ಹೊಸನಗರ: ಅರಣ್ಯ ಮತ್ತು ಭೂಹಕ್ಕಿಗಾಗಿ ನಗರ ಹೋಬಳಿ ನಾಗರಿಕರ ವೇದಿಕೆ ನಡೆಸುತ್ತಿರುವ ಧರಣಿ 6ನೇ ದಿನಕ್ಕೆ ಕಾಲಿಟ್ಟಿದ್ದು ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ.
ತಾಲೂಕಿನ ನಗರ ನಾಡ ಕಚೇರಿ ಎದುರು 5 ದಿನಗಳ ಧರಣಿ ಹಮ್ಮಿಕೊಳ್ಳಲಾಗಿತ್ತು. ಆದರೆ ಜನಪ್ರತಿನಿಧಿ, ಅಧಿಕಾರಿಗಳು ಸ್ಪಂದಿಸದಿರುವ ಹಿನ್ನೆಲೆಯಲ್ಲಿ ಹೋರಾಟವನ್ನು ಅನಿರ್ದಿಷ್ಟಾವಧಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ನಗರ ಹೋಬಳಿಯ ಅರಣ್ಯ ಹಕ್ಕು ಸಮಸ್ಯೆಗೆ ಸರ್ಕಾರವೇ ಕಾರಣ. 5 ಡ್ಯಾಂಗಳನ್ನು ನಿರ್ಮಾಣ ಮಾಡಿದ ಪರಿಣಾಮ ಜನರು ಸಮಸ್ಯೆ ಎದುರಿಸುವಂತಾಗಿದೆ. ಬಣ್ಣದ ಮಾತುಗಳ ಮೂಡಲ ಜನರನ್ನು ಒಪ್ಪಿಸಿ ಯೋಜನೆಗಳನ್ನು ಸಾಕಾರಗೊಳಿಸಿದ ಬಳಿಕ ಸರ್ಕಾರ ಈ ಭಾಗದ ಜನರನ್ನು ನಡುನೀರಲ್ಲಿ ಕೈಬಿಟ್ಟಿದೆ. ನಮ್ಮದಲ್ಲದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಾಗಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ರೈತಸಂಘದ ಅಧ್ಯಕ್ಷ ಜಿ.ವಿ.ರವೀಂದ್ರ ಮಾತನಾಡಿ, 2015 ರಿಂದ ನಿರಂತರ ಪ್ರತಿಭಟನೆ ಮಾಡಿಕೊಂಡು ಬರುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿ ಧಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅದರಲ್ಲೂ ಸರ್ಕಾರದ ಆಯಕಟ್ಟಿನ ಜಾಗದಲ್ಲಿ ಕುಳಿತ ಐಎಎಸ್ ಅಧಿಕಾರಿಗಳು ಇಲ್ಲಿಯ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಕೂಡ ಆಸಕ್ತಿ ತೋರದೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗಂಜಿ ಕುಡಿದು ಆಕ್ರೋಶ
ಕಳೆದ 6 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ನಗರ ಹೋಬಳಿ ರೈತರು ಸೋಮವಾರ ಸ್ಥಳದಲ್ಲೇ ಗಂಜಿ ಮಾಡಿ, ಅಲ್ಲೇ ಕುಡಿದು ಪ್ರತಿಭಟನೆ ಮುಂದುವರಿಸಿದ್ದಾರೆ. ದಿನೇ ದಿನೇ ಹೋರಾಟದ ಕಾವು ಹೆಚ್ಚುತ್ತಿದ್ದು ಪ್ರತಿಭಟನಾನಿರತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಮಹಿಳೆಯರು ಕೂಡ ಪ್ರತಿಭಟನೆಗೆ ಕೈಜೋಡಿಸಲು ಮುಂದಾಗಿದ್ದು ಈ ಬಾರಿ ತಾರ್ಕಿಕ ಅಂತ್ಯ ಪಡೆಯುವ ನಿಟ್ಟಿನಲ್ಲಿ ಹೋರಾಟ ಸಜ್ಜುಗೊಳಿಸಲಾಗುತ್ತಿದೆ. ಪ್ರತಿಭಟನೆಯಲ್ಲಿ ಮಲೆನಾಡು ರೈತರ ಹೋರಾಟ ವೇದಿಕೆ ಸಂಚಾಲಕ ತೀ.ನ. ಶ್ರೀನಿವಾಸ್, ನಗರ ಹೋಬಳಿ ನಾಗರಿಕರ ವೇದಿಕೆ ಸಂಚಾಲಕ ವಿ.ಜಿ. ಶ್ರೀಕರ್ ಇತರರು ಇದ್ದರು.