Advertisement

ಸಹನೆಯಿಂದ ಸಾಗಿದರೆ ಮುಳ್ಳಿನ ಹಾದಿಯೂ ಹೂವಿನ ಹಾದಿ

03:13 PM Apr 15, 2021 | Team Udayavani |

ಸುಖ ದುಃಖಗಳು ವ್ಯಕ್ತಿತ್ವದ ಮಾನಸಿಕ ಅನುಭೂತಿ. ಅವು ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತದೆ.

Advertisement

ಆದ್ದರಿಂದ ಅವು ಒಂದು ನಾಣ್ಯದ ಎರಡು ಮುಖಗಳಂತೆ. ಕಷ್ಟ ಸುಖಗಳ ಸಮ್ಮಿಲನವೇ ಬದುಕು. ಜೀವನದಲ್ಲಿ ಕಷ್ಟ ಸುಖಗಳು ಬರುತ್ತವೆ. ಹೋಗುತ್ತಲೂ ಇರುತ್ತವೆ. ಸುಖ ಮಾತ್ರ ಬರಬೇಕೆಂದರಾಗದು, ಅದೇ ರೀತಿ ಬಂದ ಕಷ್ಟಗಳು ತತ್‌ಕ್ಷಣ ಕರಗಬೇಕೆಂದರೂ ಸಹ ಸಾಧ್ಯವಿಲ್ಲ.

ವಾತಾವರಣದಲ್ಲಿ ಬೇಸಗೆ, ಮಳೆ, ಚಳಿಗಾಲ, ಒಂದರ ಅನಂತರ ಮತ್ತೂಂದು ಬದಲಾಗುತ್ತಲೆ ಇರುತ್ತದೆ. ಅದೇ ರೀತಿ ಜೀವನದಲ್ಲಿ ಕಷ್ಟ ಸುಖಗಳು ಸಾಮಾನ್ಯ.

ಓರ್ವ ಮಟ ಮಟ ಮಧ್ಯಾಹ್ನದಲ್ಲಿ ಕಾಲಿಗೆ ಪಾದರಕ್ಷೆ ಇಲ್ಲದೆ ನಡೆದ ಕಾಲು ಸುಡುವಾಗ ಅಯ್ಯೋ ನನಗೆ ಪಾದರಕ್ಷೆ ಇಲ್ಲವಲ್ಲ, ಎಲ್ಲರಿಗೂ ಇದೆ. ಆದರೆ ನನಗಿಲ್ಲ ಎಂದು ಬೇಸರಪಟ್ಟ. ಸ್ವಲ್ಪ ಸಮಯದ ಬಳಿಕ ದೇಗುಲವನ್ನು ತಲುಪಿದ. ಅಲ್ಲಿ ಕಾಲಿಲ್ಲದ ಭಿಕ್ಷುಕ ಭಿಕ್ಷೆ ಬೇಡುತ್ತಿದ್ದ. ಆಗ ತನಗೆ ಚಪ್ಪಲಿ ಇಲ್ಲದೇ ಇದ್ದರೂ ಕಾಲಿವೆ ಎಂದು ನೆಮ್ಮದಿ ಹೊಂದಿದ.

ಕಷ್ಟಗಳು ನಿನ್ನ ಶತ್ರುಗಳಲ್ಲಿ ನಿನ್ನ ಬಲ ಮತ್ತು ಬಲಹೀನತೆಗಳನ್ನು ತಿಳಿಸಿಕೊಡುವ ನಿಜವಾದ ಸ್ನೇಹಿತ. ಶ್ರಮ ದೇಹಕ್ಕೆ ಹೇಗೆ ಒಳಿತನ್ನು ಉಂಟು ಮಾಡುತ್ತದೆಯೋ ಅದೇ ರೀತಿ ಕಷ್ಟಗಳು ಬದುಕಿಗೆ ಬಲ ನೀಡುತ್ತದೆ. ಬಂಗಾರ ಕುಲುಮೆ ನೋಡಿ ಹೆದರದು ಬದಲಾಗಿ ಅದರಲ್ಲಿ ಬಿಸಿಯಾಗಿ, ಕರಗಿ ಮಾಲಿನ್ಯ ದೂರ ಮಾಡಿಕೊಂಡು ಹೊಳಪು ಹೆಚ್ಚಿಸಿಕೊಳ್ಳುತ್ತದೆ. ಅದೇ ರೀತಿ ಉತ್ತಮರು ಸಹ ಕಷ್ಟಕ್ಕೆ ಕುಗ್ಗರು.

Advertisement

ಆ ಅನುಭವದಿಂದ ಪಾಠ ಕಲಿತು, ನಮ್ಮಲ್ಲಿರುವ ಲೋಪಗಳನ್ನು ದೂರ ಮಾಡಿ, ಬದುಕು ಸರಿಪಡಿಸಿಕೊಂಡು ಮತ್ತಷ್ಟು ಉತ್ತಮವಾಗಿ ಜೀವನ ಕಟ್ಟಿಕೊಳ್ಳಬೇಕು. ಕಷ್ಟಗಳು ಸುತ್ತುವರೆದಾಗ ಧೈರ್ಯ ತೆಗೆದುಕೊಳ್ಳಬೇಕು. ರಸ್ತೆ ಮೇಲೆ ನಡೆಯುವಾಗ ನಾಯಿಗಳು ಹಿಂಬಾಲಿಸಿದಾಗ ನೀವು ಓಡಲು ಆರಂಭಿಸಿದರೆ ಅವುಗಳು ನಿಮ್ಮ ಹಿಂದೆ ಬರುತ್ತದೆ. ಆದರೆ ನೀವು ಅವುಗಳನ್ನು ಹೆದರಿಸಿದರೆ ಬೆದರಿ ಓಡಿ ಹೋಗುತ್ತದೆ.

ಕಷ್ಟ ಬಂದಾಗ, ನೋವಾದಾಗ ಅದರಿಂದ ದೂರ ಹೋಗುವ, ಊಹಿಸಿದ್ದು ನಡೆಯತ್ತದೆ ಎಂದು ಚಿಂತಿಸುತ್ತಾ ಪಲಾಯನವಾದಿಯಾಗಬಾರದು.

ಧೈರ್ಯದಿಂದ ಎದುರಿಸಬೇಕು. ಆಗ ಬಯಸಿದ್ದು, ಸಾಧಿಸಬಹುದು. ಜೀವನವನ್ನು ಖುಷಿಯಾಗಿ ಕಳೆಯಬಹುದು. ಶ್ರೀ ರಾಮಚಂದ್ರ ಅರಣ್ಯವಾಸದ ಕಷ್ಟಗಳನ್ನು ತೊಂದರೆ ಎಂದು ತಿಳಿಯದೆ ಇಷ್ಟಪಟ್ಟು ಅನುಭವಿಸಿದ್ದರಿಂದ ಗೆಲುವು ಸುಲಭವಾಗಿ ದೊರಕಿತು. ಇದರಿಂದ ವಿಜಯಲಕ್ಷ್ಮೀ, ಸೀತಾಮಹಾಲಕ್ಷ್ಮೀ, ರಾಜ್ಯ ಲಕ್ಷ್ಮೀಯನ್ನು ಹೊಂದಲು ಸಾಧ್ಯವಾಯಿತು.

ಪ್ರತಿಯೊಬ್ಬರ ಬದುಕು ಹೂವಿನ ಹಾಸಿಗೆಯಲ್ಲ, ಅಲೆಗಳಿಲ್ಲದೆ ಸಮುದ್ರವಿಲ್ಲ, ಮುಳ್ಳಿಲ್ಲದ ಗುಲಾಬಿಯಿಲ್ಲ,ಅದೇ ರೀತಿ ಸಮಸ್ಯೆಗಳಿಲ್ಲದೆ ಬದುಕಿಲ್ಲ ಜೀವನದಲ್ಲಿ ಸುಖ ಸಂತೋಷಗಳು ಮಾತ್ರವಲ್ಲ ದುಃಖ ಕಷ್ಟಗಳನ್ನು ಸಹಿತ ಆನಂದದಿಂದ ಸಹಿಸುವುದನ್ನು ಕಲಿತುಕೊಳ್ಳಬೇಕು. ಮರದ ರೆಂಬೆಗಳನ್ನು ಕತ್ತರಿಸಿದರೂ ಸಹ ಅವು ಯಾವ ರೀತಿ ಚಿಗುರುತ್ತದೆಯೋ ಅದೇ ರೀತಿ ಕಷ್ಟಗಳಿಗೆ ಹೆದರದೇ ಮುನ್ನುಗ್ಗಬೇಕು. ಕತ್ತಲು ಶಾಶ್ವತವಲ್ಲ ಬೆಳಕು ಬಂದೇ ಬರುತ್ತದೆ.

ಕಲ್ಲು ವರ್ಷಾನುಗಟ್ಟಲೇ ನೀರಿನಲ್ಲಿದ್ದರೂ ಸಹಿತ ಅದು ಮೆತ್ತಗೇ ಆಗುವುದೇ ಇಲ್ಲ, ಅದೇ ರೀತಿ ಕಷ್ಟಗಳೆಷ್ಟೆ ಬಂದರೂ ಸಹಿತ ಎದುರಿಸಿ ನಿಲ್ಲುವಂತವರಾಗಬೇಕು.ಯಾರು ಕಷ್ಟ-ಸುಖ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುತ್ತಾರೋ ಅವರೇ ಸ್ಥಿತ ಪ್ರಜ್ಞರು. ಬದುಕೆಂದರೆ ಕಲಿಯುವುದರ ಮೂಲಕ ಬದಲಾವಣೆ ಮಾಡಿಕೊಳ್ಳುವುದು. ನಾವು ಈ ಪ್ರಪಂಚವನ್ನು ಸ್ವರ್ಗವನ್ನಾಗಲಿ ನರಕವನ್ನಾಗಲಿ ಮಾಡಿಕೊಳ್ಳಬಹುದು.

ಒಂದು ವೇಳೆ ಬದುಕು ಮುಳ್ಳಿನ ಹಾದಿ ಆದರೂ ಸಹಿತ ಸಹನೆಯಿಂದ ಸಾಗಿದರೆ ಅದು ಹೂವಿನ ಹಾದಿ ಆಗುತ್ತದೆ. ಎಲ್ಲವೂ ನಮ್ಮ ಕೈಯಲ್ಲಿ ಇವೆ. ನಮ್ಮ ಬದುಕಿನ ಗಾಡಿ ನಡೆಸುವ ಚಕ್ರ ನಮ್ಮಲ್ಲೇ ಇದೆ.


ಪ್ರಥ್ವಿನಿ ಡಿ’ಸೋಜಾ, ಆಳ್ವಾಸ್‌ ಕಾಲೇಜು, ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next