿಕರು, ರೋಗಿಗಳು, ಮಹಿಳೆಯರು, ವೃದ್ಧರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

Advertisement

ಕೆಲವರು ಅನಿವಾರ್ಯವಾಗಿ ಖಾಲಿ ಹಾಗೂ ಪಾಳುಬಿದ್ದ ಸ್ಥಳಗಳಲ್ಲಿ ಜಲಬಾಧೆ ತೀರಿಸಿಕೊಳ್ಳುತ್ತಿದ್ದಾರೆ. ಆದರೆ, ಮಹಿಳೆಯರಿಗೆ ಮುಜುಗರದ ಸಂಗತಿಯಾಗಿದ್ದು, ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ನಗರದೊಳಗೆ ಕಾಲಿಡುವ ಮೊದಲೇ ಜಲಬಾಧೆ ತೀರಿಸಿಕೊಳ್ಳಬೇಕು ಎನ್ನುವ ಅನಿವಾರ್ಯತೆ ಸೃಷ್ಟಿಯಾಗಿದೆ.

ನಗರದ ಮಹತ್ಮಾ ಗಾಂಧಿ ವೃತ್ತ, ಹಳೇ ಜಿಲ್ಲಾಧಿಕಾರಿ ಕಚೇರಿ ವೃತ್ತ, ಮುಳಗುಂದ ನಾಕಾ, ಹಾಲತಗೇರಿ ನಾಕಾ, ಗ್ರೇನ್‌ ಮಾರುಕಟ್ಟೆ, ಸರಾಫ್‌ ಬಜಾರ್‌ ಪ್ರದೇಶಗಳಲ್ಲಿ ದಿನನಿತ್ಯ ಸಾವಿರಾರು ಜನರು ಸಂಚರಿಸುವ ಸ್ಥಳವಾಗಿದ್ದರಿಂದ ಮೂತ್ರಾಲಯ ಹಾಗೂ ಶೌಚಾಲಯದ ಅಗತ್ಯತೆ ಹೆಚ್ಚಿದೆ.

ಜನಸಾಮಾನ್ಯರಿಂದ ಛೀಮಾರಿ: ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮದಂತಹ ಅನೇಕ ಯೋಜನೆಗಳನ್ನು ರೂಪಿಸುತ್ತದೆ. ಆದರೆ, ನಗರ ಪ್ರದೇಶಗಳಲ್ಲಿಯೇ ಮೂತ್ರ ವಿಸರ್ಜನೆಗೆ ತೊಂದರೆ ಉಂಟಾದರೆ ಸರ್ಕಾರ, ಜಿಲ್ಲಾಡಳಿತ ಹಾಗೂ ನಗರಾಡಳಿತಗಳು ಕಣ್ಣುಮುಚ್ಚಿ ಕುಳಿತಿವೆ ಎಂದು ಜನಸಾಮಾನ್ಯರು ಛೀಮಾರಿ ಹಾಕುತ್ತಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಮೂತ್ರಾಲಯಗಳ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಈಗಾಗಲೇ ಮುನ್ಸಿಪಲ್‌ ಮೈದಾನದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಾಣವಾಗಲಿದೆ. ಗ್ರೇನ್‌ ಮಾರುಕಟ್ಟೆಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳ ಪರಿಶೀಲಿಸಿ ಶೌಚಾಲಯ ನಿರ್ಮಾಣಕ್ಕೆ ಪೂರಕ ಯೋಜನೆ ರೂಪಿಸಲಾಗುವುದು.
ಉಷಾ ದಾಸರ, ಅಧ್ಯಕ್ಷೆ, ಗದಗ-ಬೆಟಗೇರಿ ನಗರಸಭೆ

ಪುರುಷರು ಒಂದಿಲ್ಲೊಂದು ಸ್ಥಳ ಹುಡುಕಿಕೊಂಡು ಜಲಬಾಧೆ ತೀರಿಸಿಕೊಳ್ಳುತ್ತಾರೆ. ಆದರೆ, ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ. ಕಳೆದ ದಶಕಗಳಿಂದ ಅವಳಿ ನಗರದಲ್ಲಿ ಮೂತ್ರಾಲಯ ಹಾಗೂ ಶೌಚಾಲಯಗಳ ಸಮಸ್ಯೆ ಬಗೆಹರಿದಿಲ್ಲ.
ರಾಹುಲ್‌ ಮೆಣಸಿನಕಾಯಿ,
ಗದಗ ನಿವಾಸಿ

*ಅರುಣಕುಮಾರ ಹಿರೇಮಮಠ

Advertisement

Udayavani is now on Telegram. Click here to join our channel and stay updated with the latest news.

Next