Advertisement

ಸಾರ್ವಜನಿಕರಿಗೆ ಲಸಿಕೆ ನೀಡಲು ಆಗ್ರಹ

03:08 PM Jun 05, 2021 | Suhan S |

ಸೊರಬ: ಕೋವಿಡ್ ನಿಯಂತ್ರಣಕ್ಕೆ ನೀಡುತ್ತಿರುವ ಲಸಿಕೆ ಸಾರ್ವತ್ರಿಕವಾಗಿ ಎಲ್ಲರಿಗೂ ದೊರೆಯುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆನವಟ್ಟಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಸಿ. ಪಾಟೀಲ್‌ ಆಗ್ರಹಿಸಿದರು.

Advertisement

ಆನವಟ್ಟಿ ಗ್ರಾಮದ ನಾಡ ಕಚೇರಿ ಮುಂಭಾಗ ಆನವಟ್ಟಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಉಪತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಯುವಜನರಿಗೆ,

ಗ್ರಾಮೀಣ ಪ್ರದೇಶದ ಜನತೆಗೆ, ಬಡವರಿಗೆ ಕೋವಿಡ್ ಲಸಿಕೆ ದೊರೆಯುತ್ತಿಲ್ಲ. ಬಿಜೆಪಿ ಸರ್ಕಾರ ಕೇವಲ ಉಳ್ಳವರಿಗೆ ಮಾತ್ರ ಲಸಿಕೆ ಪೂರೈಸುವ ನೀತಿಯನ್ನು ಅನುಸರಿಸುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ದರದಲ್ಲಿ ಲಸಿಕೆ ನೀಡಲಾಗುತ್ತಿದೆ. ಜನವಿರೋಧಿ  ಲಸಿಕೆನೀತಿ ಹೊಂದಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಯೊಬ್ಬ ನಾಗರಿಕರು ಜಾಗೃತರಾಗಬೇಕು ಎಂದರು.

ದೇಶದಲ್ಲಿ ಕೋವಿಡ್ ಎರಡನೇ ಅಲೆಯೂ ಹೆಚ್ಚಿನ ಸಂಕಷ್ಟವನ್ನು ಉಂಟು ಮಾಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಲಸಿಕೆ ನೀತಿಯೇ ಕಾರಣವಾಗಿದೆ. ಸಕಾಲದಲ್ಲಿ ಲಸಿಕೆ ಉತ್ಪಾದನೆಗೆ ಅನುದಾನ ಮತ್ತು ಉತ್ತೇಜನ ನೀಡದೆ ವಿಫಲವಾಗಿರುವುದರಿಂದ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದು, ಇದರ ಜವಾಬ್ದಾರಿಯನ್ನು ಯಾರು ಹೊರುತ್ತಾರೆ ಎಂದು ಪ್ರಶ್ನಿಸಿದ ಅವರು, ಸುಮಾರು 130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ನಿತ್ಯ 1ಕೋಟಿ ಜನರಿಗೆ ಲಸಿಕೆ ನೀಡಬೇಕು. ಪ್ರಸ್ತುತ ಕೇವಲ ಸರಾಸರಿ 16 ಲಕ್ಷ ಜನರಿಗೆ ಲಸಿಕೆ ನೀಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದರು.

ಆನವಟ್ಟಿ ಭಾಗದಲ್ಲಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಕೋವಿಡ್ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ. ವೃತ್ತಿಯನ್ನೇ ಆಧರಿಸಿ ಬದುಕು ಕಟ್ಟಿಕೊಂಡಿದ್ದ ಮಡಿವಾಳ, ಸವಿತಾ ಹಾಗೂ ಹಡಪದ ಸೇರಿದಂತೆ ಇತರೆ ಸಮಾಜದವರನ್ನು ಗುರುತಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಜತೆಗೆ ದಿನಸಿ ವಸ್ತುಗಳ ಕಿಟ್‌ ನೀಡಲಾಗುತ್ತಿದೆ. ಇದರ ಜತೆಗೆ ಕೊರೊನಾ ಹರಡುವಿಕೆ ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ಆಶಾ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಗೌರವಿಸುವ ಕೆಲಸವನ್ನು ಬ್ಲಾಕ್‌ ಕಾಂಗ್ರೆಸ್‌ ಮಾಡುತ್ತಿದೆ ಎಂದರು.

Advertisement

ಆನವಟ್ಟಿ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಹವಾಲ್ದಾರ್‌, ಬ್ಲಾಕ್‌ ಕಿಸಾನ್‌ ಘಟಕದ ಅಧ್ಯಕ್ಷ ರೇವಣಪ್ಪ ಟಿಜಿಕೊಪ್ಪ, ಅಲ್ಲಾಭಕ್ಷ, ಅಕ್ರಂಪಾಷಾ, ಶಿವಪ್ಪ ಮಲ್ಲಾಪುರ, ಮುಹಮ್ಮದ್‌ ಅನ್ಸರ್‌, ರವಿ ಮಡಿವಾಳರ, ರಘುವೀರ್‌ ಕುಮಾರ್‌, ಅಭಿಷೇಕ್‌ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next