Advertisement
ಭದ್ರತೆ ದೃಷ್ಠಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲ್ಪಟ್ಟಿರುವ ಕರಾವಳಿಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಭಯೋತ್ಪಾದಕ ಸಂಘಟನೆಗಳ ನಂಟು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಸಂಘಟನೆ ಗಳು ಸ್ಲೀಪರ್ ಸೆಲ್‌ಗಳ ಮೂಲಕ ಕಾರ್ಯಚಟುವಟಿಕೆ ಗಳನ್ನು ನಡೆಸುತ್ತಿರುವುದು ರಾಷ್ಟ್ರೀಯ ತನಿಖಾ ಸಂಸ್ಥೆ ಗಳ ತನಿಖೆಯಿಂದ ಬಹಿರಂಗಗೊಂಡಿದೆ. ಇದಲ್ಲದೆ ಕರಾವಳಿಯಲ್ಲಿ ಅಗಾಗ್ಗೆ ರಿಂಗಣಿಸುತ್ತಿರುವ ಸ್ಯಾಟ್‌ಲೆçಟ್ ಕರೆಗಳು ಕೂಡ ತನಿಖಾ ತಂಡಗಳಿಗೆ ಸವಾಲು ಆಗಿ ಪರಿಣಮಿಸಿವೆ. ಈ ಹಿನ್ನಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಉಗ್ರರ ಚಟುವಟಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಷ್ಟ್ರೀಯ ತನಿಖಾ ದಳದ ಕಚೇರಿಯನ್ನು ಮಂಗಳೂರಿನಲ್ಲಿ ತೆರೆಯಬೇಕೆಂಬ ಬೇಡಿಕೆಯನ್ನು ಕೇಂದ್ರ ಸರಕಾರಕ್ಕೆ ಮಾಡಲಾಗಿತ್ತು.
Related Articles
Advertisement
ದೊರೆಯದ ಸ್ಪಂದನೆ :
ಬಿ.ಎಸ್. ಯಡಿಯೂರಪ್ಪ ಅವರು 2017ರಲ್ಲಿ ಮಂಗಳೂರಿಗೆ ಬಂದ ವೇಳೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಕೇಂದ್ರಕ್ಕೆ ಒತ್ತಡ ಹೇರಿ ಮಂಗಳೂರಿನಲ್ಲಿ ಕೇಂದ್ರೀಯ ತನಿಖಾ ದಳ ಕಚೇರಿ ಸ್ಥಾಪಿಸಲಾಗುವುದೆಂಬ ಭರವಸೆ ನೀಡಿದ್ದರು. ಸಂಸದೆ ಶೋಭಾ ಕರಂದ್ಲಾಜೆ ಅವರು ಈ ಬಗ್ಗೆ ಅಂದಿನ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದರು. ಮಾತ್ರವಲ್ಲದೇ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದರಾದ ನಳಿನ್ ಕುಮಾರ್ ಕಟೀಲು ಮತ್ತು ಶೋಭಾ ಕರಂದ್ಲಾಜೆ ಅವರನ್ನೊಳಗೊಂಡ ನಿಯೋಗವು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
ಎನ್‌ಐಎ ಕಚೇರಿ :
ಎನ್‌ಐಎ ಸಂಸ್ಥೆ ಯಾವುದೇ ರಾಜ್ಯಗಳಲ್ಲಿ ಭಯೋತ್ಪಾದಕ ಕೃತ್ಯಗಳ ಕುರಿತು ತನಿಖೆ ಮಾಡುವ ಮತ್ತು ಕ್ರಮ ಜರುಗಿಸುವ ಅಧಿಕಾರವನ್ನು ಹೊಂದಿದೆ. ಪ್ರಸ್ತುತ ಎನ್‌ಐಎ ಕಚೇರಿಗಳು ಹೈದರಾಬಾದ್, ಗುವಾಹಾಟಿ, ಕೊಚ್ಚಿ, ಲಕ್ನೋ, ಮುಂಬಯಿ, ಕೋಲ್ಕತ್ತಾ, ರಾಯಪುರ, ಜಮ್ಮುವಿನಲ್ಲಿದೆ. ಕರಾವಳಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳ ನಂಟು ಕೇಳಿಬಂದಾಗ ಎನ್‌ಐಎ ತಂಡ ಹಲವಾರು ಬಾರಿ ಮಂಗಳೂರಿಗೆ ಆಗಮಿಸಿದೆ. ಮಂಗಳೂರು, ಕಾಸರಗೋಡಿನಿಂದ ಉತ್ತರಕನ್ನಡ, ಕೊಡಗು ಜಿಲ್ಲೆಗಳು ಭಯೋತ್ಪಾದಕ ಚಟುವಟಿಕೆಗಳ ನಂಟು ಕುರಿತು ಮಹತ್ವವನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಾಯು, ಜಲ, ರಸ್ತೆ ಸಾರಿಗೆಗಳು ಹಾಗೂ ಮೂಲಸೌಕರ್ಯಗಳನ್ನು ಹೊಂದಿರುವ ಮಂಗಳೂರು ಕೇಂದ್ರವಾಗಿಟ್ಟು ಎನ್‌ಐಎ ಕಚೇರಿಯನ್ನು ಸ್ಥಾಪಿಸಬಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪ್ರಸ್ತುತ ಎನ್‌ಐಎ ಕ್ಯಾಂಪ್ ಅಫೀಸ್ ಬೆಂಗಳೂರಿನಲ್ಲಿದೆ.
ಗೃಹಸಚಿವರಿಗೆ ಮನವಿ ಸಲ್ಲಿಕೆ :
ಕರಾವಳಿಯಲ್ಲಿ ಭಯೋತ್ಪಾದಕ ಸಂಘಟನೆಗಳ ನಂಟು ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಎನ್‌ಐಎ ಕಚೇರಿಯನ್ನು ತೆರೆಯಬೇಕೆಂದು ಈ ಹಿಂದೆಯೂ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಇದೀಗ ಮತ್ತೇ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ಆಗ್ರಹಿಸಿದ್ದು ಇದು ಕಾರ್ಯರೂಪಕ್ಕೆ ಬರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.– ನಳಿನ್ ಕುಮಾರ್ ಕಟೀಲು, ಸಂಸದರು ದ.ಕ.