Advertisement

ನಗರ ನಕ್ಸಲ್‌ ಚಟುವಟಿಕೆ ಅತ್ಯಂತ ಅಪಾಯಕಾರಿ

04:10 PM Oct 15, 2018 | Team Udayavani |

ದಾವಣಗೆರೆ: ಅರ್ಬನ್‌ ಮಾವೋವಾದ ಅರ್ಥಾತ್‌ ನಗರ ನಕ್ಸಲ್‌ ಚಟುವಟಿಕೆ ಕಾಡು ನಕ್ಸಲ್‌ ಹೋರಾಟಕ್ಕಿಂತಲೂ ಅತ್ಯಂತ ಅಪಾಯಕಾರಿ ಎಂದು ಪ್ರಜ್ಞಾ ಪ್ರವಾಹ ಕ್ಷೇತ್ರೀಯ ಸಂಯೋಜಕ ರಘುನಂದನ್‌ ಎಚ್ಚರಿಸಿದ್ದಾರೆ.

Advertisement

ಭಾನುವಾರ ಸಂಜೆ ವರ್ತಮಾನ(ಫೋರಂ ಫಾರಂ ಇಂಟಲೆಕುcಯಲ್‌ ಡಿಬೆಟ್ಸ್‌) ಹೋಟೆಲ್‌ ಶಾಂತಿ ಪಾರ್ಕ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಅರ್ಬನ್‌ ಮಾವೋವಾದ-ಚಟುವಟಿಕೆಯ ಸ್ವರೂಪ- ಒಂದು ವಿಮರ್ಶೆ… ಕಾರ್ಯಕ್ರಮದಲ್ಲಿ ವಿಷಯ ಪ್ರಸ್ತುತಪಡಿಸಿದ ಅವರು, ಕಾಡಲ್ಲಿದ್ದುಕೊಂಡು ನಕ್ಸಲ್‌ ಚಟುವಟಿಕೆಯನ್ನು ನಡೆಸುತ್ತಿರುವರನ್ನು ಯಾರು ಬೇಕಾದರೂ ಅತೀ ಸುಲಭವಾಗಿ ಕಂಡು ಹಿಡಿಯಬಹುದು. ಆದರೆ, ನಮ್ಮ ನಡುವೆ ಇರುವಂತಹ ನಗರ ನಕ್ಸಲ್‌ರನ್ನು ಕಂಡು ಹಿಡಿಯುವುದು ಬಹಳ ಕಠಿಣ. ಅರ್ಬನ್‌ ಮಾವೋವಾದಿಗಳು ಎಲ್ಲಾ ಕಾಲಕ್ಕೂ ತೀರಾ ಅಪಾಯಕಾರಿ ಎಂದರು.

ಕಾಡಿನಲ್ಲಿರುವ ನಕ್ಸಲ್‌ರು ಎಂದರೆ ತಲೆಗೆ ಕೆಂಪು ಪಟ್ಟಿ ಕಟ್ಟಿಕೊಂಡು, ಬಂದೂಕು ಹಿಡಿದುಕೊಂಡು ಹೋರಾಟ ಮಾಡುವರು ಎಂಬುದು ಎಲ್ಲರಿಗೂ ಗೊತ್ತಿರುವ ಕಾರಣಕ್ಕೆ ಸುಲಭವಾಗಿ ಕಂಡು ಹಿಡಿಯ ಬಹುದು. ಆದರೆ, ನಾಡಿನಲ್ಲೇ ಇದ್ದುಕೊಂಡು ಅತಿ ಸುಂದರವಾಗಿ, ಚೆನ್ನಾಗಿ ಇಂಗ್ಲಿಷ್‌ ಮಾತನಾಡುತ್ತಾ, ಅನೇಕ ಪ್ರಶಸ್ತಿ ಗಳಿಸಿಕೊಂಡು, ಅಕಾಡೆಮಿಕ್‌ ಮತ್ತು ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಒಳ್ಳೆಯ ಸ್ಥಾನಮಾನ ಪಡೆದುಕೊಳ್ಳುತ್ತಾ ಕಾಡಿನ ನಕ್ಸಲ್‌ರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡುವ ನಗರ ನಕ್ಸಲ್‌ರನ್ನು ಕಂಡು ಹಿಡಿಯುವುದು ಕಷ್ಟ ಎಂದು ತಿಳಿಸಿದರು. 

ಕಾಡಿನ ನಕ್ಸಲ್‌ರು ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಗಳ ವಿರುದ್ಧ ಹೋರಾಟ ಮಾಡುವ ಸಾಮಾಜಿಕ ಕಾರ್ಯಕರ್ತರು ಎಂದೇ ಬಿಂಬಿಸಲಾಗುತ್ತದೆ. ಅಂತಹ ಸಾಮಾಜಿಕ ಚಟುವಟಿಕೆ ಕಾರ್ಯಕರ್ತರು 2010 ರಿಂದ ಈಚೆಗೆ ಸಾವಿರಾರು ಜನರನ್ನು ಅತ್ಯಂತ ಬರ್ಬರವಾಗಿ ಕೊಂದು ಹಾಕಿದ್ದಾರೆ. ಅವರೇ 20 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಹತರಾಗಿದ್ದಾರೆ. ಹಿಂದೆ ದೇಶದ 106 ಜಿಲ್ಲೆಯಲ್ಲಿ ನಕ್ಸಲ್‌ ಪ್ರಭಾವ ಇತ್ತು. ಈಗ 15ಕ್ಕೆ ಇಳಿದಿದೆ.

ಸಾಮಾಜಿಕ ವ್ಯವಸ್ಥೆಯ ಸುಧಾರಣೆಗಾಗಿ ಹೋರಾಟ ಮಾಡುವಂತಹವರು ಶಾಲಾ, ಕಾಲೇಜು, ಆಸ್ಪತ್ರೆಗಳ ಮೇಲೆ ದಾಳಿ ಮಾಡುವುದಾದರೂ ಏಕೆ ಎಂಬುದನ್ನು ಅವರನ್ನು ಬಲವಾಗಿ ಸಮರ್ಥಿಸಿಕೊಳ್ಳುವಂತಹವರು ಉತ್ತರಿಸಬೇಕು ಎಂದು ಒತ್ತಾಯಿಸಿದರು. 

Advertisement

ಕಾಡಿನ ನಕ್ಸಲ್‌ರ ಅಟ್ಟಹಾಸಕ್ಕೆ ದೇಶದ ಪ್ರಮುಖ ರಾಜಕೀಯ ಮುಖಂಡರು ಬಲಿಯಾದ ನಂತರ ನಕ್ಸಲ್‌ ಚಟುವಟಿಕೆ ದಮನ ಕಾರ್ಯಕ್ಕೆ ಒತ್ತು ನೀಡಲಾಯಿತು. ಅದರ ಪರಿಣಾಮ ಅನೇಕ ಕಡೆ ನಕ್ಸಲ್‌ ಚಟುವಟಿಕೆಯೇ ಇಲ್ಲದಂತಾಗಿದೆ. ಯಾವಾಗ ಕಾಡಿನಲ್ಲಿ ಪ್ರಭಾವ ಕುಗ್ಗತೊಡಗಿತೋ ಶರಣಾಗತಿಯ ಹೆಸರಲ್ಲಿ ಕಾಡಿನಿಂದ ನಾಡಿಗೆ ಬಂಂದತಹ ಕೆಲವರು ಈಗ ನಗರ ನಕ್ಸಲ್‌ ಚಟುವಟಿಕೆಯಲ್ಲಿ ಅತ್ಯಂತ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದರು. ಕೆಲವಾರು ಜನ, ಪ್ರಗತಿಪರ ಸಂಘಟನೆಯಲ್ಲಿ ಸಕ್ರಿಯವಾಗಿರುವಂತರನ್ನು ಆಯ್ಕೆ ಮಾಡಿಕೊಂಡು ಆಕ್ರೋಶ ನಿರ್ಮಾಣ ಮಾಡುವ ಮೂಲಕ ನಿಧಾನವಾಗಿ ಶಸ್ತ್ರಾಸ್ತ ಹಿಡಿದು ಹೋರಾಟ ಮಾಡುವುದೇ ಸಮಸ್ಯೆಗೆ ಪರಿಹಾರ ಎನ್ನುವಂತೆ ತಯಾರು ಮಾಡುತ್ತಾರೆ. ಕಾಡಿನ ನಕ್ಸಲ್‌ ಚಟುವಟಿಕೆಗೆ ಪ್ರೇರಣೆ ನೀಡುತ್ತಾರೆ. ಅಂತಹ ನಗರ ನಕ್ಸಲ್‌ರಿಗೆ ಕರ್ನಾಟಕ ಒಂದು ರೀತಿಯ ಅಡಗುತಾಣ, ತರಬೇತಿ ಕೇಂದ್ರದಂತಾಗುವ ಅಪಾಯ ಕಂಡು ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ವರ್ತಮಾನ ಸದಸ್ಯ ನವೀನ್‌ ಗಡ್ಡದಗುಳಿ ಇದ್ದರು. ಕರುಣಾ ಕನ್ನವರ ಪ್ರಾರ್ಥಿಸಿದರು. ಎಂ.ಸಿ. ಗಂಗಾಧರ್‌ ಸ್ವಾಗತಿಸಿದರು. ಮೇಘರಾಜ್‌ ನಿರೂಪಿಸಿದರು

ನಗರ ನಕ್ಸಲ್‌ರು ಕಾಡಿನ ನಕ್ಸಲ್‌ ರ ನೇಮಕ ಮಾಡುವರು. ಹಣ, ಕಾನೂನು ಒಳಗೊಂಡಂತೆ ಎಲ್ಲಾ ರೀತಿಯ ನೆರವು ನೀಡುತ್ತಾರೆ. ಕಾಡಿನಲ್ಲಿನ ನಕ್ಸಲರಿಗೆ ಕಿಂಚಿತ್ತೂ ಸಮಸ್ಯೆಯಾದರೂ ಅವರ ಪರ ಹೇಳಿಕೆ ನೀಡುತ್ತಾ ಒಂದು ವಿಚಿತ್ರ ಸನ್ನಿವೇಶ ಸೃಷ್ಟಿ ಮಾಡುತ್ತಾರೆ. ಈಚೆಗೆ ಶರಣಾಗತಿ…
ವಿಚಾರವಾಗಿ ಕೆಲಸ ಮಾಡುವ ಕೆಲವರು ಹಣ ಸಂಪಾದನೆಯನ್ನೂ ಮಾಡುತ್ತಿದ್ದಾರೆ. ಯಾವುದೇ ಸರ್ಕಾರ ಬಂದರೂ ತಮ್ಮ ಬೇಳೆ ಬೇಯಿಸಿಕೊಳ್ಳುವ ಜೊತೆಗೆ ಅಕಾಡೆಮಿ ಮತ್ತು ಪ್ರಶಸ್ತಿ, ಸ್ಥಾನಮಾನ ಪಡೆದುಕೊಳ್ಳುತ್ತಲೇ ಇರುತ್ತಾರೆ.  ಒಟ್ಟಾರೆಯಾಗಿ ಆಧುನಿಕ ಕಾಲದ ಸುಂದರ ಪೂತನಿ…ಯಂತಿರುವ ನಗರ ನಕ್ಸಲ್‌ರು ಅತೀ ಅಪಾಯಕಾರಿ. 
 ರಘುನಂದನ್‌,ಪ್ರಜ್ಞಾ ಪ್ರವಾಹ ಕ್ಷೇತ್ರೀಯ ಸಂಯೋಜಕ

Advertisement

Udayavani is now on Telegram. Click here to join our channel and stay updated with the latest news.

Next