ಹುಬ್ಬಳ್ಳಿ: ಕೋವಿಡ್ ಸೋಂಕು ಕಂಡು ಬಂದ ಪ್ರದೇಶದ 100 ಮೀಟರ್ ವ್ಯಾಪ್ತಿಯನ್ನು ಜಿಲ್ಲಾಡಳಿತ ಸೀಲ್‌ಡೌನ್ ಮಾಡುತ್ತಿದ್ದು, ಇದನ್ನು ತೆರವುಗೊಳಿಸುವಂತೆ ಅನೇಕರು ಜನಪ್ರತಿನಿಧಿಗಳ ದುಂಬಾಲು ಬಿದ್ದಿದ್ದು, ಇನ್ನಿಲ್ಲದ ಒತ್ತಡ ತರುತ್ತಿದ್ದಾರೆಂದು ಹೇಳಲಾಗುತ್ತಿದೆ.
ಮಹಾನಗರ ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಪ್ರಮಾಣ ದ್ವಿಶತಕ ಹತ್ತಿರಕ್ಕೆ ಬಂದಿದ್ದು, ಹೊಸ ಪ್ರದೇಶಗಳಲ್ಲಿ ಸೋಂಕು ಪ್ರಕರಣ ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ಇದರ ನಡುವೆ ಸೋಂಕು ತಡೆ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳಿಗೆ ಜನ ಮುಂದಾಗುತ್ತಿಲ್ಲ. ಹಳೇ ಹುಬ್ಬಳ್ಳಿ ಸದರಸೋಫಾ, ಆನಂದನಗರ, ಗಬ್ಬೂರ ಹಾಗೂ ಮಂಟೂರ ರಸ್ತೆ, ಗಣೇಶಪೇಟೆ ಸೇರಿ ದಂತೆ ಇನ್ನಿತರೆ ಕಡೆ ಸೀಲ್‌ಡೌನ್ ಮಾಡಲಾಗಿದ್ದು, ಇದನ್ನು ತೆರವುಗೊಳಿಸುವಂತೆ ಶಾಸಕರು ಸೇರಿ ದಂತೆ ಹಲವರ ಮೇಲೆ ಒತ್ತಡ ತರುತ್ತಿದ್ದಾರೆ ಎನ್ನಲಾಗುತ್ತಿದೆ.
ಜನಪ್ರತಿನಿಧಿಗಳಿಗೆ ದೂರವಾಣಿ ಹಾಗೂ ನೇರವಾಗಿ ಭೇಟಿ ಮಾಡಿ, ಸೀಲ್‌ಡೌನ್ ತೆರವಿಗೆ ಒತ್ತಾಯಿಸುತ್ತಿದ್ದು, ಮುಂದಾಗುವ ಹಲವು ಅನಾಹುತಗಳ ಬಗ್ಗೆ ಕಿಂಚಿತ್ತು ಯೋಚಿಸದ ಕೆಲವರು ಇಂತಹ ಕೆಲಸಕ್ಕೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಅನೇಕರನ್ನು ಕಾಡತೊಡಗಿದೆ. ಈ ಮೊದಲು ಸೋಂಕು ಪ್ರಕರಣದ ಪ್ರದೇಶ ಸುತ್ತಲೂ ಒಂದು ಕಿ.ಮೀ.ವ್ಯಾಪ್ತಿಯ ಪ್ರದೇಶ ಸೀಲ್‌ಡೌನ್, ಐದು ಕಿ.ಮೀ. ವ್ಯಾಪ್ತಿಯನ್ನು ಬಫರ್ ವಲಯ ಎಂದು ಪರಿಗಣಿಸಲಾಗುತ್ತಿತ್ತು. ಸೋಂಕು ಪ್ರದೇಶದ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗುತ್ತಿತ್ತು. ಅದಾದ ನಂತರ ಸರಕಾರದ ಸೂಚನೆಯಂತೆ ಜಿಲ್ಲಾಡಳಿತ ಸೀಲ್ ಡೌನ್ ಪ್ರದೇಶವನ್ನು ಸೋಂಕು ಪತ್ತೆಯ ಕೇವಲ 100 ಮೀಟರ್ ವ್ಯಾಪ್ತಿಗೆ ಇಳಿಸಿದ್ದರೂ, ಇದೀಗ ಅದಕ್ಕೂ ಕ್ಯಾತೆ ತೆಗೆಯುವ, ಸೀಲ್‌ಡೌನ್ ತೆರವಿಗೆ ಒತ್ತಾಯಿಸುವ ವಿಚಿತ್ರ ಮನೋಸ್ಥಿತಿಗೆ ಅನೇಕರು ಮುಂದಾಗಿರುವುದು ಅಚ್ಚರಿ ಮೂಡಿಸಿದೆ.
ಸೀಲ್‌ಡೌನ್ ತೆರವು ವಿಚಾರದಲ್ಲಿ ಒತ್ತಡ ಬಂದರೂ ಇದುವರೆಗೂ ಯಾವುದೇ ಜನಪ್ರತಿನಿಧಿಗಳು ಆಡಳಿತದ ಮೇಲೆ ಒತ್ತಡ ತಂದಿಲ್ಲದಿರುವುದು ಸಮಾಧಾನಕರ ವಿಚಾರ. ಜಿಲ್ಲಾಡಳಿತ ಮಾತ್ರ ಸೋಂಕು ಕಂಡು ಬಂದ ಪ್ರದೇಶದ 100 ಮೀಟರ್ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಮಾಡುತ್ತಿದೆ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕೋವಿಡ್ ಹೆಮ್ಮಾರಿ ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ಕಾರ್ಯಗಳಿಗೆ ಹಸ್ತಕ್ಷೇಪ, ಸೀಲ್ ಡೌನ್ ತೆರವಿಗೆ ಒತ್ತಡದಂತಹ ಕ್ರಮಕ್ಕೆ ಯಾರೇ ಮುಂದಾದರೂ ಅದು ಸರಿಯಾದ ಕ್ರಮವಾಗಲಾದರು. ಜನರ ಹಾಗೂ ಭವಿಷ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಕೈಗೊಂಡ ಕ್ರಮ ಸೂಕ್ತವಾಗಿದೆ ಎಂಬುದು ಹಲವರ ಅನಿಸಿಕೆ.
-ಬಸವರಾಜ ಹೂಗಾರ