ಅದು 2016-17ರ ಬಾರ್ಡರ್- ಗಾವಸ್ಕರ್ ಟ್ರೋಫಿ. ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಂದಿತ್ತು. ನಾಲ್ಕು ಪಂದ್ಯಗಳ ಸರಣಿಯದು. ಆಸೀಸ್ ನ ಅನುಭವಿ ದಾಳಿಗೆ ಸರಿಯಾದಂತಿತ್ತು ನಾಲ್ಕೂ ಪಿಚ್ ಗಳು. ಆದರೆ ಟೀಂ ಇಂಡಿಯಾದ ಆರಂಭಿಕ ಆಟಗಾರನೊಬ್ಬ ಪ್ರತಿಯೊಂದು ಪಂದ್ಯದಲ್ಲಿ ಆಸೀಸ್ ದಾಳಿಯನ್ನು ಎದುರಿಸಿ ನಿಂತ. ಸತತ ಅರ್ಧಶತಕ ಬಾರಿಸಿದ. ನೋವಿನ ಕೈಯಲ್ಲೂ ಆಡಿದ. ಟೀಂ ಇಂಡಿಯಾದ ಫ್ಯೂಚರ್ ಸೂಪರ್ ಸ್ಟಾರ್ ಎಂದು ಜನ ಹೊಗಳಿದರು. ಆರು ವರ್ಷದ ಬಳಿಕ ಕಾಂಗರೂ ತಂಡ ಮತ್ತೆ ಬಂದಿದೆ, ಆದರೆ ಈಗ ನೋಡಿದರೆ ಆತನಿಗೆ ಸದ್ಯ ತಂಡದಲ್ಲಿ ಸ್ಥಾನ ಸಿಗುವುದೇ ಅನುಮಾನ ಎನ್ನುವಂತಾಗಿದೆ. ಆ ಆಟಗಾರ ಬೇರ್ಯಾರೂ ಅಲ್ಲ ಟೀಂ ಇಂಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಏರಿಳಿತ ಕಂಡ ಕೆಎಲ್ ರಾಹುಲ್.
ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಲ್ಲಿ ಶತಕ ಬಾರಿಸಿದ ಕೇವಲ ಎರಡನೇ ಏಶ್ಯನ್ ಟೆಸ್ಟ್ ಆರಂಭಿಕ ಆಟಗಾರ ಈ ಕೆಎಲ್ ರಾಹುಲ್. ಇದನ್ನ ಬಿಟ್ಟು ಒಟ್ಟಾರೆ ಟೆಸ್ಟ್ ಸಾಧನೆ ಗಮನಿಸಿದರೆ ದೊಡ್ಡದೇನು ಕಾಣುವುದಿಲ್ಲ.
2016-17ರ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ನಾಲ್ಕು ವಿಭಿನ್ನ ಪಿಚ್ ಗಳಲ್ಲಿ ಆಡಲಾಯಿತು. ಅವುಗಳಲ್ಲಿ ಮೂರು ಭಾರಿ ಸವಾಲು ನೀಡುವಂತಹ ಪಿಚ್ ಗಳು. ರಾಹುಲ್ ಆ ದಶಕದಲ್ಲಿ ಭಾರತದಲ್ಲಿ ಬೌಲಿಂಗ್ ಮಾಡಲು ಅತ್ಯುತ್ತಮ ಮತ್ತು ಅತ್ಯಂತ ಸಮತೋಲಿತ ದಾಳಿಯನ್ನು ಎದುರಿಸಿದರು. ಅವರು ಆ ಸರಣಿಯಲ್ಲಿ 64, 10, 90, 51, 67, 60 ಮತ್ತು 51* ಸ್ಕೋರ್ ಮಾಡಿದರು. ಅಲ್ಲದೆ ಸ್ಟೀವನ್ ಸ್ಮಿತ್ ಮತ್ತು ಚೇತೇಶ್ವರ ಪೂಜಾರ ನಂತರ ಮೂರನೇ ಅತಿ ಹೆಚ್ಚು ರನ್ ಗಳಿಸಿದವರಾಗಿ ಮೂಡಿ ಬಂದರು. ಇದೇ ವೇಳೆ ರಾಹುಲ್ 14 ಇನ್ನಿಂಗ್ಸ್ ಗಳಲ್ಲಿ ಹತ್ತು ಬಾರಿ ಅರ್ಧ ಶತಕ ಬಾರಿಸಿದ ಸಾಧನೆ ಮಾಡಿದ್ದರು.
ಆಗ ರಾಹುಲ್ ಗೆ 25 ವರ್ಷ. ಆಗಲೇ ಬಹುತೇಕ ಸಾಧನೆ ಮಾಡಿದ್ದರು ರಾಹುಲ್. ಮೂರು ಮಾದರಿ ಕ್ರಿಕೆಟ್ ನಲ್ಲಿ ಅವರು ಅದಾಗಲೇ ಶತಕ ಸಿಡಿಸಿದ್ದರು. ಭಾರತದ ಭವಿಷ್ಯ ಎಂದೇ ಕರೆಯಲ್ಪಟ್ಟಿದ್ದರು. ಟೀಂ ಇಂಡಿಯಾದ ಮುಂದಿನ ನಾಯಕ ಎನ್ನಲಾಗಿತ್ತು.
ಈ ಆರು ವರ್ಷದ ನಡುವಿನ ಅವಧಿಯಲ್ಲಿ ರಾಹುಲ್ ಹಲವು ಸಾಧನೆ ಮಾಡಿದ್ದರು. 14 ಎಸೆತದಲ್ಲಿ ಐಪಿಎಲ್ ಫಿಫ್ಟಿ ಗಳಿಸಿದರು, ಅದೇ ವೇಳೆ ಲಾರ್ಡ್ ಮೈದಾನದಲ್ಲಿ ಮೊದಲ ಬೌಂಡರಿ ಗಳಿಸಲು ಬರೋಬ್ಬರಿ 108 ಎಸೆತ ತೆಗೆದುಕೊಂಡಿದ್ದರು. ಮಿಡಲ್ ಸ್ಟಂಪ್ ನಿಂದ ಅದ್ಭುತ ಫ್ಲಿಕ್ ಗಳನ್ನು ಬಾರಿಸಿದರು. ಪೋರ್ತ್ ಸ್ಟಂಪ್ ಔಟ್ ಸ್ವಿಂಗರ್ ಎಸೆತವನ್ನು ಅಷ್ಟೇ ಅಂದವಾಗಿ ಬಿಟ್ಟು ಬಿಡುವ ಕಲೆಯೂ ಸಿದ್ದಿಸಿತ್ತು. ಸೆಂಚೂರಿಯನ್ ನಲ್ಲಿ ಶತಕ ಹೊಡೆದರು, ಟೆಸ್ಟ್ ನಾಯಕರಾದರು. ಆದರೆ ಈ ತಂಡದಲ್ಲಿ ಸ್ಥಾನ ಸಿಗುವುದೇ ಕಷ್ಟವಾಗಿದೆ. ಕಾರಣ ಅಸ್ಥಿರತೆ.
ಅತೀ ಹೆಚ್ಚು ಟಿ20 ಪಂದ್ಯವಾಡುವ ಈ ಸಮಯದಲ್ಲಿ ಟೆಸ್ಟ್ ಮಾದರಿಗೆ ಒಗ್ಗಿಕೊಳ್ಳುವುದು ಕಷ್ಟ. ವಿರಾಟ್ ಕೊಹ್ಲಿ ಅವರು ಟಿ20 ಮತ್ತು ಟೆಸ್ಟ್ ನಲ್ಲಿ ಸಂಪೂರ್ಣ ಭಿನ್ನ ರೀತಿಯಲ್ಲೇ ಆಡುತ್ತಾರೆ. ರಾಹುಲ್ ಅಲ್ಲಿ ಹಿಂದೆ ಬಿದ್ದರು. 2018ರಲ್ಲಿ ರಾಹುಲ್ ಅವರ ಐಪಿಎಲ್ ಸ್ಟ್ರೈಕ್ ರೇಟ್ 158.41, ಆದರೆ ಆ ವರ್ಷ 12 ಟೆಸ್ಟ್ ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 468 ರನ್. ಇಂತಹ ಪ್ರದರ್ಶನಗಳೇ ಅವರನ್ನು ಆರಕ್ಕೇರದೆ ಮೂರಕ್ಕಿಳಿಯದಂತೆ ಮಾಡಿದ್ದು.
2021ರಲ್ಲಿ ರಾಹುಲ್ ಟೆಸ್ಟ್ ಕ್ರಿಕೆಟ್ ಗೆ ಪುನಾರಾರಂಭ ಮಾಡಿದರು. ಆ ವರ್ಷವೇ ರಾಹುಲ್ ಲಾರ್ಡ್ಸ್ ಮತ್ತು ಸೆಂಚೂರಿಯನ್ ನಲ್ಲಿ ಶತಕ ಬಾರಿಸಿದರು. ಐಪಿಎಲ್ ನಲ್ಲೂ ತನ್ನ ಬ್ಯಾಟಿಂಗ್ ಶೈಲಿ ಬದಲಾವಣೆ ಮಾಡಿಕೊಂಡರು. ಆರಂಭದಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ದೊಡ್ಡ ಇನ್ನಿಂಗ್ಸ್ ಕಟ್ಟತೊಡಗಿದರು. ಇದರಿಂದ ಟೀಕೆಗಳೂ ಬಂದವು, ಅದು ಬೇರೆ ವಿಚಾರ. 2022ರಲ್ಲಿ ಕೊಹ್ಲಿ ರಾಜೀನಾಮೆ ನೀಡಿದ ಬಳಿಕ, ರೋಹಿತ್ ಅನುಪಸ್ಥಿತಿಯಲ್ಲಿ ಟೆಸ್ಟ್ ತಂಡವನ್ನು ಮುನ್ನಡೆಸುವ ಅವಕಾಶ ಕೂಡಾ ಪಡೆದರು. ಬಾಂಗ್ಲಾದೇಶ ವಿರುದ್ಧದ ಸರಣಿಗೂ ರಾಹುಲ್ ನಾಯಕರಾದರು. ಆದರೆ ಅವರ ಬ್ಯಾಟಿಂಗ್ ಮತ್ತೆ ಕೈಕೊಟ್ಟಿತ್ತು. 2022ರಲ್ಲಿ ಆಡಿದ ಎಂಟು ಇನ್ನಿಂಗ್ಸ್ ಗಳಲ್ಲಿ ರಾಹುಲ್ ಕೇವಲ 17.22ರ ಸರಾಸರಿಯಲ್ಲಿ ರನ್ ಗಳಿಸಿದರು.
ಟೆಸ್ಟ್ ತಂಡದ ನಾಯಕತ್ವ ವಹಿಸಿದ್ದರು ತಂಡದಲ್ಲಿನ್ನೂ ರಾಹುಲ್ ಸ್ಥಾನ ಗಟ್ಟಿಯಾಗಿಲ್ಲ. ಹೊಸ ಆಟಗಾರರು ಅಬ್ಬರಿಸುತ್ತಿರುವಾಗ ರಾಹುಲ್ ತನ್ನ ನೈಜ ಪ್ರತಿಭೆ ಪ್ರದರ್ಶಿಸಬೇಕಿದೆ. ಮರಳಿ ಮಿಂಚಬೇಕಿದೆ.