ಬೆಳಗಾವಿ: ಮಲಪ್ರಭಾ ಜಲಾಶಯದ ಈ ಬಾರಿಯ ದಾಖಲೆ ನೀರು ಸಂಗ್ರಹ ಹಾಗೂ ಬಿಡುಗಡೆ ರಾಮದುರ್ಗ ಹಾಗೂ ಸವದತ್ತಿ ತಾಲೂಕುಗಳ ನದಿ ತೀರದ ಗ್ರಾಮಗಳಲ್ಲಿ ತಲ್ಲಣವನ್ನೇ ಸೃಷ್ಟಿಮಾಡಿತ್ತು. ಒಂದು ವಾರದ ಕಾಲ ನಿರೀಕ್ಷೆ ಮೀರಿ ಆತಂಕ ಉಂಟುಮಾಡಿದ್ದ ಜಲಾಶಯದ ಅಬ್ಬರ ಈಗ ಸಂಪೂರ್ಣ ಕಡಿಮೆಯಾಗಿದೆ. ನದಿಯ ಪ್ರವಾಹ ಸಹ ಗುರುತು ಸಿಗದಷ್ಟು ಇಳಿದಿದೆ. ಆದರೆ ನೆರೆಯಿಂದ ಉಂಟಾದ ಆತಂಕ ಹಾಗೂ ಹಾನಿಯಿಂದ ಸಾರ್ವಜನಿಕರು ಇನ್ನೂವರೆಗೆ ಚೇತರಿಸಿಕೊಂಡಿಲ್ಲ.
ಭೀಕರ ಪ್ರ ವಾಹದಿಂದ ಎಲ್ಲವನ್ನೂ ಕಳೆದುಕೊಂಡಿರುವ ನದಿ ತೀರದ ಜನರು ಹೊಸ ಬದುಕು ಕಟ್ಟಿಕೊಳ್ಳಲೇಬೇಕಾದ
ಅನಿವಾರ್ಯತೆಯಲ್ಲಿದ್ದಾರೆ. ಸರಕಾರದ ಪರಿಹಾರದ ಭರವಸೆ ಸ್ವಲ್ಪ ಧೈರ್ಯ ಮೂಡಿಸಿದೆಯಾದರೂ ಅದು ಯಾವಾಗ ಬರುತ್ತದೆ ಎಂಬ ವಿಶ್ವಾಸ ಇಲ್ಲ. ಇದೇ ಕಾರಣಕ್ಕೆ ಪ್ರವಾಹ ಸಂತ್ರಸ್ತರು ತಾವೇ ಸ್ವತಃ ಸಾಧ್ಯವಾದಷ್ಟು ಪರಿಹಾರ ಕ್ರಮಕ್ಕೆ ಮುಂದಾಗಿದ್ದಾರೆ.
ಇದಕ್ಕೆ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಜನರೂ ಒಂದು ನಿದರ್ಶನ. ಪ್ರಮುಖ ವ್ಯಾಪಾರಿ ಕೇಂದ್ರವಾದ ಮುನವಳ್ಳಿಗೆ ತಾಗಿಕೊಂಡೇ ಇರುವ ಸಣ್ಣ ಹಾಗೂ ಹಳೆಯ ಸೇತುವೆ ಬಳಿ ಸಂಪೂರ್ಣ ನೀರು ಕಡಿಮೆಯಾಗಿರುವ ಮಲಪ್ರಭಾ ನದಿಯಲ್ಲಿ ಜನರ ದಂಡೇ ಕಂಡುಬಂದಿದೆ. ಮಹಿಳೆ, ಮಕ್ಕಳು ಹಾಗೂ ವಯಸ್ಸಾದವರು ಪೈಪೋಟಿ ಮೇಲೆ ಹುಡುಕಾಟದಲ್ಲಿ ತೊಡಗಿದ್ದಾರೆ. ಆಲ್ಲಿ ದಾಟಿ ಹೊರಟ ಜನರಿಗೆ ಇಲ್ಲಿ ಏನು ನಡೆಯುತ್ತಿದೆ ಎಂಬ ಕುತೂಹಲ. ಪ್ರವಾಹದಿಂದ ಹರಿದು ಬಂದ ತಂತಮ್ಮ ಮನೆಯ ಸಾಮಗ್ರಿಗಳನ್ನು ಹುಡುಕುತ್ತಿರಬಹುದೆನ್ನುವುದೇ ಎಂಬುದೇ ಎಲ್ಲರ ಊಹೆ. ಆದರೆ ವಾಸ್ತವವೇ ಬೇರೆ. ನದಿ ಪ್ರವಾಹದಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದ ಸಂತ್ರಸ್ತರು ಬೆಳ್ಳಂ ಬೆಳಗ್ಗೆ ನದಿಯಲ್ಲಿ ಉಸುಕು ಸಂಗ್ರಹಿಸಲು ಮುಗಿಬಿದ್ದಿದ್ದರು. ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಸಣ್ಣ ಸಣ್ಣ ಚೀಲ, ಪಾತ್ರೆಗಳಲ್ಲಿ ಉಸುಕು ತುಂಬಿಕೊಂಡು ಹೊರಟಿದ್ದು ಪ್ರವಾಹದ ಕರಾಳ ಮುಖದ ಪರಿಚಯ ಮಾಡಿತು.
ನದಿಯ ಮಧ್ಯ ಭಾಗದಲ್ಲಿ ರಾಶಿರಾಶಿಯಾಗಿ ಬಿದ್ದಿದ್ದ ತ್ಯಾಜ್ಯವಸ್ತುಗಳನ್ನು ತುಳಿದುಕೊಂಡು ಕಲ್ಲು ಬಂಡೆಗಳನ್ನು ದಾಟಿ ತಲೆ ಮೇಲೆ ಉಸುಕಿನ ಚೀಲಗಳನ್ನು ಹೊತ್ತುಕೊಂಡಿದ್ದ ಮುನವಳ್ಳಿಯ ಜನರು ಸಾಲು ಸಾಲಾಗಿ ಬರುತ್ತಿರುವ ದೃಶ್ಯ ಪ್ರವಾಹ ಸಂಕಷ್ಟದ ಹೊಸ ಮುಖವನ್ನು ತೆರೆದಿಟ್ಟಿತು.
ಏನು ಮಾಡುವುದು ಸ್ವಾಮಿ. ನಾವು ಎಂದೂ ನೋಡಿರದೇ ಇದ್ದ ಮಲಪ್ರಭಾ ನದಿಯ ಪ್ರವಾಹ ನಮ್ಮದೆಲ್ಲವನ್ನೂ ಕಸಿದುಕೊಂಡಿದೆ. ಮನೆಗಳು ಬಿದ್ದು ಬೀದಿಗೆ ಬಿದ್ದಿದ್ದೇವೆ. ತಕ್ಷಣ ಮನೆ ಕಟ್ಟಿಕೊಳ್ಳಬೇಕು ಎಂದರೆ ಉಸುಕು ಸಿಗುವುದಿಲ್ಲ. ಸಿಕ್ಕರೂ ಅದನ್ನು ಖರೀದಿ ಮಾಡುವ ಶಕ್ತಿ ನಮಗೆ ಇಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ನದಿಯಲ್ಲಿ ಸಿಕ್ಕಷ್ಟು ಉಸುಕು ತೆಗೆದುಕೊಂಡು ಹೊರಟಿದ್ದೇವೆ. ಇದರಿಂದ ಎಷ್ಟು ಕೆಲಸ ಆಗುತ್ತದೆಯೋ ಅಗಲಿ ಎಂದು ನೋವಿನಿಂದಲೇ ಹೇಳುತ್ತಾರೆ ಸಲೀಮ ಸಯ್ಯದ್.
ಪ್ರವಾಹದಿಂದ ನಮ್ಮ ಮನೆ ಭಾಗಶಃ ಬಿದ್ದಿದೆ. ಮಳೆ ಹಾಗೂ ನದಿ ಪ್ರವಾಹದಿಂದ ಹಿಂದೆಂದೂ ಈ ರೀತಿ ಹಾನಿ ಆಗಿರಲೇ ಇಲ್ಲ. ನದಿಗೆ ನೀರು ಬಂದರೂ ಅಂತಹ ಅಪಾಯ ಉಂಟಾಗಿರಲಿಲ್ಲ. ಈಗ ಮನೆ ಬಿದ್ದಿದೆ. ಮತ್ತೆ ಕಟ್ಟಿಕೊಳ್ಳಲು ಸ್ವಲ್ಪ ಉಸುಕು ಬೇಕು ಮಾರ್ಕೆಟ್‌ನಲ್ಲಿ ಉಸುಕು ಸಿಗುವುದು ದುಸ್ತರ. ಅದಕ್ಕೆ ನೂರೆಂಟು ಕಾಟ. ಮೇಲಾಗಿ ಬಹಳ ದುಬಾರಿ. ಈಗ ನದಿಯಲ್ಲಿ ಸ್ವಲ್ಪ ಹೊಸ ಉಸುಕು ಬಂದಿರುತ್ತದೆ. ಅದನ್ನೇ ಸಿಕ್ಕಷ್ಟು ತೆಗೆದುಕೊಂಡಿದ್ದೇವೆ. ಬಡವರಿಗೆ ಈಗ ನದಿಯಲ್ಲಿ ಸಿಕ್ಕ ಅಲ್ಪಸ್ವಲ್ಪ ಉಸುಕೇ ಆಧಾರ ಎಂಬುದು ಮುನವಳ್ಳಿಯ ಜೀತು ಹುದ್ದಾರ ಹೇಳಿಕೆ.
•ಕೇಶವ ಆದಿ