Advertisement

ಅಧಿವೇಶನದಲ್ಲಿ ಪಿಂಚಣಿ ವಿಚಾರ ಪ್ರಸ್ತಾಪಿಸಲು ಒತ್ತಾಯ

05:46 PM Sep 21, 2020 | Team Udayavani |

ರಾಯಚೂರು: ಇಂದಿನಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವ ಕುರಿತು ಜಿಲ್ಲೆಯ ಜನಪ್ರತಿನಿಧಿ ಗಳು ಪ್ರಸ್ತಾಪಿಸಬೇಕು ಎಂದು ಕರ್ನಾಟಕ ರಾಜ್ಯ ಅನುದಾನ ರಹಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಹರ್ಷವರ್ಧನ್‌ ತಿಳಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2006ರನಂತರ ಅನುದಾನಕ್ಕೆ ಒಳಪಟ್ಟ ಶಾಲೆ, ಕಾಲೇಜುಗಳಲ್ಲಿ ಬಡ್ತಿ ಹೊಂದಿದ ಶಿಕ್ಷಕರಿಗೆ ಕೇವಲ ವೇತನ ನೀಡಲಾಗುತ್ತಿದೆ. ಈಗಿರುವ ನೌಕರರಿಗೆ ಯಾವುದೇ ಪಿಂಚಣಿ ಸೌಲಭ್ಯ ಇರುವುದಿಲ್ಲ. ನೂತನ ಪಿಂಚಣಿ ಯೋಜನೆ ಜಾರಿಯಾದ ಬಳಿಕ ಈ ಶಿಕ್ಷಕರಿಗೆ ಸರ್ಕಾರದ ವೇತನ ಬಿಟ್ಟರೆ ಮತ್ತೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ದೂರಿದರು.

ಇದೇ ಕಾರಣಕ್ಕೆ ಸುಮಾರು 2 ಸಾವಿರಕ್ಕೂ ಹೆಚ್ಚು ನೌಕರರು ಕೊನೆ ಸಂಬಳ ಮಾತ್ರ ಪಡೆದು, ಬರಿಗೈಯಲ್ಲಿ ನಿವೃತ್ತಿಯಾಗಿದ್ದಾರೆ. ಅನೇಕರು ಸೇವೆಯಲ್ಲಿರುವಾಗಲೇ ಅಕಾಲಿಕ  ಮರಣ ಹೊಂದಿದ್ದಾರೆ. ಆದರೆ, ಇವರ ಕುಟುಂಬಗಳಿಗೆ ಯಾವುದೇ ಆರ್ಥಿಕ ಸೌಲಭ್ಯ ಸಿಗುತ್ತಿಲ್ಲ. 2006ಕ್ಕೂ ಮೊದಲು ಅನುದಾನ ರಹಿತ ಶಾಲೆಗಳಿಗೆ ಶಿಕ್ಷಕರಾಗಿ ನೇಮಕಗೊಂಡವರಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿದೆ. ಅದಾದ ಬಳಿಕ ಅನುದಾನಕ್ಕೆ ಒಳಪಟ್ಟರೆ ಎಷ್ಟೇ ವರ್ಷ ಸೇವೆ ಸಲ್ಲಿಸಿದ್ದರೂ ಪರಿಗಣಿಸುತ್ತಿಲ್ಲ. ನಿವೃತ್ತಿ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ದೂರಿದರು.

ಕಳೆದ ವರ್ಷ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 21 ದಿನ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಬಿ.ಎಸ್‌.ಯಡಿಯೂರಪ್ಪ ಅವರು ಸರ್ಕಾರಕ್ಕೆ ಈ ವಿಷಯ ತಿಳಿಸುವುದಾಗಿ ತಿಳಿಸಿದ್ದರು. ಆದರೆ, ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದು, ಖುದ್ದು ಬಿ.ಎಸ್‌.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದರೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ನೀಡಬೇಕು. ಜ್ಯೋತಿ ಸಂಜೀವಿನಿ ಯೋಜನೆಯನ್ನು ವಿಸ್ತರಿಸಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಅಧಿವೇಶನದಲ್ಲಿ ಚರ್ಚಿಸುವ ಮೂಲಕ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲಿ ಎಂದು ಒತ್ತಾಯಿಸಿದರು. ಮುರಳೀಧರ ಕುಲಕರ್ಣಿ, ಕಲ್ಲಪ್ಪ, ವೆಂಕಟೇಶ, ಬಸವರಾಜ, ಬಸವನಗೌಡ ಸೇರಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next