Advertisement

ಯುಪಿಎಸ್ ಸಿ : ದಾವಣಗೆರೆಯ ಅವಿನಾಶ್ ವಿ.ರಾವ್ ಕರ್ನಾಟಕದಲ್ಲಿ ಪ್ರಥಮ

11:48 PM May 30, 2022 | Team Udayavani |

ದಾವಣಗೆರೆ: ಜಿಲ್ಲೆಯ ಅವಿನಾಶ್ ವಿ. ರಾವ್ ಯುಪಿಎಸ್ ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 31ನೇ, ಕರ್ನಾಟಕ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

Advertisement

ಅವಿನಾಶ್ ವಿ. ರಾವ್ ದಾವಣಗೆರೆಯಲ್ಲೇ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿಯವರೆಗೆ ವಿದ್ಯಾಭ್ಯಾಸ ಮಾಡಿದವರು. ಬೆಂಗಳೂರಿನ ನ್ಯಾಷನಲ್ ಲಾ ಕಾಲೇಜಿನಲ್ಲಿ ಲಾ ಪದವಿ ನಂತರ ಐಎಎಸ್ ಪರೀಕ್ಷೆ ಬರೆದಿದ್ದರು. ಅವಿನಾಶ್ ವಿ. ರಾವ್ ತಂದೆ ವಿಟ್ಠಲರಾವ್ ಖ್ಯಾತ ಹೋಟೆಲ್ ಉದ್ಯಮಿಯಾಗಿದ್ದಾರೆ. ಅಜ್ಜ ಆನಂದರಾವ್ ಸಹ ಹೋಟೆಲ್ ಉದ್ಯಮಿ ಆಗಿದ್ದಾರೆ.

ಅವಿನಾಶ್ ಅವಳಿ ಸಹೋದರಿ ಅರ್ಪಿತಾ ವೈದ್ಯಕೀಯ ಪದವೀಧರೆಯಾಗಿದ್ದಾರೆ. ಅವಿನಾಶ್ ರಾವ್ ಬೆಂಗಳೂರಿನ ಚಂದ್ರಾ ಲೇ ಔಟ್‌ ನಲ್ಲಿರುವ ಇನ್ ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ನ ಜಿ.ಬಿ. ವಿನಯ್ ಕುಮಾರ್ ಅವರಲ್ಲಿ ತರಬೇತಿ ಪಡೆದಿದ್ದರು.

ಇದನ್ನೂ ಓದಿ : ಯುಪಿಎಸ್ ಸಿ ಫಲಿತಾಂಶ ಪ್ರಕಟ; ಮೊದಲ 4  ರ‍್ಯಾಂಕ್ ಮಹಿಳೆಯರಿಗೆ

ಅಪೂರ್ವ ಬಾಸೂರು

Advertisement

ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಅಪೂರ್ವ ಬಾಸೂರು ಅವರು 191 ನೇ ರ‍್ಯಾಂಕ್ ಪಡೆದಿದ್ದಾರೆ. ಕೊಪ್ಪಳ ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದ ಡಾ ಶ್ರೀಕಾಂತ ಬಾಸೂರರ ಪುತ್ರಿಯಾಗಿರುವ ಇವರು 2010-11ನೇ ಸಾಲಿನಲ್ಲಿ ಗಂಗಾವತಿಯಲ್ಲಿ ಎಸ್ಎಸ್ ಎಲ್ ಸಿ ಉತ್ತೀರ್ಣರಾಗಿದ್ದರು.

ಮಂಗಳೂರಿನ ಎಕ್ಸಫರ್ಟ್ ಕಾಲೇಜಿನಲ್ಲಿ ಪಿಯುಸಿ ಅಭ್ಯಾಸ ಮಾಡಿ, ಬೆಂಗಳೂರಿನ‌ ಆರ್ ವಿ ಡೆಂಟಲ್ ಕಾಲೇಜಿನಲ್ಲಿ ಬಿಡಿಎಸ್ ಅಭ್ಯಾಸ ಮಾಡಿ,ದೆಹಲಿಯಲ್ಲಿ ಎರಡುವರೆ ವರ್ಷ ಐಎಎಸ್ ಕೋಚಿಂಗ್ ಪಡೆದಿದ್ದರು. ಬೆಂಗಳೂರಿನಲ್ಲಿ ಕುಟುಂಬದವರೊಂದಿಗೆ ಸಂಭ್ರಮ ಹಂಚಿಕೊಂಡಿದ್ದಾರೆ.

ಜನಸಾಮಾನ್ಯರ ಸೇವೆ ಮಾಡುವ ಹಂಬಲ

ಸತತ ಪರಿಶ್ರಮ ನಿರಂತರ ವಿದ್ಯಾಭ್ಯಾಸ ದಿನ ಪತ್ರಿಕೆ ನ್ಯೂಸ್ ಚಾನೆಲ್ ನೋಡುವುದು ಜಗತ್ತಿನ ಆಗುಹೋಗುಗಳ ಬಗ್ಗೆ ಗಮನ ಹರಿಸಿದರೆ ಮತ್ತು ಶ್ರದ್ಧೆಯಿಂದ ಗ್ರಂಥಾಲಯವನ್ನು ಬಳಸಿಕೊಂಡರೆ ಐಎಎಸ್ ಪಾಸ್ ಮಾಡುವುದು ಸುಲಭ. ನಾನು ನಿತ್ಯವೂ 12 ತಾಸು ವಿದ್ಯಾಭ್ಯಾಸ ಮಾಡುತ್ತಿದ್ದೆ. ಮುಂದೆ ಅತ್ಯುತ್ತಮ ತರಬೇತಿ ಪಡೆದು ಐಎಎಸ್ ಅಧಿಕಾರಿಯಾಗಿ ತಾವು ಜನಸಾಮಾನ್ಯರ ಸೇವೆ ಮಾಡುವ ಜತೆಗೆ ಈ ದೇಶದ ಸಂವಿಧಾನ ಮತ್ತು ಕಾನೂನನ್ನು ಸಂರಕ್ಷಣೆಯ ಕಾರ್ಯ ಮಾಡುವುದಾಗಿ ಅಪೂರ್ವ ಉದಯವಾಣಿ ಜತೆ ಮಾತನಾಡುತ್ತಾ ಹರ್ಷ ವ್ಯಕ್ತಪಡಿಸಿದರು .

ಡಾ. ವಿನಯ್ ಗಾದಗೆ

ಬೀದರನ ಡಾ. ವಿನಯ್ ಗಾದಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ 151ನೇ ರ‍್ಯಾಂಕ್ ಪಡೆದಿದ್ದಾರೆ. ಸತತ 5ನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ.

ಶಿರಸಿಯ ಮನೋಜ್ ಹೆಗಡೆ

ಶಿರಸಿಯ ಮನೋಜ್ ಹೆಗಡೆ 213ನೇ ರ‍್ಯಾಂಕ್ ಪಡೆಡಿದ್ದಾರೆ. ಕಠಿಣ ಪರಿಶ್ರಮ ಮತ್ತು ಗೆಲ್ಲಲೇ ಬೇಕು ಎಂಬ ಹಠದಿಂದ ಸಾಧನೆ ಸಾಧ್ಯವಾಗಿದೆ ಎಂದು ಉದಯವಾಣಿಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. 4 ನೇ ಮತ್ತು ಕೊನೆಯ ಪ್ರಯತ್ನ ಮಾಡಿದ್ದ, ದೇವರ ಮೇಲೆ ಭಾರ ಹಾಕಿದ್ದ ಎಂದು ಹೆತ್ತವರು ಭಾವುಕರಾಗಿ ಸಂಭ್ರಮ ಹಂಚಿಕೊಂಡಿದ್ದಾರೆ.

ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ

ಬೈಲಹೊಂಗಲ ದ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ 250 ನೇ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇದಲ್ಲದೆ ರಾಜ್ಯಕ್ಕೆ10  ನೇ ಸ್ಥಾನ ಪಡೆದಿರುವ ಸಾಹಿತ್ಯ ಕಳೆದ ಆರು ವರ್ಷಗಳಿಂದ ಇದಕ್ಕಾಗಿ ಕಠಿಣ ಪರಿಶ್ರಮ ಪಟ್ಟಿದ್ದರು. ಉತ್ತಮ ಸಾಧನೆ ಮಾಡಬೇಕು ಎಂಬ ಗುರಿಯೊಂದಿಗೆ ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದರು.  ಸಾಹಿತ್ಯ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಡಾ. ಪ್ರಶಾಂತ್ ಕುಮಾರ್ ಬಿ ಒ ಮೊದಲ ಪ್ರಯತ್ನದಲ್ಲೇ ಯಶಸ್ಸು

ಶಿವಮೊಗ್ಗ ಬಿಎಚ್ ರಸ್ತೆ ನಿವಾಸಿ ಡಾ. ಪ್ರಶಾಂತ್ ಕುಮಾರ್ ಬಿ ಒ ಮೊದಲ ಪ್ರಯತ್ನದಲ್ಲಿ 641 ನೇ ರ‍್ಯಾಂಕ್ ಪಡೆದಿದ್ದಾರೆ. 2020 ರಲ್ಲಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಎಂಬಿ ಬಿಎಸ್ ಪದವೀಧರರಾಗಿರುವ ಅವರು ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯ ಉಪನ್ಯಾಸಕ ಓಂಕಾರಪ್ಪ ಬಿ ಮತ್ತು ರೇಖಾ ಜೆ ಅವರ ಪುತನನಾಗಿದ್ದಾರೆ.

ನಾನು ಕೋಚಿಂಗ್ ಆಯ್ಕೆ ಮಾಡಿಕೊಳ್ಳದೆ ಸ್ವಯಂ ಅಧ್ಯಯನ ಮಾಡಿದೆ. ಸಾರ್ವಜನಿಕರಿಗೆ ದೊಡ್ಡ ಪ್ರಮಾಣದಲ್ಲಿ ಸೇವೆ ಸಲ್ಲಿಸಲು ಮತ್ತು ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಬಯಕೆ ನನ್ನದು ಎಂದಿದ್ದಾರೆ.

ಶಿರಾ ತಾಲೂಕಿಗೆ ಹೆಮ್ಮೆ
ಶಿರಾ: ತಾಲೂಕಿನ ಕಂದಾಯ ವೃತ್ತ ನಿರೀಕ್ಷಕ ವೈ.ಬಿ.ಕಾಂತಪ್ಪ ಅವರ ಪುತ್ರಿ ವೈ.ಕೆ.ಕಲ್ಪಶ್ರೀ 291ನೇ ರ್‍ಯಾಂಕ್‌ ಹಾಗೂ ತಡಕಲೂರು ಗ್ರಾಮದ ರೈತ ಮಹಾಲಿಂಗಪ್ಪ ಮತ್ತು ವಿಮಲಾಕ್ಷಿ ಅವರ ಪುತ್ರಿ ಅರುಣಾ ಅವರು 308ನೇ ರ್‍ಯಾಂಕ್‌ ಪಡೆದು ತಾಲೂಕಿಗೆ ಹೆಮ್ಮೆ ತಂದಿದ್ದಾರೆ.

ತಂದೆಯ ಆಸೆ ತೀರಿಸಿದ ವೈದ್ಯ
ಚಿತ್ರದುರ್ಗದ ಹೊಸದುರ್ಗದಲ್ಲಿ ಉಪನ್ಯಾಸಕರಾಗಿದ್ದ ತಂದೆಯ ಆಸೆಯಂತೆ ಯುಪಿಎಸ್ಸಿ ತೇರ್ಗಡೆ ಯಾಗಿದ್ದು, ಈ ಖುಷಿಯನ್ನು ಹಂಚಿಕೊಳ್ಳಲು ತಂದೆ ಈಗಿಲ್ಲ ಎಂದು 92ನೇ ರಾಂÂಕ್‌ ಪಡೆದಿರುವ ಎನ್‌.ಜೆ. ಬೆನಕ ಪ್ರಸಾದ್‌ ಬೇಸರಿಸಿದರು. ಇವರು ಪ್ರಸ್ತುತ ಬೆಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಯಾಗಿದ್ದು, 3ನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ.

ಹೆತ್ತವರೇ ಪ್ರೇರಣೆ
ತಂದೆ ಕೆನರಾ ಬ್ಯಾಂಕ್‌ನಲ್ಲಿ ಕ್ಲರ್ಕ್‌ ಹಾಗೂ ತಾಯಿ ಆರೋಗ್ಯ ಇಲಾಖೆಯಲ್ಲಿ ಎಲ್‌ಎಚ್‌ಒ ಆಗಿದ್ದು, ಇವರ ಪ್ರೇರಣೆಯಿಂದಲೇ ಈ ಸಾಧನೆ ಮಾಡಿದ್ದೇನೆ ಎಂದು 455ನೇ ರ್‍ಯಾಂಕ್‌ ಪಡೆದಿರುವ ಬಿ.ಎಂ. ರವಿನಂದನ್‌ ಹೇಳಿದರು. ಚನ್ನ ರಾಯಪಟ್ಟಣದ ಬಾಗೂರು ಎಂಬ ಹಳ್ಳಿ ನಮ್ಮ ಊರು. ಪರೀಕ್ಷೆಗೆ ಹೆತ್ತವರು ತುಂಬಾ ಪ್ರೋತ್ಸಾಹ ನೀಡಿದ್ದಾರೆ. ಕಳೆದ ಬಾರಿ ಸಂದರ್ಶನದ ವರೆಗೂ ಹೋಗಿದ್ದೆ. ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದೆ ಎಂದಿದ್ದಾರೆ.

ಬೈಲಹೊಂಗಲದ ಪ್ರತಿಭೆ
ಬೈಲಹೊಂಗಲ: ಢಮ್ಮಣಗಿ ಗಲ್ಲಿಯಲ್ಲಿರುವ ವ್ಯಾಪಾರಿ ಮಲ್ಲಿಕಾರ್ಜುನ ಆಲದಕಟ್ಟಿ ಅವರ ದ್ವಿತೀಯ ಪುತ್ರಿ ಸಾಹಿತ್ಯಾ ಹುಬ್ಬಳ್ಳಿಯಲ್ಲಿ ಎಂಜಿನಿಯರಿಂಗ್‌, ಬಿಬಿಎ ಓದಿದವರು. ದಿಲ್ಲಿಯಲ್ಲಿ ಐದು ವರ್ಷ ಯುಪಿಎಸ್‌ಸಿ ಪರೀಕ್ಷೆ ತರಬೇತಿ ಪಡೆದವರು. ಪ್ರಸ್ತುತ ದೇಶಕ್ಕೆ 250 ಹಾಗೂ ರಾಜ್ಯಕ್ಕೆ 10ನೇ ಸ್ಥಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next