ಗುಂಡ್ಲುಪೇಟೆ: ರೈತರ ಕೃಷಿ ಪಂಪ್ ಸೆಟ್‌ಗಳಿಗೆ ನಿಗಧಿಯಂತೆ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿ ರೈತ ಸಂಘಟನೆ ಮುಖಂಡರು ಪಟ್ಟಣದ ಸೆಸ್ಕ್ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅನ್ನದಾತರ ಆಕ್ರೋಶ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತ ಸಂಘಟನೆ ಮುಖಂಡರು ಎಂಡಿಸಿಸಿ ಬ್ಯಾಂಕ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂದೆ ಮಾನವ ಸರಪಳಿ ನಿರ್ಮಿಸಿ, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ನಂತರ ಸೆಸ್ಕ್ ಕಚೇರಿ ಮುಂದೆ ಜಮಾಯಿಸಿ ಆಕ್ರೋಶ ಹೊರ ಹಾಕಿದರು.
7 ಗಂಟೆ ತ್ರಿಫೇಸ್ ವಿದ್ಯುತ್ ನೀಡಿ: ಈ ವೇಳೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ರೈತರ ಪಂಪ್ ಸೆಟ್‌ಗಳಿಗೆ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡುವಂತೆ ಸರ್ಕಾರವೇ ಆದೇಶ ಮಾಡಿದೆ. ಆದರೆ ಸೆಸ್ಕ್ ಇಲಾಖೆ ಅಧಿಕಾರಿಗಳು ಲೋಡ್ ಶೆಡ್ಡಿಂಗ್ ನೆಪ ಹೇಳಿ ಕೇವಲ 3ರಿಂದ 4ಗಂಟೆಗಳ ಕಾಲ ಮಾತ್ರ ವಿದ್ಯುತ್ ನೀಡುತ್ತಿದ್ದಾರೆ. ಅದರ ಮಧ್ಯೆ ಅರ್ಧ ಗಂಟೆಕಾಲ ವಿನಾಃ ಕಾರಣ ವ್ಯತ್ಯಯವಾಗುತ್ತಿದೆ. ನಂತರ ನಿಗದಿಯಂತೆ ವಿದ್ಯುತ್ ಸರಬರಾಜು ಮಾಡದೆ ಅದರಲ್ಲಿಯೂ ಕಡಿತ ಗೊಳಿಸ ಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ಶಾಶ್ವತ ಪರಿಹಾರ ದೊರಕಿಸಿ: ಪ್ರಸ್ತುತ ಬೇಸಿಗೆ ಯಾಗಿರುವ ಹಿನ್ನೆಲೆ ನೀರಿಲ್ಲದೆ ಬೆಳೆಗಳು ಒಣಗುತ್ತಿದೆ. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕು ವಂತಾಗಿದೆ. ವಿದ್ಯುತ್ ಹೋದ ಸಂದರ್ಭದಲ್ಲಿ ಫೋನ್ ಮಾಡಿದರೆ ಸಂಬಂಧಪಟ್ಟವರು ಸ್ವೀಕರಿಸುವುದಿಲ್ಲ. ಜೊತೆಗೆ ಅನೇಕ ಕಡೆ ಮಧ್ಯ ರಾತ್ರಿ ವೇಳೆ ವಿದ್ಯುತ್ ನೀಡುತ್ತಿದ್ದು, ರೈತರು ನಿದ್ರೆ ಮಾಡದೆ ಕಾಯಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಸಂಬಂಧಟ್ಟ ಮೇಲ ಧಿಕಾರಿಗಳು ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ಸೆಸ್ಕ್ ಅಧಿಕಾರಿಗಳೇ ನೇರ ಹೊಣೆ: ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಈಗಾಗಲೇ ತಾಲೂಕಿನಾದ್ಯಂತ 9,187 ಮೋಟರ್‌ಗಳು ಸುಟ್ಟು ಹೋಗಿದೆ. ಇದರ ಖರ್ಚು 10 ರಿಂದ 15 ಸಾವಿರ ಆಗುತ್ತದೆ. ಇದಕ್ಕೆ ಸೆಸ್ಕ್ ಅಧಿಕಾರಿಗಳೇ ನೇರ ಹೊಣೆ. ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಸೆಸ್ಕ್ ಇಲಾಖೆ ಅಧಿಕಾರಿಗಳು ಸರ್ಕಾರ ನಿಗಧಿ ಪಡಿಸಿರುವ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಸೆಸ್ಕ್ ಇಲಾಖೆ ಇಇ ವಂಸತ್ ಕುಮಾರ್ ಭೇಟಿ ರೈತರು ಮನವಿ ಆಲಿಸಿ, ಮೂರು ದಿನದೊಳಗೆ ಸರ್ಕರದ ನಿಗದಿಯಂತೆ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಿಭಟನಾನಿರತ ರೈತರು ಮೂರು ದಿನದೊಳಗೆ ಸಮಸ್ಯೆ ಬಗೆಹರಿಯಬೇಕು. ಇಲ್ಲದಿದ್ದರೆ ಯಾವ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಕಂಡು ಬರುತ್ತದೋ ಆ ಗ್ರಾಮದಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರೈತ ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ತೆರಕಣಾಂಬಿ ಶಾಂತ ಮಲ್ಲಪ್ಪ, ಅಧ್ಯಕ್ಷ ಹೊನ್ನೇಗೌಡನಹಳ್ಳಿ ಶಿವಮಲ್ಲು, ಹಂಗಳ ಮಾಧು, ದಿಲೀಪ್, ಮಲ್ಲಯ್ಯನಪುರ ಶಿವಣ್ಣ, ಬಸವೇಗೌಡ ಸೇರಿದಂತೆ ಇತರರು ಇದ್ದರು.