ಹೊಸಪೇಟೆ: ಮಹರ್ಷಿ ವಾಲ್ಮೀಕಿ ಹಾಗೂ ವ್ಯಾಸರನ್ನು ಕೀಳು ಜಾತಿ ಅಸ್ಪೃಶ್ಯ ವ್ಯಕ್ತಿಗಳೆಂದು ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಬಸವರಾಜ ಯತ್ನಾಳ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವ ಮೂಲಕ ಅವರ ಶಾಸಕತ್ವವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ತಾಲೂಕು ಸಮಿತಿ ವತಿಯಿಂದ ನಗರದ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಆವರಣದಲ್ಲಿ ಜಮಾವಣೆಗೊಂಡು, ಪ್ರತಿಭಟನೆಕಾರರು, ಮಹರ್ಷಿ ವಾಲ್ಮೀಕಿ ಹಾಗೂ ವ್ಯಾಸರನ್ನು ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಬಸವರಾಜ ಯತ್ನಾಳ್ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವ ಅವರ ಶಾಸಕತ್ವ ರದ್ದು ಮಾಡಬೇಕು ಎಂದು ಒತ್ತಾಯಿಸಿದರು. ಯತ್ನಾಳ್ ಅವರು, ವಿಧಾನ ಸೌಧದ ಅಧಿವೇಶನದಲ್ಲಿ ಸಂವಿಧಾನ ಚರ್ಚೆ ಸಂದರ್ಭದಲ್ಲಿ ಬಾಯಿಗೆ ಬಂದಂಗೆ ಮಾತನಾಡುವ ಮೂಲಕ ಮಹನೀಯರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮಾಯಣ ಮತ್ತು ಮಹಾಭಾರತ ಶ್ರೇಷ್ಠ ಕೃತಿಗಳನ್ನು ವಾಲ್ಮೀಕಿ ಮತ್ತು ವ್ಯಾಸರು ನೀಡಿದ್ದಾರೆ. ಯತ್ನಾಳ್ ಅವರು ಮಾತನಾಡಿರುವುದನ್ನು ವಿಧಾನ ಸೌದದ ಕಾರ್ಯಕಲಾಪ ದಾಖಲೆಗಳಿಂದ ತೆಗೆದುಹಾಕಬೇಕು. ಇಲ್ಲದಿದ್ದರೇ ವಾಲ್ಮೀಕಿ ಮತ್ತು ವ್ಯಾಸರಿಗೆ ದ್ರೋಹ ಬಗೆದಂತಾಗುತ್ತದೆ. ಚುನಾವಣೆಯ ಸಂದರ್ಭದಲ್ಲಿ ವಾಲ್ಮೀಕಿ ಹಾಗೂ ವ್ಯಾಸರ ಹೆಸರು ಹೇಳಿಕೊಂಡು ಗೆದ್ದು ಬಂದಿದ್ದಾರೆ. ಆದರೆ, ಈ ರೀತಿಯಾಗಿ ಮಾತಡುವ ಮೂಲಕ ಮಹನೀಯರ ಬಗ್ಗೆ ಅಗೌರವ ತೋರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಹಾಗೂ ವಿಧಾನ ಸಭಾ ಅಧ್ಯಕ್ಷರು ಕೂಡಲೇ ಬಸವರಾಜ ಯತ್ನಾಳ್ ವಿರುದ್ಧ ಎಸ್.ಸಿ ಮತ್ತು ಎಸ್ಟಿ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕು. ಅಲ್ಲದೇ, ಶಾಸಕ ಸ್ಥಾನದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು. ಬಳಿಕ ತಹಶೀಲ್ದಾರ್ ಎಚ್.ವಿಶ್ವನಾಥ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಜಿಲ್ಲಾ ಸಂಚಾಲಕ ಮರಡಿ ಜಂಬಯ್ಯ ನಾಯಕ, ಮುಖಂಡರಾದ ಎಸ್.ಸತ್ಯಮೂರ್ತಿ, ಬಿ.ತಾಯಪ್ಪ ನಾಯಕ, ಆರ್.ಭಾಸ್ಕರರೆಡ್ಡಿ, ಬಿ.ವೆಂಕಟೇಶ, ಪೀರಸಾಬ, ದುರುಗಪ್ಪ, ಬಿ.ಸೂರ್ಯಕುಮಾರ, ಇರ್ಫಾನ್ ಇನ್ನಿತರರಿದ್ದರು.