ಶಹಾಬಾದ: ಶತಾಯುಷಿ ಡಾ| ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರುದಿನಗಳ ಶೋಕಾಚರಣೆ ಘೋಷಿಸಿದ್ದರೂ ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಿದ್ದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಗುರುವಾರ ನೆಹರು ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಭೀಮರಾವ್ ಸಾಳುಂಕೆ, ದೇಶ ಕಂಡ ಮಹಾನ್ ಸಂತ ಲಿಂಗೈಕ್ಯ ಆಗಿದ್ದರಿಂದ ರಾಜ್ಯ ಸರ್ಕಾರ ಒಂದು ದಿನ ರಜೆ ಹಾಗೂ ಮೂರು ದಿನ ಶೋಕಾಚರಣೆ ಘೋಷಿಸಿದೆ. ಆದರೆ ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಸಂವಿಧಾನದ ಸಂಭಾಷಣೆಗಳ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂವಿಧಾನ ವಿರೋಧಿ ಮತ್ತು ಸಿದ್ಧಗಂಗಾ ಶ್ರೀಗಳಿಗೆ, ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೋಕಾಚರಣೆ ವೇಳೆ ಈ ರೀತಿಯ ಕಾರ್ಯಕ್ರಮ ಮಾಡುವುದು ಸರಿಯಲ್ಲ ಎನ್ನುವ ಕನಿಷ್ಠ ಜ್ಞಾನವೂ ಸಚಿವರಿಗಿಲ್ಲವೇ? ಸರ್ಕಾರದ ಆದೇಶವನ್ನೇ ಧಿಕ್ಕರಿಸಿ ದೇಶದ್ರೋಹಿಗಳಾದ ಕನ್ನಯ್ಯಕುಮಾರ, ಅಸಾದುದ್ದೀನ್ ಓವೈಸಿ ಅವರನ್ನು ಕರೆಯಿಸಿ ಕಾರ್ಯಕ್ರಮ ನಡೆಸಿರುವುದು ನಾಚಿಕೆಗೇಡಿನ ಸಂಗತಿ. ಅಲ್ಲದೇ ಇನ್ನೊಬ್ಬ ಸಚಿವರಾದ ಸಾ.ರಾ. ಮಹೇಶ ಅವರು ಐಪಿಎಸ್ ಮಹಿಳಾ ಅಧಿಕಾರಿಯೊಬ್ಬರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಅಧಿಕಾರದ ದರ್ಪ ತೋರಿದರೂ ಮುಖ್ಯಮಂತ್ರಿಗಳು ಅಧನ್ನು ಸಮರ್ಥಿಸಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಬಿಜೆಪಿ ಮುಖಂಡರಾದ ಚಂದ್ರಕಾಂತ ಗೊಬ್ಬೂರಕರ್, ಅರುಣ ಪಟ್ಟಣಕರ್ ಮಾತನಾಡಿದರು.
ಬಿಜೆಪಿ ಅಧ್ಯಕ್ಷ ಸುಭಾಷ ಜಾಪೂರ, ಬಸವರಾಜ ಬಿರಾದಾರ, ನಾಗರಾಜ ಮೇಲಗಿರಿ, ಕನಕಪ್ಪ ದಂಡಗುಲಕರ್, ಸೂರ್ಯಕಾಂತ ವಾರದ, ಅಣ್ಣಪ್ಪ ದಸ್ತಾಪುರ, ನಾಗಣ್ಣ ರಾಂಪೂರೆ, ದೇವದಾಸ ಜಾಧವ್, ಸಂಜಯ ಕೋರೆ, ರೇವಣಸಿದ್ದ ಅಂಬಲಗಿ, ಸಂಜಯ ವಿಠಕರ್, ಬಸವರಾಜ ಮದ್ರಕಿ, ಶರಣು ವಸ್ತ್ರದ್, ಚಂದ್ರಕಾಂತ ಸುಬೇದಾರ, ಶರಣು ಕರಣಗಿ, ಸಿದ್ರಾಮ ಕುಸಾಳೆ, ಪಾರ್ವತಿ ಪವಾರ, ಜ್ಯೋತಿ ಶರ್ಮಾ, ಜಯಶ್ರೀ ಸೂಡಿ, ಶಶಿಕಲಾ ಸಜ್ಜನ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು. ಪ್ರತಿಭಟನೆ ನಂತರ ತಹಶೀಲ್ದಾರ್ ಸುರೇಶ ವರ್ಮಾ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಲಬುರಗಿ: ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿ ಭಾರತೀಯ ಜನತಾ ಪಕ್ಷ ಪ್ರತಿಭಟನೆ ನಡೆಸಲು ಮುಂದಾಗಿದೆ.
ಕರ್ನಾಟಕ ರತ್ನ, ತುಮಕೂರಿನ ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿಯವರು ಶಿವಾಧೀನರಾದ ಪ್ರಯುಕ್ತ ರಾಜ್ಯ ಸರ್ಕಾರ ಘೋಷಿಸಿದ ಶೋಕಾಚರಣೆ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಪಂಚತಾರಾ ಹೋಟೆಲ್‌ದಲ್ಲಿ ಸಂವಿಧಾನ ಸಂಭಾಷಣೆ ವಿಚಾರ ಸಂಕಿರಣ ನಡೆಸಿರುವುದು ಹಾಗೂ ಮಾಧ್ಯಮದವರನ್ನು ಭಯೋತ್ಪಾದಕರಿಗೆ ಹೋಲಿಸಿದ್ದನ್ನು ಖಂಡಿಸಿ ಬಿಜೆಪಿ ಜ. 25ರಂದು ಬೆಳಗ್ಗೆ 11:30ಕ್ಕೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಸಚಿವರು ಶೋಕಾಚರಣೆ ನಡುವೆ ಕಾರ್ಯಕ್ರಮ ನಡೆಸಿದ್ದಕ್ಕೆ ಅದಕ್ಕೆ ಸಮಜಾಯಿಷಿ ನೀಡಿರುವುದು ಹಾಗೂ ಈ ವಿಷಯದಲ್ಲಿ ಮಾಧ್ಯಮಗಳು ವರದಿ ಮಾಡಿದ್ದಕ್ಕೆ ಭಯೋತ್ಪಾದಕರೆಂದು ಹೇಳಿರುವುದು ನಿಜಕ್ಕೂ ಅವಮಾನದ ಸಂಗತಿಯಾಗಿದ್ದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮಾಧ್ಯಮ ಸಂಚಾಲಕ ಸಂಗಣ್ಣ ಇಜೇರಿ ತಿಳಿಸಿದ್ದಾರೆ.