ಕಾನ್ಪುರ: ಐಪಿಎಲ್ 2023ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿ ಅತ್ಯಂತ ಅಪರೂಪದ ಸಾಧನೆ ಮಾಡಿ ರಾತ್ರೋರಾತ್ರಿ ಹೀರೋ ಆಗಿದ್ದ ರಿಂಕು ಸಿಂಗ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದು ಯಶ್ ದಯಾಳ್ ಎಸೆತದಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ್ದ ರಿಂಕು, ಶುಕ್ರವಾರ ಸೂಪರ್ ಓವರ್ ನಲ್ಲಿ ಮೂರು ಸಿಕ್ಸರ್ ಬಾರಿಸಿ ಮಿಂಚಿದ್ದಾರೆ.
ಯುಪಿ ಟಿ20 ಲೀಗ್ ನಲ್ಲಿ ಮೀರತ್ ಮೇವ್ರಿಕ್ಸ್ ಪರವಾಗಿ ಆಡುವ ರಿಂಕು, ಕಾಶಿ ರುದ್ರಾಸ್ ವಿರುದ್ಧ ತನ್ನ ಬ್ಯಾಟಿಂಗ್ ಪವರ್ ತೋರಿದ್ದಾರೆ. ಸೂಪರ್ ಓವರ್ ನಲ್ಲಿ 17 ರನ್ ಗಳ ಅಗತ್ಯವಿದ್ದಾಗ, ಎಡಗೈ ಸ್ಪಿನ್ನರ್ ಶಿವ ಸಿಂಗ್ ವಿರುದ್ಧ ರಿಂಕು ಹ್ಯಾಟ್ರಿಕ್ ಸಿಕ್ಸರ್‌ಗಳನ್ನು ಸಿಡಿಸಿದರು. ಓವರ್ ನ ಮೊದಲ ಎಸೆತದಲ್ಲಿ ರಿಂಕು ಒಂದೇ ಒಂದು ರನ್ ಗಳಿಸಲಿಲ್ಲ ಆದರೆ ನಂತರದ ಮೂರು ಎಸೆತಗಳನ್ನು ರಿಂಕು ಚೆಂಡನ್ನು ಸಿಕ್ಸರ್ ಗೆರೆ ದಾಟಿಸಿದರು.
ಮೊದಲು 20 ಓವರ್ ಗಳಲ್ಲಿ ಮೀರತ್ ನಾಲ್ಕು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಕಾಶಿ ಏಳು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದಾಗ ಪಂದ್ಯ ಟೈ ಆಯಿತು. ಈ ವೇಳೆ ರಿಂಕು 22 ಎಸೆಗಳಲ್ಲಿ ಕೇವಲ 15 ರನ್ ಮಾಡಿದ್ದರು.
ಈ ವರ್ಷದ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರಿಂಕು ಇತ್ತೀಚೆಗೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಮೊದಲ ಬಾರಿ ರಾಷ್ಟ್ರೀಯ ತಂಡದ ಕರೆ ಪಡೆದಿದ್ದರು. ಈ ಸರಣಿಯಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.