ಮಹಾನಗರ : ಬಿಜೈಯ ಭಾರತ್ ಸಿನೆಮಾಸ್ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರವು ಮಂಗಳವಾರ ವಿಶೇಷತೆ ಯೊಂದಕ್ಕೆ ಸಾಕ್ಷಿಯಾಯಿತು.
ನಗರದ ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರು ನಿವೃತ್ತ ಯೋಧ ರೊಂದಿಗೆ ಕುಳಿತು ‘ಉರಿ’ ದ ಸರ್ಜಿಕಲ್ ಸ್ಟ್ರೈಕ್’ ಚಲನಚಿತ್ರ ವೀಕ್ಷಿಸಿ ವೈಶಿಷ್ಟ್ಯ ಮೆರೆದರು.
ಉರಿ ಸೆಕ್ಟರ್‌ನಲ್ಲಿ ಈ ಹಿಂದೆ ಭಾರತೀಯ ಯೋಧರು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಘಟನೆಯನ್ನಾಧರಿಸಿ ನಿರ್ಮಿಸಿದ ಈ ಚಿತ್ರ ಇತ್ತೀಚೆಗೆ ದೇಶಾದ್ಯಂತ ಸದ್ದು ಮಾಡುತ್ತಿದೆ. ಭಾರತೀಯ ಯೋಧರ ಸಾಹಸ ಮತ್ತು ದೇಶಪ್ರೇಮವನ್ನಾಧರಿಸಿ ತಯಾರಿಸಿದ ಈ ಚಿತ್ರವನ್ನು ಯೋಧ ರೊಂದಿಗೇ ವೀಕ್ಷಿಸಬೇಕೆಂಬ ಹಿನ್ನೆಲೆಯಲ್ಲಿ ಟೀಂ ಮೋದಿ ತಂಡವು ಚಿತ್ರ ವೀಕ್ಷಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಜಿಲ್ಲೆಯ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಕರ್ನಲ್ ಶರತ್ ಭಂಡಾರಿ ನಿಡ್ಡೆ ಗುತ್ತು, ಬ್ರಿಗೇಡಿಯರ್ ಐ.ಎನ್.ರೈ ಸಹಿತ ಹಲವು ಮಂದಿ ಮಾಜಿ ಸೈನಿಕರು, ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಸೈನಿಕರು ಚಲನಚಿತ್ರ ವೀಕ್ಷಿಸಿದರು. ನಗರದ ಚೇತನಾ ವಿಶೇಷ ಮಕ್ಕಳ ಶಾಲೆಯ 15 ಮಂದಿ ವಿಶೇಷ ಚೇತನ ಮಕ್ಕಳು ಚಿತ್ರ ವೀಕ್ಷಿಸಿ ಸಂತಸಪಟ್ಟರು.
ಟೀಮ್ ಮೋದಿ ತಂಡದ ಪ್ರಮುಖರಾದ ನರೇಶ್ ಶೆಣೈ, ಮಂಜಯ್ಯ ನೇರಂಕಿ, ಗೋಪಿ ಭಟ್ ಉಪಸ್ಥಿತರಿದ್ದರು. ಚಿತ್ರ ವೀಕ್ಷಣೆಯ ಬಳಿಕ ಬ್ರಿಗೇಡಿಯರ್ ಐ.ಎನ್. ರೈ ಮಾತನಾಡಿ, ಯುದ್ಧದ ಚಿತ್ರಣ, ಸೈನಿಕರ ಭಾವನೆಗಳು ಉರಿ ಚಲನಚಿತ್ರದಲ್ಲಿ ಮೂಡಿಬಂದಿವೆೆ. ಹಳ್ಳಿಗಳ ಮಂದಿ ಕೂಡ ಈ ಚಲನ ಚಿತ್ರವನ್ನು ವೀಕ್ಷಿಸುವಂತಾಗಬೇಕು ಎಂದು ಹೇಳಿದರು.