Advertisement

ಮುಂದುವರಿದ ಮೀಸಲಾತಿ ಹಗ್ಗಜಗ್ಗಾಟ

02:41 PM Aug 12, 2021 | Team Udayavani |

ಬೆಂಗಳೂರು: ಹುಬ್ಬಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ವೇಳಾಪಟ್ಟಿ
ಪ್ರಕಟಿಸಿದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗಕ್ಕೆ 2021 ಮುಗಿಯುವುದರೊಳಗೆ ರಾಜ್ಯದ 51 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸವಾಲು ಎದುರಾಗಿದೆ.

Advertisement

ಈ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ನಡುವೆ “ಮೀಸಲಾತಿ’ ಹಗ್ಗಜಗ್ಗಾಟ ನಡೆಯುತ್ತಿದೆ.
2016ರಲ್ಲಿ ಚುನಾವಣೆ ನಡೆದ 51 ನಗರ ಸ್ಥಳೀಯ ಸಂಸ್ಥೆಗಳಿಗೆ ಈ ವರ್ಷ ಚುನಾವಣೆ ನಡೆಸಬೇಕಿದ್ದು, ಅದಕ್ಕಾಗಿ ಮೀಸಲಾತಿ ಪಟ್ಟಿ ಕೊಡಿ ಎಂದು ಚುನಾವಣಾ ಆಯೋಗ ಸರ್ಕಾರಕ್ಕೆ ಪರಿ ಪರಿಯಾಗಿ ಬೇಡಿಕೊಳ್ಳುತ್ತಿದೆ. ಆದರೆ, ಸರ್ಕಾರಮಾತ್ರ “ನಾಳೆಬಾ’ಧೋರಣೆ
ಅನುಸರಿಸುತ್ತಿದೆ.

ಪ್ರವಾಹ, ಕೋವಿಡ್‌ 3ನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ 2018ರಲ್ಲಿ ಅವಧಿ ಮುಗಿದು ನನೆಗುದಿಗೆ ಬಿದ್ದಿದ್ದ 13 ಹಾಗೂ
2016ರಲ್ಲಿ ಚುನಾವಣೆ ನಡೆದು ಈ ವರ್ಷ ಅವಧಿ ಮುಗಿಯಲಿರುವ51 ನಗರ ಸ್ಥಳೀಯ ಸಂಸ್ಥೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸ
ಬೇಕು ಎಂಬಆಲೋಚನೆಯಲ್ಲಿ ಚುನಾವಣಾ ಆಯೋಗ ಇತ್ತು. ಹೇಗೋ ಮೂರು ಮಹಾನಗರ ಪಾಲಿಕೆಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಆದರೆ, ಸರ್ಕಾರದ “ಅಸಹಕಾರ’ ಧೋರಣೆಯಿಂದ 51 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಗದಿಪಡಿಸಲು ಕಾದು ನೋಡುವ ಅನಿವಾರ್ಯತೆ ಚುನಾವಣಾ ಆಯೋಗಕ್ಕೆ ಎದುರಾಗಿದೆ.

ಇದನ್ನೂ ಓದಿ:ಮೃತ ಫೈಟರ್ ವಿವೇಕ್‌ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದ ನಿರ್ಮಾಪಕರ ಪತ್ನಿ

ಚುನಾವಣೆ ನಡೆಸಲು ಆಯೋಗ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ, ಸರ್ಕಾರ ಮೀಸಲಾತಿ ಅಂತಿಮಗೊಳಿಸದ ಕಾರಣ ಆಯೋಗ ತೀರ್ಮಾನಕ್ಕೆ ಬರಲು ಆಗುತ್ತಿಲ್ಲ ಎನ್ನಲಾಗಿದೆ.ರಾಜ್ಯದ 1 ನಗರಸಭೆ, 16 ಪುರಸಭೆ ಹಾಗೂ 34 ಪಟ್ಟಣ ಪಂಚಾಯಿತಿಗಳಿಗೆ 2021ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ. ಈ ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಸರ್ಕಾರ ಕೊಟ್ಟರೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಬಹುದು. ಆದರೆ,51ರ ಪೈಕಿ ಈವರೆಗೆ ಸರ್ಕಾರ ಕೇವಲ 10 ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿಯನ್ನು ಆಯೋಗಕ್ಕೆ ಕೊಟ್ಟಿದೆ. ಈ ವರ್ಷಾಂತ್ಯಕ್ಕೆ ತಾ.ಪಂ., ಜಿ.ಪಂ. ಚುನಾವಣೆಗಳು ಎದುರಾಗಬಹುದು.

Advertisement

ಹಾಗಾಗಿ, ಆದಷ್ಟು ಬೇಗ ಈ 51 ನಗರ ಸ್ಥಳೀಯ ಸಂಸ್ಥೆಗಳಿಗೆಚುನಾವಣೆ ನಡೆಸಬೇಕು ಎಂದು ಆಯೋಗ ಆಲೋಚನೆ ಮಾಡಿತ್ತು. ಆದರೆ, ಸರ್ಕಾರ ಈವರೆಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಕೊಡದೇ ಇದ್ದುದರಿಂದ ದಿನಾಂಕ ನಿಗದಿಪಡಿಸಲು ಸಾಧ್ಯವಾಗುತ್ತಿಲ್ಲ. ಈ ವಿಚಾರವಾಗಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರಿಗೆ ನಿರಂತರ ಮನವಿ ಮಾಡಿಕೊಳ್ಳಲಾಗುತ್ತಿದೆ ಎಂದು ಆಯೋಗದ
ಅಧಿಕಾರಿಗಳು ತಿಳಿಸಿದ್ದಾರೆ.

2021ನೇ ಸಾಲಿನಲ್ಲಿ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳು
ನಗರಸಭೆ: ಹೆಬ್ಬಗೋಡಿ. ಪುರಸಭೆ: ಜಿಗಣಿ, ಚಂದಾಪುರ, ಬಿಡದಿ, ಮಲೆಬೆನ್ನೂರು, ಕಾಪು, ಹಾರೋಗೇರಿ, ಮುಗಳಖೋಡ, ಮುನವಳ್ಳಿ, ಉಗಾರಖುರ್ದ, ಕಾರಟಗಿ, ಕುರೆಕುಪ್ಪ, ಹಗರಿಬೊಮ್ಮನಹಳ್ಳಿ,ಕುರಗೋಡು, ಮಸ್ಕಿ,ಕೆಂಭಾವಿ,ಕಕ್ಕೆರಾ. ಪಟ್ಟಣ ಪಂಚಾಯಿತಿ: ನಾಯಕನಹಟ್ಟಿ, ವಿಟ್ಲಾ, ಕೋಟೆಕಾರು, ಎಂ.ಕೆ. ಹುಬ್ಬಳ್ಳಿ, ಕಂಕನಾಡಿ, ನಾಗನೂರ, ಯಕ್ಸಾಂಬ, ಚೆನ್ನಮ್ಮನ ಕಿತ್ತೂರು, ಅರಭಾವಿ, ಐನಾಪೂರ, ಶೇಡಬಾಳ, ಚಿಂಚಿಲಿ, ಬೋರಗಾವ, ಕಲ್ಲೋಳಿ, ನಾಲತವಾಡ, ನಿಡಗುಂದಿ, ದೇವರಹಿಪ್ಪರಗಿ, ಆಲಮೇಲ, ಮನಗೋಳಿ, ಕೋಲ್ಹಾರ, ಕಮತಗಿ, ಬೆಳಗಲಿ, ಅಮೀನಗಡ, ಗುತ್ತಲ, ಜಾಲಿ, ತಾವರಗೇರಾ, ಕುಕನೂರ, ಭಾಗ್ಯನಗರ, ಕನಕಗಿರಿ, ಮರಿಯಮ್ಮನಹಳ್ಳಿ,ಕವಿತಾಳ, ತುರ್ವಿಹಾಳ, ಬಳಗಾನೂರ, ಸಿರವಾರ.

2021ರಲ್ಲಿ ಚುನಾವಣೆ ನಡೆಯಬೇಕಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಏಕಕಾಲಕ್ಕೆ ಚುನಾವಣಾ ದಿನಾಂಕ ನಿಗದಿಪಡಿಸಬೇಕು ಎಂಬ
ಯೋಜನೆ ಇತ್ತು. ಅದರಂತೆ, ಆಯೋಗ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ, ಅನೇಕ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಆಯೋಗಕ್ಕೆ ಈವರೆಗೆ ಬಂದಿಲ್ಲ. ನಗರಾಭಿವೃದ್ಧಿ ಇಲಾಖೆಗೆ ಪದೇ ಪದೆ ಮನವಿ ಮಾಡಲಾಗಿದೆ.
-ಡಾ. ಬಿ. ಬಸವರಾಜು,
ರಾಜ್ಯ ಚುನಾವಣಾ ಆಯುಕ್ತ

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next