ರಾಯಚೂರು: ಪದವಿ ಶಿಕ್ಷಣದವರೆಗೆ ಕನ್ನಡ ಮಾಧ್ಯಮದಲ್ಲೇ ಬೋಧನೆ ಮಾಡುವುದು ಸೇರಿದಂತೆ ವಿವಿಧಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬುಧವಾರ ಜಿಲ್ಲಾ ಕನ್ನಡ ಕ್ರಿಯಾ ಸಮಿತಿಸದಸ್ಯರು ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದಪ್ರತಿಭಟನಾಕಾರರು, ಕನ್ನಡ ಭಾಷೆ ಉಳಿವಿಗಾಗಿ ಸರ್ಕಾರ ಕಠಿಣ ನಿಯಮ ಜಾರಿ ಮಾಡಬೇಕು. ಕನ್ನಡ ನೆಲದಲ್ಲಿಯೇ ಕನ್ನಡ ಭಾಷಿಕರಿಗೆ ಅನ್ಯಾಯವಾಗುವಸ್ಥಿತಿ ಬಂದೊದಗಿದೆ. ಇದನ್ನು ತಪ್ಪಿಸಬೇಕಾದರೆ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಬೇಕು,10ನೇ ತರಗತಿವರೆಗೆ ಕನ್ನಡಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಮಾತ್ರ ರಾಜ್ಯದಲ್ಲಿ ಉದ್ಯೋಗ ನೀಡಬೇಕು, ಕನ್ನಡೇತರು ಕನ್ನಡ ಮಾಧ್ಯಮ ಶಿಕ್ಷಣ ಪಡೆಯದವರಿಗೆ ಉದ್ಯೋಗಾವಕಾಶ ಕಲ್ಪಿಸಬಾರದು ಎಂದು ಒತ್ತಾಯಿಸಿದರು.
ಡಾ| ಸರೋಜಿನಿ ಮಹಿಷಿ ಪರಿಷ್ಕೃತ ವರದಿಗಿಂತ ಹೆಚ್ಚಿಗೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಎಲ್ಲ ಹಂತದಲ್ಲಿ ಉದ್ಯೋಗ ನೀಡಬೇಕು. ತಾಂತ್ರಿಕ ಹಾಗೂ ಉನ್ನತ ಶಿಕ್ಷಣ ಹೊಂದಿದದವರು ಕನ್ನಡಿಗರೇ ಇರುವುದರಿಂದ ಪರರಾಜ್ಯದವರಿಗೆ ಅವಕಾಶ ನೀಡದೇ ನಮ್ಮರಾಜ್ಯದವರನ್ನೇ ನೇಮಿಸಿಕೊಳ್ಳಬೇಕು. ಕನ್ನಡ ಮಾಧ್ಯಮ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮ ಶಾಲೆ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಬೇಕು. ನಗರದ ರೈಲ್ವೆನಿಲ್ದಾಣದಲ್ಲಿರುವ ತೆಲಗು ಭಾಷೆ ಫಲಕ ತೆರವುಗೊಳಿಸಿ ಕನ್ನಡದಲ್ಲಿಯೇ ಸೂಚನಾ ಫಲಕ ಅಳವಡಿಸಲು ಕ್ರಮ ಜರುಗಿಸಬೇಕು ಎಂದರು.
ಗಡಿನಾಡು ಕನ್ನಡ ಶಿಕ್ಷಣ ಪಡೆದವರಿಗೆ ಕರ್ನಾಟಕದಲ್ಲಿ ಶಿಕ್ಷಣ ಹೊಂದಲು ಅವಕಾಶ ನೀಡಬೇಕು, ಕನ್ನಡ ಮಾಧ್ಯಮದ ಶಿಕ್ಷಣಹೊಂದಿದ ಗಡಿನಾಡು ಕನ್ನಡಿಗರಿಗೆ ಆಯಾ ರಾಜ್ಯದಲ್ಲಿ ಉದ್ಯೋಗ ನೀಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಈ ವೇಳೆ ಗೌರವಾಧ್ಯಕ್ಷ ಬಷೀರ್ ಅಹ್ಮದ್, ಅಧ್ಯಕ್ಷ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಹನುಮಂತ ಆಲೂರು, ಹಿರಿಯ ಸಾಹಿತಿ ವೀರ ಹನುಮಾನ್, ಸದಸ್ಯರಾದ ಈರಣ್ಣ ಬೆಂಗಾಲಿ, ಎಚ್. ಎಚ್. ಮ್ಯಾದಾರ್, ಬಸವರಾಜ ಕಳಸದ, ಮಿಮಿಕ್ರಿ ಬಸವರಾಜ, ಗೋವಿಂದರಾಜ್, ಮೈತ್ರಿಕರ, ಡಾ|ರಾಜಕುಮಾರ ಅಭಿಮಾನಿಗಳ ಸಂಘದ ಸದಸ್ಯರು ಇದ್ದರು.