ಮಣಿಪಾಲ: ಸಂತೆಕಟ್ಟೆ ವೆಹಿಕ್ಯುಲರ್ ಓವರ್‌ಪಾಸ್ ಕಾಮ ಗಾರಿ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ನಿರಂತರ ವಿಶೇಷ ನಿಗಾ ಇರಿಸಬೇಕು. ಅತಿಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಸ್ಥಳೀಯರು ಹಾಗೂ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಾಗೂ ಸಂಸ್ಥೆಯ ಎಂಜಿನಿಯರ್‌ಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.
“ಸಂತೆಕಟ್ಟೆ ರಾ. ಹೆದ್ದಾರಿ ಯಾವಗ ಮುಗಿಸ್ತೀರಿ’ ಎಂಬ ಶೀರ್ಷಿಕೆಯಡಿ “ಉದಯವಾಣಿ’ ಪ್ರಕಟಿಸುತ್ತಿರುವ ಓವರ್‌ಪಾಸ್ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆ ಕುರಿತ ಅಭಿಯಾನ ಸಂಬಂಧ ತುರ್ತು ಸ್ಪಂದನೆ ನೀಡಿದ ಸಂದರು ಸೋಮವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸುದೀರ್ಘ ಸಭೆ ನಡೆಸಿ ಪೂರ್ಣ ಮಾಹಿತಿ ಕಲೆ ಹಾಕಿದರು.
ಆರಂಭದಲ್ಲಿ ತಮ್ಮ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ “ಉದಯವಾಣಿ’ಯಲ್ಲಿ ಬಂದಿರುವ ಎಲ್ಲ ವರದಿಗಳನ್ನು ಮುಂದಿಟ್ಟು ಈ ಬಗ್ಗೆ ಸೂಕ್ತ ಉತ್ತರ ಒದಗಿಸಬೇಕು ಎಂದು ಸೂಚಿಸಿದರು.
ಅನಂತರ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ಹಾಲ್‌ನಲ್ಲಿ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಮತ್ತು ಅಪರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪುನಃ ಅಧಿಕಾರಿಗಳ ಸಭೆ ನಡೆಸಿ ರಸ್ತೆಗೆ ತುರ್ತು ತೇಪೆ ಹಚ್ಚುವ ಕಾರ್ಯ ಆಗಬೇಕು ಮತ್ತು ನೀವೇ ಖುದ್ದು ಇದರ ಮೇಲೆ ನಿಗಾ ಇರಿಸಬೇಕು ಎಂಬ ನಿರ್ದೇಶನ ನೀಡಿದ್ದಾರೆ.
ತಿಂಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಕೆಲವು ಸೂಚನೆ ನೀಡಿದ್ದು, ಅದು ಪಾಲನೆಯಾಗಿಲ್ಲ. ಈಗ ದೊಡ್ಡ ದೊಡ್ಡ ಹೊಂಡಗಳಾಗಿದ್ದು, ಸವಾರರು ನಿತ್ಯವೂ ಸಂಕಷ್ಟ ಎದುರಿಸುತ್ತಿದ್ದಾರೆ. ಪದೇಪದೆ ಮಳೆಯ ಸಬೂಬು ನೀಡಬಾರದು ಎಂದು ಅಧಿಕಾರಿಗಳಿಗೆ ಹಾಗೂ ಎಂಜಿನಿಯರ್ ಗಳಿಗೆ ಸಂಸದರು ಎಚ್ಚರಿಕೆ ನೀಡಿದರು.