Advertisement
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ಹೊಟೇಲ್ ತಾಜ್ ವಿವಾಂತ್‌ದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ಶಾಸಕರು ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.
Related Articles
Advertisement
ಅತೃಪ್ತರನ್ನು ಅನರ್ಹಗೊಳಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ನಮ್ಮನ್ನೂ ಏನೂ ಕೇಳಬೇಡಿ ಎಂದು ಕೆಲವು ಶಾಸಕರು ನಾಯಕರಿಗೆ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆಂದು ತಿಳಿದು ಬಂದಿದೆ. ಆದರೆ, ಶಾಸಕರ ಅಸಮಾಧಾನಕ್ಕೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತ್ರ ಸರ್ಕಾರ ಉಳಿಸಿಕೊಳ್ಳುವ ಭರವಸೆ ನೀಡಿದ್ದು, ಅಲ್ಲಿಯವರೆಗೂ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸರ್ಕಾರ ಉಳಿಸಲು ಎಲ್ಲರೂ ಪ್ರಯತ್ನ ಮಾಡುತ್ತಿದ್ದೇವೆ. ಸರ್ಕಾರ ಉಳಿಯುತ್ತದೆಯೋ ಉರುಳುತ್ತದೆಯೋ ಗೊತ್ತಿಲ್ಲ. ನೀವು ಅದರ ಬಗ್ಗೆ ಚಿಂತೆ ಬಿಟ್ಟು ಬಿಡಿ, ಈಗ ರಾಜೀನಾಮೆ ಕೊಟ್ಟು ಹೋದವರ ಬಗ್ಗೆ ಚಿಂತೆ ಮಾಡಬೇಡಿ, ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡಿ, ಮುಂದೆ ಉತ್ತಮ ಅವಕಾಶಗಳು ದೊರೆಯಲಿವೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಎಸ್‌ಬಿಎಂ ಬಗ್ಗೆ ಬೇಸರ: ಇದೇ ವೇಳೆ, ಏಕಾಏಕಿ ರಾಜೀನಾಮೆ ಸಲ್ಲಿಸಿ ಮುಂಬೈಗೆ ಹಾರಿರುವ ಬೆಂಗಳೂರಿನ ಶಾಸಕರಾದ ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜ್ ಹಾಗೂ ಮುನಿರತ್ನ ಬಗ್ಗೆ ಸಿದ್ದರಾಮಯ್ಯ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಅವರು ಕೇಳಿದ್ದೆಲ್ಲವನ್ನೂ ಮಾಡಿಕೊಟ್ಟಿದ್ದೇನೆ. ಅವರು ತರುವ ಫೈಲ್‌ಗಳಲ್ಲಿ ಏನಿದೆ ಎಂದೂ ನೋಡದೆ ಸಹಿ ಮಾಡಿಕೊಟ್ಟಿದ್ದೇನೆ. ಅಷ್ಟೊಂದು ಕೆಲಸ ಮಾಡಿಸಿಕೊಂಡು ಏಕಾಏಕಿ ಈ ರೀತಿ ಪಕ್ಷ ಬಿಟ್ಟು ಹೋದರೆ, ಯಾರನ್ನು ನಂಬುವುದು ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಮಧ್ಯಂತರ ಚುನಾವಣೆ ಭಯ ಬೇಡ: ಸರ್ಕಾರ ರಕ್ಷಣೆಯ ಕಸರತ್ತು ಮುಂದುವರಿಸಿರುವ ಕಾಂಗ್ರೆಸ್ ನಾಯಕರು ಶಾಸಕರಿಗೆ ಮಧ್ಯಂತರ ಚುನಾವಣೆಯ ಭಯ ಬೇಡ ಎಂಬ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ, ಮೈತ್ರಿ ಸರ್ಕಾರ ಪತನವಾದರೂ ಬಿಜೆಪಿಗೆ ಅಧಿಕಾರ ನಡೆಸಲು ಅವಕಾಶ ಕೊಟ್ಟು ಪ್ರತಿಪಕ್ಷದಲ್ಲಿ ಕೂಡಲು ಮಾನಸಿಕವಾಗಿ ಸಿದ್ದರಾಗಿರುವುದನ್ನು ಪರೋಕ್ಷವಾಗಿ ಸೂಚನೆಯನ್ನೂ ನೀಡಿದ್ದಾರೆ ಎನ್ನಲಾಗಿದೆ. ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡುವಂತೆ ಸೂಚನೆ ನೀಡಿರುವ ಸಿದ್ದರಾಮಯ್ಯ, ಬೇರೆ ಶಾಸಕರನ್ನು ನೋಡಿ ಯಾರೂ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಯಾರನ್ನೂ ನಂಬದಂತಹ ಸ್ಥಿತಿ ನಿರ್ಮಾಣ: ತಾವು ಅತ್ಯಂತ ನಂಬಿಕೆ ಇಟ್ಟಿದ್ದ ಬೆಂಗಳೂರಿನ ಮೂವರು ಶಾಸಕರು ತಮಗೆ ಕೈ ಕೊಟ್ಟಿರುವ ಬಗ್ಗೆ ಶಾಸಕಾಂಗ ಸಭೆಯಲ್ಲಿ ಬೇಸರ ವ್ಯಕ್ತಪಡಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯ, ನನ್ನ ಪಕ್ಕದಲ್ಲಿ ಕುಳಿತಿರುವ ಪರಮೇಶ್ವರ್ ನಾಳೆ ಬಿಜೆಪಿಗೆ ಹೋದರೂ ಆಶ್ಚರ್ಯ ಪಡುವಂತಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರ ಮಾತಿನಿಂದ ದಂಗಾಗಿ ತಕ್ಷಣ ಪರಮೇಶ್ವರ್ ಅಯ್ಯೋ ಸರ್ ಎಂದು ಎದ್ದು ನಿಂತರು ಎಂದು ತಿಳಿದು ಬಂದಿದೆ. ಆದರೂ, ಸಿದ್ದರಾಮಯ್ಯ ತಮ್ಮ ಮಾತು ಮುಂದುವರಿಸಿ, ಈಗಿನ ಪರಿಸ್ಥಿತಿ ಹಾಗೆ ಆಗಿದೆ. ಯಾರನ್ನೂ ನಂಬದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.