Advertisement

Uppunda: ಕಿಂಡಿ ಅಣೆಕಟ್ಟು ಮಣ್ಣು ಕುಸಿದು ಕಂದಕ

03:38 PM Jun 21, 2023 | Team Udayavani |

ಉಪ್ಪುಂದ: ಉಪ್ಪುಂದ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಿರು ಸೇತುವೆಯ ಮಣ್ಣು ಕುಸಿದು ಹೋಗಿದ್ದು ದುರಸ್ತಿ ಕುರಿತು ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ.

Advertisement

ಉಪ್ಪುಂದ ಗ್ರಾಮದ 4ನೇ ವಾರ್ಡ್‌ನ ಬ್ಯಾಲಿ ಉಪಾಧ್ಯಾಯರ ಕೇರಿಗಳಿಗೆ ಸಂಪರ್ಕ ಕೊಂಡಿಯಾಗಿದ್ದ ಕಿಂಡಿ ಅಣೆಕಟ್ಟಿನ ಸೇತುವೆಯ ಮೇಲಿನ ಮಣ್ಣು ಕುಸಿದು ಹೋಗಿದ್ದು ಹಾಗೂ ಉಪ್ಪು ನೀರು ಹಾವಳಿ ತಡೆಗಟ್ಟಲು ಅಳವಡಿರುವ ಹಲಗೆ ಹಾಳಾಗಿದ್ದು ಇದರಿಂದಾಗುವ ಸಮಸ್ಯೆಗಳ ಕುರಿತು ಉಪ್ಪುಂದ ಗ್ರಾಮ ಪಂಚಾಯತ್‌ಗೆ ಮನವಿ ಮಾಡಿದರೂ ದುರಸ್ತಿಗೆ ಮುಂದಾಗಿಲ್ಲ.

2 ವರ್ಷಗಳ ಹಿಂದೆ ಮನವಿ
ಅಮ್ಮನವರತೊಪ್ಪು ಮೂಲಕ ಬ್ಯಾಲಿ ಉಪಾಧ್ಯಾಯರ ಕೇರಿಯನ್ನು ಸಂಪರ್ಕಿಸುವ ಪ್ರಮುಖ ಕಿರು ಕಿಂಡಿ ಅಣೆಕಟ್ಟಿನ ಮಧ್ಯದಲ್ಲಿ ಎರಡು ವರ್ಷಗಳ ಹಿಂದೆಯೇ ಕುಸಿತ ಉಂಟಾಗಿತ್ತು. ನಿತ್ಯ ಶಾಲಾ ಮಕ್ಕಳು ಸೇರಿದಂತೆ ನೂರಾರು ಜನರು ಸಂಚರಿಸುವುದರಿಂದ ಸಂಭವನೀಯ ಅಪಾಯದ ಸಾಧ್ಯತೆಯ ಬಗ್ಗೆ ಸ್ಥಳೀಯಾಡಳಿತದ ಗಮನಕ್ಕೆ ತರಲಾಗಿತ್ತು. ಕಳೆದ ಮಳೆಗಾಲದಲ್ಲಿ ಮಣ್ಣಿನ ಕುಸಿತ ಹೆಚ್ಚಾಗಿದ್ದು ದೊಡ್ಡ ಕಂದಕ ಸೃಷ್ಟಿಯಾಗಿರುವುದು ನಾಗರಿಕರ ಆತಂಕ ಹೆಚ್ಚಾಗಲು ಕಾರಣವಾಗಿದೆ. ಈ ಭಾಗದ ವಿದ್ಯಾರ್ಥಿಗಳು ಬೈಂದೂರು, ಉಪ್ಪುಂದ, ಕುಂದಾಪುರ ಶಾಲಾ-ಕಾಲೇಜುಗಳಿಗೆ ತೆರಳುತ್ತಿರುವುದರಿಂದ ಮಳೆಗಾಲದಲ್ಲಿ ಮಣ್ಣು ಮತ್ತಷ್ಟು ಸಡಿಲಗೊಂಡು ಕುಸಿತವಾಗಿ ಅನಾಹುತಗಳು ಸಂಭವಿಸಿದರೆ ಹೊಣೆ ಯಾರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪ್ಪು ನೀರು ನುಗ್ಗುವ ಭೀತಿ
ಈ ಪ್ರದೇಶದಲ್ಲಿ ಸುಮಾರು 25 ಎಕ್ರೆ ಹೆಚ್ಚು ಕೃಷಿ ಭೂಮಿ ಇದ್ದು ಸಮುದ್ರದ ಉಪ್ಪು ನೀರು ಕೃಷಿ ಭೂಮಿಗಳಿಗೆ ನುಗ್ಗುವ ಆತಂಕ ರೈತರದ್ದು. ಉಪ್ಪು ನೀರು ತಡೆ ಗಟ್ಟಲು ಕಿಂಡಿ ಅಣೆಕಟ್ಟಿಗೆ ಅಳವಡಿಸಿರುವ ಹಲಗೆಗಳು ಸಂಪೂರ್ಣ ಹಾಳಾಗಿದ್ದು ಸ್ಥಳೀಯಾಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಬಾರಿ ರೈತರು ಮತ್ತೆ ಕೃಷಿ ಚಟುವಟಿಕೆ ಆರಂಭಿಸಿದ್ದು ಕಿಂಡಿ ಅಣೆಕಟ್ಟಿಗೆ ಸಮರ್ಪಕವಾದ ಹಲಗೆಗಳನ್ನು ಹಾಕದಿದ್ದರೆ ಉಪ್ಪು ನೀರು ಗದ್ದೆಗಳಿಗೆ ನುಗ್ಗುತ್ತದೆ, ಇನ್ನು ಸಮುದ್ರ ತೀರದಲ್ಲಿ ತೂಫಾನ್‌ ಸಂದರ್ಭ ಕೃತಕ ನೆರೆ ಉಂಟಾಗುವ ಸಾಧ್ಯತೆ ಇರುತ್ತದೆ. ಆ ಸಮಯದಲ್ಲಿ ಹಲಗೆಗಳು ವ್ಯವಸ್ಥಿತವಾಗಿ ಇಲ್ಲದಿದ್ದರೆ ಕೃತಕ ನೆರೆ ಉಂಟಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಅಳತೆ ಮಾಡಿ 5 ತಿಂಗಳು
ಹಲಗೆಗಳ ಅಗತ್ಯ, ಕಂದಕದ ದುರಸ್ತಿ ಮಾಡುವಂತೆ ಅರ್ಜಿ ನೀಡಿ ಎರಡು ವರ್ಷಗಳು ಕಳೆದ ಬಳಿಕ 5 ತಿಂಗಳ ಹಿಂದೆ ಕಾಮಗಾರಿಗಾಗಿ ಅಳತೆ ಮಾಡಿ ಹೋಗಿದ್ದರು. ಬಳಿಕ ಮತ್ತೆ ಈ ಕಡೆಗೆ ತಲೆ ಹಾಕಿಲ್ಲ ಎನ್ನುವುದು ಸ್ಥಳೀಯರ ದೂರು. ಮಳೆಗಾಲದಲ್ಲಿ ಸಮಸ್ಯೆಗಳು ಉಂಟಾಗುವುದರಿಂದ ಜನಪ್ರತಿನಿಧಿ ಗಳು ಶೀಘ್ರ ಕ್ರಮಕೈಗೊಳ್ಳಬೇಕು ಎಂಬುದು ಇಲ್ಲಿನವ‌ರ ಆಗ್ರಹವಾಗಿದೆ.

Advertisement

ಎರಡು ವರ್ಷಗಳ ಹಿಂದೆ ಮಣ್ಣು ಕುಸಿದು ಕಂದಕ ಉಂಟಾಗಿತ್ತು. ಹಲಗೆಗಳು ಹಾಳಾಗಿದ್ದು ಹೊಸ ಹಲಗೆಗೆ ಹಾಗೂ ಕಿಂಡಿ ಅಣೆಕಟ್ಟಿನ ದುರಸ್ತಿಗೆ ಮನವಿ ಸಲ್ಲಿಸಿ, ನಿರಂತರವಾಗಿ ಜಲಪ್ರತಿನಿಧಿಗಳ ಗಮನಕ್ಕೆ ತಂದರೂ ಕೆಲಸವಾಗಿಲ್ಲ, ಹೊಂಡದಿಂದ ಸಂಚಾರಕ್ಕೆ ತೊಂದರೆ ಆಗುತ್ತಿದ್ದು, ಹಲಗೆ ಸಮಸ್ಯೆಯಿಂದ ಉಪ್ಪು ನೀರು ಗದ್ದೆಗಳಿಗೆ ನುಗ್ಗುತ್ತದೆ. ಸ್ಥಳೀಯಾಡಳಿತ ಆದಷ್ಟು ಬೇಗ ದುರಸ್ತಿಗೆ ಮಾಡಿಕೊಡಬೇಕು.
 -ಮುತ್ತಯ್ಯ ಪೂಜಾರಿ,
ಸ್ಥಳೀಯ ನಿವಾಸಿ

ಸಮಸ್ಯೆಗಳ ಬಗ್ಗೆ ಗಮನಕ್ಕೆ ಇದ್ದು ಹಲಗೆ ಹಾಗೂ ಕಿಂಡಿ ಅಣೆಕಟ್ಟಿನ ದುರಸ್ತಿಗೆ ಕ್ರಿಯಾಯೋಜನೆಯಲ್ಲಿ ಅನುದಾನ ಇಟ್ಟಿದ್ದು, ಕಾಮಗಾರಿ ನಡೆಸಲು ವಿಳಂಬವಾಗಿದೆ. ಈ ಕುರಿತು ತುರ್ತು ಗಮನ ಹರಿಸಿ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗುವುದು.
-ಲಕ್ಷ್ಮೀ ಖಾರ್ವಿ, ಅಧ್ಯಕ್ಷರು ಗ್ರಾ.ಪಂ. ಉಪ್ಪುಂದ.

Advertisement

Udayavani is now on Telegram. Click here to join our channel and stay updated with the latest news.

Next