ಬೀದರ: ಜಿಲ್ಲೆಯ ಯುವ ಜನತೆಗೆ ಅನುಕೂಲವಾಗುವಂತೆ ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯಿಂದ ನಾಗರೀಕ ಸೇವೆಗಳಿಗೆ ಸಂಬಂಧಿಸಿದ ಪರೀಕ್ಷೆಗಳ ಕುರಿತು ಅರಿವು ಮೂಡಿಸುವ ವಿನೂತನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಪರೀಕ್ಷೆಗಳ ಕುರಿತು ಅರಿವು ಮೂಡಿಸಲು ಹಿಂದಿನ ಡಿಸಿ ಡಾ. ಜಾಫರ್ ನಡೆಸಿದ ಕಾರ್ಯಕ್ರಮ ಮುಂದುವರಿಸುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ. ಸೆ.26ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2.30ರ ವರೆಗೆ ನಗರದ ರಂಗ ಮಂದಿರದಲ್ಲಿ ಕಾರ್ಯಕ್ರಮ ಜರುಗಲಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಚಾಲನೆ ನೀಡುವರು. ನಂತರ ಆಕಾಂಕ್ಷಿ ಅಭ್ಯರ್ಥಿ, ವಿದ್ಯಾರ್ಥಿಗಳನ್ನುದ್ದೇಶಿಸಿ 7 ಜನ ಐಎಎಸ್, ಇಬ್ಬರು ಐಪಿಎಸ್,ಇಬ್ಬರು ಐಆರ್‌ಎಸ್ ಹಾಗೂ ಐವರು ಕೆಎಎಸ್ ಅಧಿಕಾರಿಗಳು ಮಾತನಾಡಲಿದ್ದಾರೆ ಎಂದು ತಿಳಿಸಿದರು.
ನೋಂದಣಿ ಮಾಡಬಹುದು: ಅಂದು ರಂಗ ಮಂದಿರದಲ್ಲಿ ಬರಿ 300 ಆಸನಗಳು ಮಾತ್ರ ಇರುವುದರಿಂದ ಆಕಾಂಕ್ಷಿಗಳು ಈ ಲಿಂಕ್‌ನ್ನು
https://rb.gy/kg2lnu ಬಳಸುವ ಮೂಲಕ ನೋಂದಣಿ ಮಾಡಬಹುದು. 300ಕ್ಕಿಂತ ಹೆಚ್ಚಿನ ಆಕಾಂಕ್ಷಿಗಳು ನೋಂದಣಿ ಮಾಡಿದ್ದಲ್ಲಿ ಈ ಕಾರ್ಯಕ್ರಮವನ್ನು Youtube ಲಿಂಕ್ youtube/ civilservicesbidar ಮತ್ತು Facebook
https://www.facebook.com/ deo.bidar ಮೂಲಕ ವಿಕ್ಷೀಸಬಹುದು ಎಂದರು.
ಖಾಸಗಿ ಕಾಲೇಜುಗಳಲ್ಲಿ 63 ಸೀಟು: ಜಿಲ್ಲಾಡಳಿತ ಮನವಿ ಮೇರೆಗೆ ಜಿಲ್ಲೆಯ 63 ಖಾಸಗಿ ಪಿಯು ಕಾಲೇಜುಗಳು ತಮ್ಮ ಕಾಲೇಜುಗಳಲ್ಲಿ 803 ಸೀಟುಗಳ ಪೈಕಿ 665 ಸೀಟುಗಳನ್ನು ಉಚಿತವಾಗಿ ಬಡ ವಿದ್ಯಾರ್ಥಿಗಳಿಗೆ ನೀಡಿವೆ. ಈ ಯೋಜನೆಯೂ ಹಿಂದಿನ ಡಿಸಿ ಡಾ| ಪಿ.ಸಿ. ಜಾಫರ್ ಅವರದ್ದೇ ಆಗಿದ್ದು, ಅದನ್ನು ಎಲ್ಲರ ಅನುಮತಿ ಮೇರೆಗೆ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಹೀಗಾಗಿ ಜಿಲ್ಲೆಯ 665 ವಿದ್ಯಾರ್ಥಿಗಳು ತಮಗೆ ಬೇಕಿರುವ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಜಿಲ್ಲೆಯಲ್ಲಿ ಶಾಹೀನ್ ಒಂದೇ ಕಾಲೇಜು 108 ಸೀಟು ಉಚಿತವಾಗಿ ನೀಡಿದೆ ಎಂದು ವಿವರಿಸಿದರು.
ಹಿಂದಿನ ಡಿಸಿ ಹರ್ಷ ಗುಪ್ತಾ ಅವರು ರಿಂಗ್ ರಸ್ತೆ ಅಭಿವೃದ್ಧಿ ಪಡಿಸಿದ್ದು, ಈ ರಿಂಗ್ ರಸ್ತೆ ಸುತ್ತಲೂ ಇದೀಗ 4 ಸಾವಿರ ಸಸಿ ನೆಡಲು ಉದ್ದೇಶಿಸಲಾಗಿದೆ ಎಂದರು. ಎಸ್‌ಪಿ ಡಿ.ಎಲ್.ನಾಗೇಶ್, ಅಪರ ಡಿಸಿ ರುದ್ರೇಶ್ ಗಾಳಿ ಸುದ್ದಿಗೋಷ್ಠಿಯಲ್ಲಿದ್ದರು