ಹಾಸನ: ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ದ ನೂತನ ಅಧ್ಯಕ್ಷರಾಗಿ ಜಿಲ್ಲಾ ಜೆಡಿಎಸ್ ಹಿರಿಯ ಮುಖಂಡ ಕೆ.ಎಂ.ರಾಜೇಗೌಡ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಪ್ರಾಧಿಕಾರದ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಅಧಿಕಾರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
40 ವರ್ಷಗಳ ರಾಜಕಾರಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮನ್ನು ಗುರುತಿಸಿ ಹುಡಾ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರನ್ನು ಸೂಚಿಸಿದ್ದಾರೆ. ಸಚಿವ ರೇವಣ್ಣ ಅವರ ಅಧಿಕಾರದ ಬಲ ಬಳಸಿಕೊಂಡು ನಗರದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್‌ನಲ್ಲಿದ್ದ ನಾನು ಎರಡು ಬಾರಿ ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷದೊಳಗಿನ ಭಿನ್ನ ಮತದಿಂದ ಸೋತೆ. ಆಂತಹ ಸಂದರ್ಭದಲ್ಲಿ ದೇವೇಗೌಡರು ಜೆಡಿಎಸ್‌ಗೆ ಸ್ವಾಗತಿಸಿ, ಈಗ ಹುಡಾ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಪಕ್ಷದ ಮುಖಂಡರ ನಿರೀಕ್ಷೆಯಂತೆ ಮಾದರಿ ನಗರಾಭಿವೃದ್ಧಿ ಪ್ರಾಧಿಕಾರ ಮಾಡುವ ಭರವಸೆ ನೀಡಿದರು.
ಮಾಹಿತಿ ಪಡೆದು ಗುರಿ ಪ್ರಕಟಿಸುವೆ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರ ವೇಗಕ್ಕೆ ತಕ್ಕಂತೆ ಕೆಲಸ ಮಾಡಿ ಹಾಸನ ನಗರದಲ್ಲಿ ನನೆಗುದಿಗೆ ಬಿದ್ದಿರುವ ಪ್ರಮುಖ ಮೂಲ ಸೌಕರ್ಯ ಕಾಮಗಾರಿಗಳನ್ನು ಮುಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಿತಿಗತಿ, ತುರ್ತಾಗಿ ಆಗಬೇಕಾಗಿರುವ ಯೋಜನೆಗಳ ಬಗ್ಗೆ ಇನ್ನು ಎರಡು ಮೂರು ದಿನಗಳಲ್ಲಿ ಮಾಹಿತಿ ಪಡೆದುಕೊಂಡು ನನ್ನ ಆದ್ಯತೆ, ಗುರಿಯ ಬಗ್ಗೆ ಪ್ರಕಟಿಸುವೆ ಎಂದು ರಾಜೇಗೌಡ ಹೇಳಿದರು.
ಸಂಭ್ರಮಾಚರಣೆ: ಕೆ.ಎಂ.ರಾಜೇಗೌಡ ಅಧಿಕಾರ ಸ್ವೀಕರಿಸುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಪಕ್ಷದ ಹಿರಿಯ ಮುಖಂಡ ಎಂ.ಜಿ.ದೊಡ್ಡೇಗೌಡ, ನಗರಸಭಾ ಮಾಜಿ ಅಧ್ಯಕ್ಷ ಸಯ್ಯದ್ ಅಕರ್, ಜಿಪಂ ಮಾಜಿ ಉಪಾಧ್ಯಕ್ಷರಾದ ಎಸ್.ದ್ಯಾವೇಗೌಡ, ಬೂವನಹಳ್ಳಿ ಸ್ವಾಮಿಗೌಡ, ಪಕ್ಷದ ಮುಖಂಡರಾದ ಎಚ್.ಬಿ.ಗೋಪಾಲ್, ಪ್ರೇಮಮ್ಮ,
ರೇಖಾ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಸೇವಾದಳದ ಅಧ್ಯಕ್ಷ ಮರ್ಕುಲಿ ಗೋಪಾಲೇಗೌಡ, ಬಾಲಶಂಕರ್, ಶಂಕರನಹಳ್ಳಿ ನಾಗರಾಜ್, ಅಂಬೇಡ್ಕರ್ ನಗರದ ಪುಟ್ಟರಾಜ್ ಮತ್ತಿರರ ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಹೂಡಾ ಆಯುಕ್ತ ರಮೇಶ್, ಸಿಬ್ಬಂದಿಗಳಾದ ಮಂಜುನಾಥ್, ವೆಂಕಟೇಶ್, ಎಂಜಿನಿಯರ್ ಸತ್ಯನಾರಾಯಣ ಅವರೂ ಅಧ್ಯಕ್ಷರನ್ನು ಅಭಿನಂದಿಸಿದರು.