ಕೆ.ಆರ್.ನಗರ: ರೈತರು ಪ್ರಸಕ್ತ ಸಾಲಿನಲ್ಲಿ ಬೆಳೆದ ಭತ್ತಕ್ಕೆ ಕ್ವಿಂಟಲ್‌ಗೆ 2,488 ರೂ. ನೀಡಬೇಕು ಹಾಗೂ ರೋಗದಿಂದ ಬೆಳೆ ಹಾಳಾಗಿರುವುದಕ್ಕೆ ಎಕರೆಗೆ 25 ಸಾವಿರ ರೂ. ಪರಿಹಾರ ವಿತರಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಯ್‌ಗೌಡ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ರೈತರು ಮುಖಂಡರು ಮತ್ತು ಕಬ್ಬುಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಭತ್ತ ಖರೀದಿ ಕೇಂದ್ರವನ್ನು ಅತೀ ಶೀಘ್ರವಾಗಿ ತೆರೆಯಲು ಕ್ರಮ ಕೈಗೊಳ್ಳಬೇಕು. 2019- 20ನೇ ಸಾಲಿನ ಭತ್ತ ಖರೀದಿಸಿರುವುದಕ್ಕೆ ಮುಖ್ಯಮಂತ್ರಿಯವರು 200 ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಕೂಡಲೇ ರೈತರಿಗೆ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಹೊಸ ಅಗ್ರಹಾರ ಗ್ರಾಮದ ಕೆರೆಯ ಸುಮಾರು ಐದು ಎಕರೆಗೂ ಅಧಿಕ ಒತ್ತುವರಿ ಜಾಗವನ್ನು ತೆರವುಗೊಳಿಸಲಾಗಿದ್ದು, ಆ ಜಾಗವನ್ನು ತೋಟಗಾರಿಕೆ ಇಲಾಖೆಗೆ ವಹಿಸಿ ಅದರಲ್ಲಿ ತೋಟಗಾರಿಕೆ ಬೆಳೆ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಇದರಿಂದ ಸುತ್ತ ಮುತ್ತಲ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆಎಂದು ತಿಳಿಸಿದರು.
ಕಾರ್ಖಾನೆ ಆರಂಭಿಸಿ: ತಾಲೂಕಿನ ರೈತರ ಜೀವನಾಡಿಯಾಗಿರುವ ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಅಡ್ಡಿಯಾಗಿರುವ ಕಾನೂನು ತೊಡಕುಗಳನ್ನು ನಿವಾರಿಸಿ ಕಾರ್ಖಾನೆ ಪ್ರಾರಂಭಿಸಬೇಕು. 2017 ರಿಂದ 2020ರವರೆಗೆ ತಾಲೂಕಿನಲ್ಲಿ ಕೆರೆಗಳ ಹೂಳು ತೆಗೆದಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.
ರೈತರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಮುಂದಾಗಬೇಕು. ಇದರ ಬಗ್ಗೆಶೀಘ್ರದಲ್ಲಿ ಸ್ಪಂದಿಸದಿದ್ದರೆ ರೈತ ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಮುಂದಿನ ಹೋರಾಟದ ಬಗ್ಗೆ ಶೀಘ್ರದಲ್ಲಿ ರೈತ ಮುಖಂಡರ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್. ವಿಶ್ವಾಸ್, ತಾಲೂಕು ಅಧ್ಯಕ್ಷ ಕೆ.ಪಿ.ಶಿವರಾಜು, ಪ್ರಧಾನ ಕಾರ್ಯದರ್ಶಿ ರುದ್ರೇಶ್, ಸಂಘಟನಾ ಕಾರ್ಯದರ್ಶಿ ಜಿತೇಂದ್ರ, ಪದಾಧಿಕಾರಿಗಳಾದ ಡಿ.ಸಿ.ಸುನಿಲ್, ಹೇಮಂತ್, ಹರೀಶ್, ಪ್ರಶಾಂತ್ ಮತ್ತಿತರರು ಹಾಜರಿದ್ದರು.