ಧಾರವಾಡ: ಲಾಕಡೌನ್ ನಿಂದಾಗಿ ಕುಂಠಿತಗೊಂಡ ನಗರಾಭಿವೃದ್ಧಿ ಇಲಾಖೆಯ ಕಾಮಗಾರಿಗಳನ್ನು ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕಾಮಗಾರಿಗಳ ವೇಗ ಹೆಚ್ಚಿಸುವಂತೆ ಈಗಾಗಲೇ ಸಭೆ ನಡೆಸಿ, ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ಸ್ಮಾರ್ಟ ಸಿಟಿ, ಸಿಡಿಪಿ ಯೋಜನೆ, ಯುಜಿಡಿ ಸೇರಿದಂತೆ ಇತ್ಯಾದಿ ಕಾಮಗಾರಿಗಳ ಸಾಧಕ ಬಾಧಕಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗಿದೆ ಎಂದರು.
ಹುಬ್ಬಳ್ಳಿಗೆ 1200 ಕೋಟಿ ವೆಚ್ಚದಲ್ಲಿ 24X7 ಕುಡಿಯುವ ನೀರು ಯೋಜನೆ ಸಿದ್ಧಗೊಂಡಿದ್ದು, ಆಡಳಿತಾತ್ಮಕ ಅನುಮೋದನೆ ನೀಡಿದೆ. ಕಾಮಗಾರಿ ಆರಂಭಕ್ಕೆ ಸೂಚಿಸಲಾಗಿದೆ ಎಂದರು.
ಬೆಂಗಳೂರಿಗೆ ಆದ್ಯತೆ ನೀಡಿದಂತೆ ಹುಬ್ಬಳ್ಳಿ, ಧಾರವಾಡ ಅಭಿವೃದ್ಧಿಗೂ ಹೆಚ್ಚಿನ ಒತ್ತು ಕೊಡಲಾಗಿದೆ. ಸರ್ಕಾರದಿಂದ ಸ್ಮಾರ್ಟ ಸಿಟಿಗೆ 1000 ಕೋಟಿ, ಯುಜಿಡಿಗೆ 300 ಕೋಟಿ ನೀಡಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವುದಿಲ್ಲ. ಆದರೆ, ಅದನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುವ ಬಗ್ಗೆ ಈಗಾಗಲೇ ಚರ್ಚಿಸಿದೆ ಎಂದ ಅವರು, ಆಸ್ತಿ ತೆರಿಗೆ ಹೆಚ್ಚಳ ಮಾಡುವುದು 3 ವರ್ಷಕ್ಕೊಮ್ಮೆ ಕಡ್ಡಾಯ. ಈ ಹಣವನ್ನು ಮೂಲಭೂತ ಸೌಕರ್ಯಗಳಿಗೆ ಬಳಕೆ ಮಾಡಲಾಗುವುದು ಎಂದರು.
ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಇದ್ದರು.